ಕಾಣೆಯಾದವರ ಪ್ರಕರಣಗಳ ಮುಕ್ತಾಯ; ಸರಕಾರ, ಪೊಲೀಸರಿಂದ ವಿವರಣೆ ಕೇಳಿದ ಹೈಕೋರ್ಟ್
ಬೆಂಗಳೂರು : ಆರು ವರ್ಷಗಳ ಹಿಂದೆ ನಗರದಿಂದ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚದೆಯೇ ಪ್ರಕರಣವನ್ನು ಮುಕ್ತಾಯಗೊಳಿಸಿದ ಪೊಲೀಸರ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್, ಈ ಕುರಿತು ವಿವರಣೆ ನೀಡುವಂತೆ ರಾಜ್ಯ ಸರಕಾರ ಮತ್ತು ಪೊಲೀಸ್ ಇಲಾಖೆಗೆ ಸೂಚಿಸಿದೆ.
ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಿಂದ 2019ರಲ್ಲಿ ನಾಪತ್ತೆಯಾದ ಕುಮಾರ್ ಎಂಬ ವ್ಯಕ್ತಿಯನ್ನು ಈವರೆಗೂ ಪತ್ತೆ ಮಾಡದ ಹಾಗೂ ಕುಟುಂಬದವರಿಗೆ ಮಾಹಿತಿ ನೀಡದೆಯೇ ಪ್ರಕರಣವನ್ನು ಮುಕ್ತಾಯಗೊಳಿಸಿರುವ ಪೊಲೀಸರ ಕ್ರಮ ಪ್ರಶ್ನಿಸಿ ಕುಮಾರ್ ಸೋದರ ಸಂಬಂಧಿ ಮಹೇಶ್ ಎಂಬುವವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ನಗರ ಪೊಲೀಸ್ ಆಯುಕ್ತರು, ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಮತ್ತು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ಗೆ ತುರ್ತು ನೋಟಿಸ್ ಜಾರಿಗೊಳಿಸಿತು.
ಕಾಣೆಯಾದವರನ್ನು ಪತ್ತೆ ಹಚ್ಚದೆಯೇ ಪ್ರಕರಣ ಮುಕ್ತಾಯಗೊಳಿಸುತ್ತಿರುವುದು ಏಕೆ, ಪ್ರತಿ 8 ನಿಮಿಷಕ್ಕೆ ಒಂದು ಮಗು ನಾಪತ್ತೆಯಾಗುತ್ತಿದೆ ಎಂಬ ವರದಿಗಳಿವೆ. ನಾಪತ್ತೆಯಾದ ಪ್ರಕರಣಗಳನ್ನ ಡಾರ್ಮಾಂಟ್ ಲಿಸ್ಟ್‌ಗೆ (ಎಷ್ಟೇ ಹುಡುಕಿದ ಪತ್ತೆಯಾಗದೆ ನಿಶ್ಚಲವಾಗಿ ಉಳಿದ ಪ್ರಕರಣಗಳು) ಹೇಗೆ ಸೇರಿಸಲಾಗುತ್ತದೆ. ಅಂತಹ ಪ್ರಕರಣಗಳನ್ನು ಸಮಗ್ರವಾಗಿ ತನಿಖೆ ನಡೆಸಬೇಕಲ್ಲವೇ ಎಂದು ಸರಕಾರದ ಪರ ವಕೀಲರನ್ನು ಉದ್ದೇಶಿಸಿ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಈ ಕುರಿತು ವಿವರಣೆ ನೀಡುವಂತೆ ರಾಜ್ಯ ಸರಕಾರ ಮತ್ತು ಪೊಲೀಸ್ ಇಲಾಖೆಗೆ ಸೂಚಿಸಿ, ವಿಚಾರಣೆಯನ್ನು ನವೆಂಬರ್ 3ಕ್ಕೆ ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಎನ್. ಪುರುಷೋತ್ತಮ್ ವಾದ ಮಂಡಿಸಿ, ಮಲ್ಲತ್ತಹಳ್ಳಿಯಲ್ಲಿ ವಾಸವಿದ್ದ ಕುಮಾರ್ ಎಂಬಾತ ಕೇಟರಿಂಗ್ ಸಂಸ್ಥೆಯೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. 2019ರಲ್ಲಿ ನಾಪತ್ತೆಯಾದ ಆತ ಹಲವು ದಿನಗಳಾದರೂ ಮನೆಗೆ ಹಿಂದಿರುಗಿಲಿಲ್ಲ. ಇದರಿಂದ, ಆತನ ಸೋದರ ಸಂಬಂಧಿಯಾಗಿರುವ ಅರ್ಜಿದಾರರು 2020ರಲ್ಲಿ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದೂರು ನೀಡಿದ್ದರು. ಆದರೆ, ಕುಮಾರ್ ಅನ್ನು ಪತ್ತೆ ಹಚ್ಚದ ಪೊಲೀಸರು, ಪ್ರಕರಣವನ್ನು 2024ರಲ್ಲಿ ಮುಕ್ತಾಯಗೊಳಿಸಿದ್ದಾರೆ. ಪ್ರಕರಣವನ್ನು ಡಾರ್ಮಾಂಟ್ ಲಿಸ್ಟ್‌ಗೆ ಸೇರಿಸಿದ್ದಾರೆ. ಈ ಬಗ್ಗೆ ಕುಮಾರ್ ಮನೆಯವರಿಗಾಗಲಿ ಅಥವಾ ಅರ್ಜಿದಾರರಿಗೆ ಮಾಹಿತಿ ನೀಡಿಲ್ಲ. ಪ್ರಕರಣವನ್ನು ಮುಕ್ತಾಯಗೊಳಿಸಿದಾಗ ನಾಪತ್ತೆಯಾದ ಕುಟುಂಬದವರಿಗೆ ಮಾಹಿತಿ ನೀಡುವುದು ಕಡ್ಡಾಯ ಎಂದು ನ್ಯಾಯಪೀಠಕ್ಕೆ ವಿವರಿಸಿದರು.