×
Ad

ಉದ್ಯೋಗಿಯ ಆತ್ಮಹತ್ಯೆ ಪ್ರಕರಣ; ಓಲಾ ಸಿಇಒ ಭವೀಶ್ ಅಗರ್ವಾಲ್‌ಗೆ ಕಿರುಕುಳ ನೀಡದಂತೆ ಪೊಲೀಸರಿಗೆ ಹೈಕೋರ್ಟ್‌‌ ನಿರ್ದೇಶನ

Update: 2025-10-20 21:56 IST

ಬೆಂಗಳೂರು : ಉದ್ಯೋಗಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ಓಲಾ ಎಲೆಕ್ಟ್ರಿಕ್ ಕಂಪನಿಯ ಮಾಲೀಕ ಭವೀಶ್ ಅಗರ್ವಾಲ್ ಮತ್ತಿತರರಿಗೆ ಕಿರುಕುಳ ನೀಡಬಾರದು ಎಂದು ಸುಬ್ರಹ್ಮಣ್ಯಪುರ ಪೊಲೀಸರಿಗೆ ಹೈಕೋರ್ಟ್ ನಿರ್ದೇಶಿಸಿದೆ.

ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಭವೀಶ್ ಅಗರ್ವಾಲ್, ಸುಬ್ರತ್ ಕುಮಾರ್ ದಾಸ್ ಮತ್ತು ಓಲಾ ಎಲೆಕ್ಟ್ರಿಕ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮುಹಮ್ಮದ್ ನವಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ತನಿಖೆಯ ನೆಪದಲ್ಲಿ ಪೊಲೀಸರು ಅರ್ಜಿದಾರರಿಗೆ ಕಿರುಕುಳ ನೀಡಬಾರದು. ಸರಕಾರದ ವಕೀಲರು ತಕ್ಷಣ ಈ ಆದೇಶವನ್ನು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯ ಪೊಲೀಸರಿಗೆ ತಿಳಿಸಬೇಕು ಎಂದು ಆದೇಶಿಸಿದೆ. ಇದೇ ವೇಳೆ, ಪ್ರತಿವಾದಿ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿ ಅರ್ಜಿ ವಿಚಾರಣೆ ಮುಂದೂಡಿದೆ.

ಪ್ರಕರಣವೇನು?

ಓಲಾ ಎಲೆಕ್ಟ್ರಿಕ್ ಕಂಪನಿಯ ಹೋಮೊಲೊಗೇಷನ್ ಇಂಜಿಯರ್ ಆಗಿದ್ದ ಕೆ.ಅರವಿಂದ್ ಅವರು 2025ರ ಸೆಪ್ಟೆಂಬರ್ 28ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ಸೆಪ್ಟೆಂಬರ್ 30ರಂದು ಕಂಪನಿಯು 17,46,313 ರೂ.ಗಳನ್ನು ಅರವಿಂದ್ ಅವರ ಖಾತೆಗೆ ವರ್ಗಾವಣೆ ಮಾಡಲಾಗಿತ್ತು. ಈ ಬಗ್ಗೆ ವಿಚಾರಿಸಿದಾಗ ಕಂಪನಿಯ ಪ್ರತಿನಿಧಿಗಳು ಹಣಕಾಸಿನ ಬಗ್ಗೆ ಅಸ್ಪಷ್ಟ ಮಾಹಿತಿ ನೀಡಿದ್ದರು. ಇದು ಕಂಪನಿಯ ತಪ್ಪುಗಳನ್ನು ಮರೆಮಾಚುವ ಪ್ರಯತ್ನವೆಂಬ ಅನುಮಾನವಿದೆ. ಸುಬ್ರತ್ ದಾಸ್ ಮತ್ತು ಭವೀಶ್ ಅಗರ್ವಾಲ್ ಕೆಲಸದಲ್ಲಿ ಒತ್ತಡ ಹೇರಿದ್ದು, ತನಗೆ ನೀಡಬೇಕಾದ ವೇತನ ಮತ್ತು ಭತ್ಯೆ ನೀಡದೇ ಕಿರುಕುಳ ನೀಡಿದ್ದಾರೆ. ಇದರಿಂದ, ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಅರವಿಂದ್ ಅವರು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ಆದ್ದರಿಂದ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಕ್ಟೋಬರ್ 6ರಂದು ಅರವಿಂದ್ ಸಹೋದರ ಅಶ್ವಿನ್ ಕಣ್ಣನ್ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರ ಅನ್ವಯ ಸುಬ್ರತ್ ಕುಮಾರ್ ದಾಸ್, ಭವೀಶ್ ಅಗರ್ವಾಲ್ ಮತ್ತು ಓಲಾ ಎಲೆಕ್ಟ್ರಿಕ್ ವಿರುದ್ಧ ಬಿಎನ್ಎಸ್ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿ ಪ್ರಕರಣ ದಾಖಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News