×
Ad

ಎಸ್‌ಸಿ ವರ್ಗೀಕರಣ, ಒಳಮೀಸಲಾತಿ ನಿಗದಿ; ಸಂಪುಟ ನಿರ್ಣಯ ಪ್ರಶ್ನಿಸಿ ಅಲೆಮಾರಿ, ಬುಡಕಟ್ಟು ಸಮುದಾಯಗಳಿಂದ ಹೈಕೋರ್ಟ್‌ಗೆ ಅರ್ಜಿ

Update: 2025-11-06 20:33 IST

ಬೆಂಗಳೂರು : ರಾಜ್ಯದಲ್ಲಿರುವ 101 ಪರಿಶಿಷ್ಟ ಜಾತಿಗಳ ವರ್ಗೀಕರಣ ಹಾಗೂ ಒಳಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯ ಸಚಿವ ಸಂಪುಟ ಸಭೆ ಕೈಗೊಂಡಿರುವ ನಿರ್ಣಯ ಆಕ್ಷೇಪಿಸಿ ಇದೀಗ ಅಲೆಮಾರಿ ಹಾಗೂ ಬುಡಕಟ್ಟು ಸಮುದಾಯಗಳು ಹೈಕೋರ್ಟ್ ಮೆಟ್ಟಿಲೇರಿವೆ.

ನ್ಯಾಯಮೂರ್ತಿ ಎಚ್. ನಾಗಮೋಹನ್ ದಾಸ್ ಆಯೋಗದ ವರದಿ ಆಧರಿಸಿ 2025ರ ಆಗಸ್ಟ್ 19ರಂದು ಸಚಿವ ಸಂಪುಟ ಕೈಗೊಂಡಿರುವ ನಿರ್ಣಯ ಪ್ರಶ್ನಿಸಿ ಕರ್ನಾಟಕ ರಾಜ್ಯ ಅಲೆಮಾರಿ ಬುಕಟ್ಟು ಮಹಾಸಭಾ, ಅಲೆಮಾರಿ ಸುಡುಗಾಡು ಸಿದ್ದ ಮಹಾಸಭಾ, ಅಖಿಲ ಕರ್ನಾಟಕ ಚೆನ್ನದಾಸರ (ಪರಿಶಿಷ್ಟ ಜಾತಿ) ಮಹಾಸಭಾ, ಕರ್ನಾಟಕ ರಾಜ್ಯ ಬುಡುಗಜಂಗಮ ಕ್ಷೇಮಾಭಿವೃದ್ಧಿ ಸಂಘ, ಸಿಂಧೋಳು ಸಮಾಜ ಕಲ್ಯಾಣ ಸಂಘ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ರಾಜ್ಯ ಸರಕಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಸಮಾಜ ಕಲ್ಯಾಣ ಇಲಾಖೆಗೆ ನೋಟಿಸ್ ಜಾರಿಗೊಳಿಸಿತು. ಜತೆಗೆ, ಇದೇ ವಿಷಯವಾಗಿ ಸಲ್ಲಿಕೆಯಾಗಿರುವ ಇನ್ನೂ ಹಲವು ಅರ್ಜಿಗಳ ವಿಚಾರಣೆಯನ್ನು ನವೆಂಬರ್ 13ಕ್ಕೆ ನಿಗದಿಪಡಿಸಲಾಗಿದ್ದು, ಅದೇ ದಿನ ಈ ಅರ್ಜಿಯನ್ನೂ ವಿಚಾರಣೆ ನಡೆಸುವುದಾಗಿ ತಿಳಿಸಿ, ಅರ್ಜಿ ವಿಚಾರಣೆ ಮುಂದೂಡಿತು.

ಮನವಿ ಏನು?

ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯನ್ನು ತಿದ್ದುಪಡಿಯೊಂದಿಗೆ ಅಂಗೀಕರಿಸಿ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯ ರದ್ದುಪಡಿಸಬೇಕು. 101 ಪರಿಶಿಷ್ಟ ಜಾತಿಗಳಿಗೆ ನಿಗದಿಪಡಿಸಲಾಗಿರುವ ಶೇ.17 ಮೀಸಲಾತಿಯಲ್ಲಿ ಅಲೆಮಾರಿ, ಬುಡಕಟ್ಟು ಸಮುದಾಯಗಳನ್ನು ಕೆಟಗರಿ-ಎ ಎಂದು ಪ್ರತ್ಯೇಕವಾಗಿ ವರ್ಗೀಕರಿಸಿ ಶೇ.1 ಮೀಸಲಾತಿ ನಿಗದಿಪಡಿಸಿದ ಆಯೋಗದ ವರದಿಯನ್ನು ಒಪ್ಪಿಕೊಳ್ಳುವಂತೆ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News