×
Ad

ಅತ್ಯಾಚಾರ ಪ್ರಕರಣ; ಪ್ರಜ್ವಲ್ ಮೇಲ್ಮನವಿಗೆ ಆಕ್ಷೇಪಣೆ ಸಲ್ಲಿಸಲು ಸರಕಾರಕ್ಕೆ 2 ವಾರ ಕಾಲಾವಕಾಶ ನೀಡಿದ ಹೈಕೋರ್ಟ್

Update: 2025-10-28 21:07 IST

 ಪ್ರಜ್ವಲ್ ರೇವಣ್ಣ

ಬೆಂಗಳೂರು : ಮನೆ ಕೆಲಸಕ್ಕಿದ್ದ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಜೀವಿತಾವಧಿ ಜೈಲು ಶಿಕ್ಷೆ ವಿಧಿಸಿ ವಿಚಾರಣಾ ನ್ಯಾಯಾಲಯ ನೀಡಿರುವ ತೀರ್ಪು ರದ್ದು ಕೋರಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಮೇಲ್ಮನವಿಗೆ ಆಕ್ಷೇಪಣೆ ಸಲ್ಲಿಸಲು ಸರಕಾರಕ್ಕೆ ಹೈಕೋರ್ಟ್ 2 ವಾರ ಕಾಲಾವಕಾಶ ನೀಡಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಹಾಗೂ ನ್ಯಾಯಮೂರ್ತಿ ವೆಂಕಟೇಶ್ ನಾಯ್ಕ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ರಾಜ್ಯ ಸರಕಾರದ ಪರ ಹಾಜರಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್‌ ಅವರು, ಮೇಲ್ಮನವಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು.

ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಿದ್ದ ಪ್ರಜ್ವಲ್‌ ಪರ ಹಿರಿಯ ವಕೀಲ ಸಿದ್ಧಾರ್ಥ್‌ ಲೂಥ್ರಾ ಅವರು, ಆಕ್ಷೇಪಣೆ ಸಲ್ಲಿಸಲು ಪ್ರಾಸಿಕ್ಯೂಷನ್‌ ಕಾಲಾವಕಾಶ ತೆಗೆದುಕೊಳ್ಳಬಹುದು. ಆದರೆ, ಭೌತಿಕವಾಗಿ ಪೀಠದ ಮುಂದೆ ಹಾಜರಾಗಿ ವಾದ ಮಂಡಿಸಲು ತಮಗೆ ಸಮಯ ನೀಡಬೇಕು ಎಂದು ಕೋರಿದರು.

ವಾದ ಆಲಿಸಿದ ನ್ಯಾಯಪೀಠ, ಆಕ್ಷೇಪಣೆ ಸಲ್ಲಿಸಲು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ, ಮೇಲ್ಮನವಿ ವಿಚಾರಣೆಯನ್ನು ನವೆಂಬರ್‌ 13ಕ್ಕೆ ಮುಂದೂಡಿತು.

ಆಜೀವ ಸೆರೆವಾಸಕ್ಕೆ ಗುರಿಯಾಗಿರುವ ಪ್ರಜ್ವಲ್:

ಮನೆ ಕೆಲಸದಾಕೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ದೋಷಿ ಎಂದು ತೀರ್ಮಾನಿಸಿದ್ದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಕಳೆದ ಆಗಸ್ಟ್ 2ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದ್ದರು.

ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 376(2)(ಕೆ)-ಪ್ರಬಲ ಸ್ಥಾನದಲ್ಲಿದ್ದುಕೊಂಡು ಮಹಿಳೆ ಮೇಲೆ ಅತ್ಯಾಚಾರ) ಅಪರಾಧಕ್ಕೆ ಜೀವಾವಧಿ ಶಿಕ್ಷೆ ಹಾಗೂ ಹಾಗೂ 5 ಲಕ್ಷ ರೂ. ದಂಡ, 376(2)(ಎನ್)-(ಮಹಿಳೆಯ ಮೇಲೆ ಪದೇಪದೆ ಅತ್ಯಾಚಾರ) ಅಪರಾಧಕ್ಕೆ ಜೀವನ ಪರ್ಯಂತ ಸೆರೆವಾಸ ಹಾಗೂ 5 ಲಕ್ಷ ರೂ. ದಂಡದ ಗರಿಷ್ಠ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿತ್ತು.

ಇದಲ್ಲದೆ, ಸೆಕ್ಷನ್ 354 (ಎ)-(ಲೈಂಗಿಕ ದೌರ್ಜನ್ಯ) ಅಡಿಯ ಅಪರಾಧಕ್ಕೆ 3 ವರ್ಷ ಜೈಲು, 25 ಸಾವಿರ ರೂ. ದಂಡ; ಸೆಕ್ಷನ್ 354 (ಬಿ)-(ವಿವಸ್ತ್ರಗೊಳಿಸುವ ಉದ್ದೇಶದಿಂದ ಮಹಿಳೆಯ ಮೇಲೆ ಹಲ್ಲೆ ಅಥವಾ ಬಲಪ್ರಯೋಗ) ಅಡಿಯ ಅಪರಾಧಕ್ಕೆ 7 ವರ್ಷ ಕಾರಾಗೃಹ ಶಿಕ್ಷೆ, 50 ಸಾವಿರ ರೂ. ದಂಡ; ಸೆಕ್ಷನ್ 354 (ಸಿ)-(ಮಹಿಳೆಯ ಖಾಸಗಿ ದೃಶ್ಯಗಳನ್ನು ನೋಡುವುದು ಅಥವಾ ಸೆರೆಹಿಡಿಯುವುದು) ಅಪರಾಧಕ್ಕೆ 3 ವರ್ಷ ಜೈಲು, 25 ಸಾವಿರ ರೂ. ದಂಡ; ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಅಡಿಯ ಅಪರಾಧಕ್ಕೆ 2 ವರ್ಷ ಜೈಲು ಶಿಕ್ಷೆ, 10 ಸಾವಿರ ರೂ. ದಂಡ; ಸೆಕ್ಷನ್ 201 (ಅಪರಾಧದ ಸಾಕ್ಷ್ಯ ನಾಶ) ಅಡಿಯ ಅಪರಾಧಕ್ಕೆ 3 ವರ್ಷ ಸೆರೆವಾಸ, 25 ಸಾವಿರ ರೂ. ದಂಡ; ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ ಸೆಕ್ಷನ್ 66(ಇ)-(ವ್ಯಕ್ತಿಯ ಖಾಸಗಿತನ ಉಲ್ಲಂಘಿಸಿ ಚಿತ್ರ ಸೆರೆ ಹಿಡಿಯುವುದು ಹಾಗೂ ಹಂಚುವುದು) ಅಡಿಯ ಅಪರಾಧಕ್ಕೆ 3 ವರ್ಷ ಜೈಲು, 25 ಸಾವಿರ ರೂ. ದಂಡ ವಿಧಿಸಿ ಆದೇಶಿಸಿತ್ತು.

ಒಟ್ಟು ದಂಡದ ಮೊತ್ತ 11.60 ಲಕ್ಷ ರೂ. ಗಳಲ್ಲಿ 11.25 ಲಕ್ಷ ರೂ. ಗಳನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಲು ಆದೇಶಿಸಿದ್ದ ನ್ಯಾಯಾಲಯ, ಎಲ್ಲ ಶಿಕ್ಷೆಗಳೂ ಏಕಕಾಲಕ್ಕೆ ಜಾರಿಯಾಗಲಿವೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News