×
Ad

ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಚಟುವಟಿಕೆಗೆ ನಿರ್ಬಂಧ; ಸರಕಾರದ ಆದೇಶದ ಮೇಲಿನ ತಡೆಯಾಜ್ಞೆ ಅರ್ಜಿದಾರರಿಗಷ್ಟೇ ಸೀಮಿತಗೊಳಿಸಲು ಹೈಕೋರ್ಟ್ ನಕಾರ

Update: 2025-11-17 22:39 IST

ಬೆಂಗಳೂರು/ಧಾರವಾಡ: ಸಾರ್ವಜನಿಕ ಸ್ಥಳಗಳಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ 10ಕ್ಕೂ ಅಧಿಕ ಮಂದಿ ಗುಂಪು ಸೇರಿದರೆ ಅದನ್ನು ಅಕ್ರಮ ಕೂಟವೆಂದು ಪರಿಗಣಿಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ನೀಡಿರುವ ಮಧ್ಯಂತರ ತಡೆಯಾಜ್ಞೆಯನ್ನು ಅರ್ಜಿದಾರರಿಗೆ ಮಾತ್ರ ಸೀಮಿತಗೊಳಿಸಲು ನಿರಾಕರಿಸಿರುವ ಹೈಕೋರ್ಟ್, ಮಧ್ಯಂತರ ಆದೇಶ ಎಲ್ಲರಿಗೂ ಅನ್ವಯಿಸಲಿದೆ ಎಂದು ಸ್ಪಷ್ಟಪಡಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಖಾಸಗಿ ಸಂಘ-ಸಂಸ್ಥೆಗಳ ಚಟುವಟಿಕೆಗೆ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ 2025ರ ಅಕ್ಟೋಬರ್ 18ರಂದು ಹೊರಡಿಸಿದ್ದ ಆದೇಶ ರದ್ದು ಕೋರಿ ಹುಬ್ಬಳ್ಳಿಯ ಪುನಃಶ್ಚೇತನ ಸೇವಾ ಟ್ರಸ್ಟ್ ಮತ್ತಿತರರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಸೋಮವಾರ ವಿಚಾರಣೆ ನಡೆಸಿತು.

ರಾಜ್ಯ ಸರಕಾರದ ಪರ ಹಾಜರಾದ ಅಡ್ವೋಕೇಟ್​ ಜನರಲ್​ ಕೆ. ಶಶಿಕಿರಣ್ ಶೆಟ್ಟಿ ಅವರು, ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕೆಂದು ನ್ಯಾಯಪೀಠಕ್ಕೆ ಮನವಿ ಮಾಡಿದರಲ್ಲದೆ, ಸರಕಾರದ ಆದೇಶಕ್ಕೆ ನೀಡಿರುವ ಮಧ್ಯಂತರ ತಡೆಯಾಜ್ಞೆಯನ್ನು ಅರ್ಜಿದಾರರಿಗೆ ಮಾತ್ರ ಸೀಮಿತವಾಗಿ ಅನ್ವಯಿಸಿ ಆದೇಶಿಸಬೇಕೆಂದು ಕೋರಿದರು.

ಈ ಮನವಿಯನ್ನು ತಳ್ಳಿ ಹಾಕಿದ ನ್ಯಾಯಪೀಠ, ಸರಕಾರದ ಆದೇಶಕ್ಕೆ ತಡೆ ನೀಡಿ ಅಕ್ಟೋಬರ್ 28ರಂದು ಹೊರಡಿಸಲಾಗಿದ್ದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಸರಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಭಾಗೀಯ ನ್ಯಾಯಪೀಠ ನವೆಂಬರ್ 6ರಂದು ವಜಾಗೊಳಿಸಿದೆ. ಈ ಮೂಲಕ ಏಕಸದಸ್ಯ ಪೀಠದ ಮಧ್ಯಂತರ ಆದೇಶವನ್ನು ಎತ್ತಿ ಹಿಡಿದಿದೆ. ಇದೀಗ, ಅಡ್ವೊಕೇಟ್ ಜನರಲ್ ಅವರು ಮಧ್ಯಂತರ ಆದೇಶವನ್ನು ಅರ್ಜಿದಾರರಿಗೆ ಮಾತ್ರ ಸೀಮಿತಗೊಳಿಸುವಂತೆ ಮನವಿ ಮಾಡಿದ್ದಾರೆ. ಆದರೆ, ಸರಕಾರದ ಆದೇಶದಿಂದ ಭಾರತೀಯ ಸಂವಿಧಾನದ ಅಧ್ಯಾಯ III ರ ಉಲ್ಲಂಘನೆಯಾಗಿದೆ. ಅಂದರೆ ಪರಿಚ್ಛೇದ 19(1) (ಎ) ಮತ್ತು (ಬಿ) ಅಡಿಯಲ್ಲಿನ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಆದ್ದರಿಂದ, ಸರಕಾರ ಹೊರಡಿಸಿರುವ ಆದೇಶವನ್ನು ಅರ್ಜಿದಾರರಿಗೆ ಸೀಮಿತಗೊಳಿಸಿ, ಇತರರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಅನುಮತಿಸಲಾಗದು ಎಂದು ಸ್ಪಷ್ಟಪಡಿಸಿತು.

ಜತೆಗೆ, ಅರ್ಜಿಗೆ ಸಂಬಂಧಿಸಿದಂತೆ ಸರಕಾರ ಆಕ್ಷೇಪಣೆಗಳನ್ನು ಸಲ್ಲಿಸಿದಲ್ಲಿ, ವಿಚಾರಣೆ ನಡೆಸಿ ಇತ್ಯರ್ಥಪಡಿಸಲಾಗುವುದು ಎಂದು ನ್ಯಾಯಪೀಠ ತಿಳಿಸಿತು. ಆಗ ಅಡ್ವೋಕೇಟ್​ ಜನರಲ್​ ಅವರು, ಆಕ್ಷೇಪಣೆ ಸಲ್ಲಿಸಲು 4 ವಾರ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, ಆಕ್ಷೇಪಣೆ ಸಲ್ಲಿಸಲು ಸರಕಾರಕ್ಕೆ 4 ವಾರ ಕಾಲಾವಕಾಶ ನೀಡಿ, ವಿಚಾರಣೆಯನ್ನು ಡಿಸೆಂಬರ್ 15ಕ್ಕೆ ಮುಂದೂಡಿತಲ್ಲದೆ, ಈ ಹಿಂದೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಅರ್ಜಿಯ ಮುಂದಿನ ವಿಚಾರಣೆವರೆಗೆ ವಿಸ್ತರಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News