×
Ad

ಸಹಾಯಕ ಲೆಕ್ಕಾಧಿಕಾರಿಗಳ ಜೇಷ್ಠತಾ ಪಟ್ಟಿ ರದ್ದು ಕೋರಿದ ಅರ್ಜಿ; ಸರಕಾರ, ಕೆಪಿಟಿಸಿ‌ಎಲ್‌ಗೆ ಹೈಕೋರ್ಟ್ ನೋಟಿಸ್

Update: 2025-09-23 21:02 IST

ಬೆಂಗಳೂರು : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ (ಕೆಪಿಟಿಸಿಎಲ್) ಕಾರ್ಯನಿರ್ವಹಿಸುತ್ತಿರುವ ಸಹಾಯಕ ಲೆಕ್ಕಾಧಿಕಾರಿಗಳಿಗೆ ಬಡ್ತಿ ನೀಡಲು ಸಿದ್ದಪಡಿಸಲಾಗಿರುವ ಸಾಮಾನ್ಯ ಜೇಷ್ಠತಾ ಪಟ್ಟಿಯನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಇದೇ ವೇಳೆ, ಜೇಷ್ಠತಾ ಪಟ್ಟಿಗೆ ತಡೆ ನೀಡಬೇಕೆಂಬ ಅರ್ಜಿದಾರರ ಮನವಿ ಪರಿಗಣಿಸಲು ನ್ಯಾಯಪೀಠ ನಿರಾಕರಿಸಿತಾದರೂ, ಜೇಷ್ಠತಾ ಪಟ್ಟಿ ಅನುಸಾರ ನೀಡಲಾಗುವ ಬಡ್ತಿ ಪ್ರಕ್ರಿಯೆಯು ಅರ್ಜಿ ಸಂಬಂಧ ಹೈಕೋರ್ಟ್ ನೀಡುವ ಅಂತಿಮ ತೀರ್ಪಿಗೆ ಒಳಪಡಲಿದೆ ಎಂದು ಸ್ಪಷ್ಟಪಡಿಸಿದೆ.

2025ರ ಮೇ 29ರಂದು ಸಿದ್ದಪಡಿಸಲಾಗಿರುವ ಸಾಮಾನ್ಯ ಜೇಷ್ಠತಾ ಪಟ್ಟಿ ರದ್ದು ಕೋರಿ ಕೆಪಿಟಿಸಿಎಲ್ ಮಡಿಕೇರಿ ಉಪ ವಿಭಾಗದಲ್ಲಿ ಸಹಾಯಕ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಎನ್.ಎಂ. ದರ್ಶನ್ ಸೇರಿ ರಾಜ್ಯದ ವಿವಿಧ ಉಪವಿಭಾಗಳಲ್ಲಿ ಸಹಾಯಕ ಲೆಕ್ಕಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ 54 ಮಂದಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಚ್.ಟಿ. ನರೇಂದ್ರಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕೆಪಿಟಿಸಿಎಲ್ ಆಡಳಿತ ಮತ್ತು ಮಾನಸಂಪನ್ಮೂಲ ವಿಭಾಗದ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿತು.

ಅರ್ಜಿದಾರರ ಮನವಿ ಏನು?

ಯಾವುದೇ ಅರ್ಹತಾ ಪರೀಕ್ಷೆ ಬರೆಯದಿದ್ದರೂ ಮತ್ತು ಬಡ್ತಿ ಹೊಂದಲು ಒಂದು ವರ್ಷ ಪರೀಕ್ಷಾರ್ಥ (ಪ್ರೊಬೇಷನರಿ) ಅವಧಿ ಪೂರ್ಣಗೊಳಿಸದವರನ್ನೂ ಜೇಷ್ಠತಾ ಪಟ್ಟಿಯಲ್ಲಿ ಸೇರಿಸಲಾಗಿದೆ. ಅರ್ಜಿದಾರರ ಆಕ್ಷೇಪಣೆಗಳನ್ನು ಪರಿಗಣಿಸಲಾಗಿಲ್ಲ. ಅಲ್ಲದೇ ನೇರ ನೇಮಕಾತಿ ಹಾಗೂ ಬಡ್ತಿಗೆ ಸಂಬಂಧಿಸಿದಂತೆ ವೃಂದ ಮತ್ತು ನೇಮಕಾತಿಗೆ ಮಾಡಿರುವ ತಿದ್ದುಪಡಿಗಳು ನಿಯಮಬಾಹಿರವಾಗಿದೆ. ಆದ್ದರಿಂದ, ಜೇಷ್ಠತಾ ಪಟ್ಟಿ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News