×
Ad

ಸರಕಾರಗಳಿಂದ ಆರ್ಥಿಕ ನೆರವು ಪಡೆಯುವ ಸಹಕಾರ ಸಂಘಗಳ‌ ಸಿಬ್ಬಂದಿಯೂ ಭ್ರಷ್ಟಾಚಾರ ನಿಗ್ರಹ ಕಾಯ್ದೆ ವ್ಯಾಪ್ತಿಗೆ : ಹೈಕೋರ್ಟ್

Update: 2025-10-11 22:53 IST

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಆರ್ಥಿಕ ನೆರವು ಪಡೆದುಕೊಳ್ಳುವ ಸಹಕಾರ ಸಂಘದ ಸಿಬ್ಬಂದಿಯೂ ಭ್ರಷ್ಟಾಚಾರ ನಿಗ್ರಹ (ಪಿಸಿ) ಕಾಯ್ದೆ ವ್ಯಾಪ್ತಿಗೆ ಬರಲಿದ್ದಾರೆ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್‌, ಹಾಸನ ಜಿಲ್ಲೆಯ ಹಿರೇಕಡಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಸಿ.ಎ. ಕೀರ್ತಿಕುಮಾರ್‌ ವಿರುದ್ಧ ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರಿಗೆ ಅನುಮತಿ ನೀಡುವ ಸಂಬಂಧ 1 ತಿಂಗಳೊಳಗೆ ನಿರ್ಣಯ ಕೈಗೊಳ್ಳುವಂತೆ ಸಂಘಕ್ಕೆ ನಿರ್ದೇಶಿಸಿದೆ.

ಸಿ.ಎ.ಕೀರ್ತಿಕುಮಾರ್‌ ವಿರುದ್ಧ ತನಿಖೆಗೆ ಅನುಮತಿ ನಿರಾಕರಿಸಿ ನಿರ್ಣಯ ಕೈಗೊಂಡಿದ್ದ ಸಂಘದ ಕ್ರಮ ಪ್ರಶ್ನಿಸಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್‌. ನಟರಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ಆದೇಶ ಮಾಡಿದೆ.

ಸಂಘಕ್ಕೆ ಸರಕಾರಗಳಿಂದ ಆರ್ಥಿಕ ನೆರವು:

ಸಂಘವು ಸರಕಾರಿ ಸಂಸ್ಥೆಯಲ್ಲ. ಆದರೆ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್‌ 2(ಸಿ) ಯಲ್ಲಿ ತಿಳಿಸಿರುವಂತೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಹಣಕಾಸಿನ ನೆರವು ಪಡೆಯುವ ಕೃಷಿ, ಕೈಗಾರಿಕೆ, ಬ್ಯಾಂಕಿಂಗ್‌, ವ್ಯಾಪಾರದಲ್ಲಿ ತೊಡಗಿರುವ ಸಹಕಾರಿ ಸಂಘದ ಅಧ್ಯಕ್ಷ , ಕಾರ್ಯದರ್ಶಿ ಅಥವಾ ಇತರ ಪದಾಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಬಹುದು ಎಂದು ಹೈಕೋರ್ಟ್ ಆದೇಶಿಸಿದೆ.

ಹಿರೇಕಡಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2014ರ ಮಾರ್ಚ್‌ 31ರಂದು 15,900 ರೂ. ಷೇರು ಮೊತ್ತ, ಪುನರ್ವಸತಿ ನಿಧಿಯಾಗಿ 13,31,107 ರೂ. ಮತ್ತು 1,01,166 ರೂ. ನೆರವನ್ನು ಕೇಂದ್ರ ಸರಕಾರದಿಂದ ಪಡೆದುಕೊಂಡಿದೆ. ಜತೆಗೆ, 2003-04ರಿಂದ 2014ವರೆಗೆ ರಾಜ್ಯ ಸರಕಾರದಿಂದ ಸಹಾಯದ ರೂಪದಲ್ಲಿ ಸಾಕಷ್ಟು ನೆರವು ಪಡೆದುಕೊಂಡಿದೆ. ಆದ್ದರಿಂದ, ಸಂಘದ ಕಾರ್ಯದರ್ಶಿಯನ್ನು ಸಾರ್ವಜನಿಕ ಸೇವಕನಲ್ಲ ಎಂದು ಹೇಳಲಾಗದು ಎಂದು ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಸಂಘದ ನಿರ್ಣಯ ರದ್ದು:

ಕೀರ್ತಿಕುಮಾರ್‌ ವಿರುದ್ಧ ಪ್ರಕರಣ ದಾಖಲಿಸುವ ಸಂಬಂಧ ಸಂಘ ಕೈಗೊಂಡಿರುವ ನಿರ್ಣಯ ವಿವೇಚನಾರಹಿತವಾಗಿದೆ. ಸಂಘವು ರಾಜ್ಯ ಸರಕಾರದಿಂದ ಯಾವುದೇ ಹಣಕಾಸಿನ ನೆರವು ಪಡೆದಿಲ್ಲ. ಆದ್ದರಿಂದ, ಸಂಘದ ಕಾರ್ಯದರ್ಶಿ ಸಾರ್ವಜನಿಕ ನೌಕರನಲ್ಲವೆಂದು ಕಣ್ಣುಮುಚ್ಚಿಕೊಂಡು ನಿರ್ಣಯ ಕೈಗೊಂಡಿದೆ. ಆದ್ದರಿಂದ, ಈ ನಿರ್ಣಯ ದೋಷಪೂರಿತವಾಗಿದ್ದು ರದ್ದುಗೊಳಿಸಲಾಗುತ್ತಿದೆ ಎಂದಿರುವ ಹೈಕೋರ್ಟ್, ಕೀರ್ತಿಕುಮಾರ್‌ ವಿರುದ್ಧ ತನಿಖೆಗೆ ಅನುಮತಿ ನೀಡುವ ವಿಚಾರವನ್ನು ಸಂಘಕ್ಕೆ ಹಿಂದಿರುಗಿಸುತ್ತಿದ್ದು, ಮುಂದಿನ ಒಂದು ತಿಂಗಳಲ್ಲಿ ತನಿಖೆಗೆ ಅನುಮತಿ ನೀಡುವ ಸಂಬಂಧ ನಿರ್ಣಯ ಕೈಗೊಳ್ಳಬೇಕು ಎಂದು ನಿರ್ದೇಶಿಸಿದೆ.

ಪ್ರಕರಣವೇನು?

ಹಿರೇಕಡಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ 1998ರಿಂದ 2014ರವರೆಗಿನ ಅವಧಿಯಲ್ಲಿ ವರದಿಗಳನ್ನು ಪರಿಶೀಲಿಸಿದ್ದ ಲೋಕಾಯುಕ್ತ ಪೊಲೀಸರು, ಸಂಘದ ಕಾರ್ಯದರ್ಶಿ ಕೀರ್ತಿಕುಮಾರ್‌ ಆಸ್ತಿಯಲ್ಲಿ 27,10,567 ರೂ.ಗಳಷ್ಟು ಹೆಚ್ಚಳವಾಗಿರುವುದನ್ನು ಪತ್ತೆ ಮಾಡಿ, ಈ ಸಂಬಂಧ ವರದಿ ಸಿದ್ಧಪಡಿಸಿದ್ದರು.

ಜತೆಗೆ, ಕೀರ್ತಿಕುಮಾರ್‌ ಅವರು ಸಾರ್ವಜನಿಕ ಸೇವಕನಾದ್ದರಿಂದ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಅನುಮತಿ ಕೋರಿ ಸಂಘಕ್ಕೆ ಮನವಿ ಸಲ್ಲಿಸಿದ್ದರು. 2015ರಲ್ಲಿ ನಿರ್ಣಯ ಅಂಗೀಕರಿಸಿದ್ದ ಸಂಘ, ಕೀರ್ತಿಕುಮಾರ್‌ ಸಹಕಾರ ಸಂಘದಲ್ಲಿ ಕಾರ್ಯದರ್ಶಿಯಾಗಿದ್ದು, ಸಂಘವು ಸರಕಾರಿ ಸಂಸ್ಥೆಯಲ್ಲ. ಜತೆಗೆ, ಕೀರ್ತಿಕುಮಾರ್‌ ಸಾರ್ವಜನಿಕ ಸೇವಕನಲ್ಲನೆಂದು ತಿಳಿಸಿ ಪ್ರಕರಣ ದಾಖಲಿಸಲು ಅನುಮತಿ ನಿರಾಕರಿಸಿತ್ತು. ಅದನ್ನು ಪ್ರಶ್ನಿಸಿ ಲೋಕಾಯಕ್ತ ಪೊಲೀಸರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ವಾದ ಮಂಡಿಸಿದ್ದ ಲೋಕಾಯುಕ್ತ ಪರ ವಕೀಲ ಬಿ.ಎಸ್‌. ಪ್ರಸಾದ್‌ ಅವರು, ಸಂಘದ ವ್ಯವಹಾರಗಳ ಸಂಬಂಧ ವಾರ್ಷಿಕ ವರದಿಯನ್ನು (ಬ್ಯಾಲೆನ್ಸ್‌ ಶೀಟ್‌) ಸಲ್ಲಿಸಿದ್ದು, ಅದರಂತೆ ಸಂಘವು ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಕಾಲಕಾಲಕ್ಕೆ ಆರ್ಥಿಕ ನೆರವು ಪಡೆದುಕೊಂಡಿದೆ. ಆದ್ದರಿಂದ, ಸಂಘದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೀರ್ತಿಕುಮಾರ್‌ ಅವರು ಭ್ರಷ್ಟಾಚಾರ ನಿಯಂತ್ರಣಾ ಕಾಯ್ದೆಯ ಸೆಕ್ಷ ನ್‌ 2(ಸಿ) ಅಡಿಯಲ್ಲಿ ವ್ಯಾಖ್ಯಾನಿಸಿದಂತೆ ಸಾರ್ವಜನಿಕ ಸೇವಕ ವ್ಯಾಪ್ತಿಗೆ ಬರಲಿದ್ದಾರೆ ಎಂದು ಪ್ರತಿಪಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News