ಎಂಬಿಬಿಎಸ್ ಸೀಟು ಹೆಚ್ಚಳದ ಬಗ್ಗೆ ಎನ್‌ಎಂಸಿಯಿಂದ ವಿವರ ಕೇಳಿದ ಹೈಕೋರ್ಟ್
ಬೆಂಗಳೂರು : ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ (2025-26) ವೈದ್ಯಕೀಯ ಸೀಟುಗಳ ಹಂಚಿಕೆಗೆ ಕೌನ್ಸೆಲಿಂಗ್ ಆರಂಭವಾದ ನಂತರ ಕರ್ನಾಟಕದ ವೈದ್ಯಕೀಯ ಕಾಲೇಜುಗಳಿಗೆ ಹಾಗೂ ಇಡೀ ದೇಶದ ವೈದ್ಯಕೀಯ ಕಾಲೇಜುಗಳಿಗೆ ಎಷ್ಟು ಸಂಖ್ಯೆಯ ಎಂಬಿಬಿಎಸ್ ಸೀಟುಗಳನ್ನು ಹೆಚ್ಚಳ ಮಾಡಲಾಗಿದೆ ಎಂಬ ಬಗ್ಗೆ ವಿವರ ನೀಡುವಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ (ಎನ್‌ಎಂಸಿ) ಹೈಕೋರ್ಟ್ ನಿರ್ದೇಶಿಸಿದೆ.
ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸ್‌ಗಳಲ್ಲಿ ಖಾಲಿ ಇರುವ ಸೀಟುಗಳನ್ನು ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೂರನೇ ಸುತ್ತಿನ ಕೌನ್ಸೆಲಿಂಗ್ ನಡೆಸುತ್ತಿರುವ ವಿಧಾನವನ್ನು ಪ್ರಶ್ನಿಸಿ ಕೆಲ ಎಂಬಿಬಿಎಸ್ ಸೀಟು ಆಕಾಂಕ್ಷಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ಹಾಗೂ ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಅದೇಶ ಮಾಡಿದೆ.
ಕೆಇಎ ಕೌನ್ಸೆಲಿಂಗ್ ಪ್ರಕ್ರಿಯೆ ಅರಂಭಿಸಿದ ನಂತರ ಆಖಿಲ ಭಾರತ ಕೋಟಾ (ಎಐಕ್ಯೂ) ಅಡಿ ಕರ್ನಾಟಕದ ವೈದ್ಯಕೀಯ ಕಾಲೇಜುಗಳಲ್ಲಿ ಎಷ್ಟು ಎಂಬಿಬಿಎಸ್ ಸೀಟುಗಳನ್ನು ಹೆಚ್ಚಳ ಮಾಡಲಾಗಿದೆ ಎಂಬ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಎನ್‌ಎಂಸಿ ಮತ್ತು ಕೆಇಎ ಪರ ವಕೀಲರಿಗೆ ಸೂಚಿಸಿರುವ ನ್ಯಾಯಪೀಠ, ಅರ್ಜಿ ವಿಚಾರಣೆ ಮುಂದೂಡಿದೆ.
ವಿಚಾರಣೆ ವೇಳೆ ವಾದ ಮಂಡಿಸಿದ ಕೆಇಎ ಪರ ವಕೀಲರು, ಅಖಿಲ ಭಾರತ ಕೋಟಾದಡಿ ಸೀಟು ಹಂಚಿಕೆ ಪ್ರಕ್ರಿಯೆಯನ್ನು ನವದೆಹಲಿಯಲ್ಲಿ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ(ಎಂಸಿಸಿ) ಈಗಾಗಲೇ ದೇಶಾದ್ಯಂತ ಪೂರ್ಣಗೊಳಿಸಿದೆ. ಜತೆಗೆ ಎಂಸಿಸಿ ಅಂತಿಮ ಹಂಚಿಕೆ ಪಟ್ಟಿ ಪ್ರಕಟಿಸಿರುವುದಲ್ಲದೆ, ಖಾಲಿ ಇರುವ ಸೀಟುಗಳ ವಿವರಗಳನ್ನೂ ಪ್ರಕಟಿಸಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಕೆಇಎ 2025ರ ಅಕ್ಟೋಬರ್ 24ರಂದು ಮೂರನೇ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಪಟ್ಟಿ ಪ್ರಕಟಿಸಿತ್ತು. ಆದರೆ ನ್ಯಾಯಾಲಯದ ಮಧ್ಯಂತರ ನಿರ್ದೇಶನದ ಮೇರೆಗೆ ಸೀಟು ಹಂಚಿಕೆ ಪ್ರಕ್ರಿಯೆ ಅಕ್ಟೋಬರ್ 26ರಂದು ಆರಂಭವಾಗಿತ್ತು.