×
Ad

ಧರ್ಮ-ದೇವರ ಹೆಸರಲ್ಲಿ ಸರಕಾರಿ ಜಾಗ ಒತ್ತುವರಿಗೆ ಅನುಮತಿಸಲಾಗದು : ಹೈಕೋರ್ಟ್

Update: 2025-11-21 00:29 IST

ಬೆಂಗಳೂರು : ಧರ್ಮದ ಹೆಸರಿನಲ್ಲಿ ಸರಕಾರಿ ಜಾಗ ಅತಿಕ್ರಮಿಸಲು ಹಾಗೂ ದೇವರ ಹೆಸರಿನಲ್ಲಿ ರಿಯಲ್ ಎಸ್ಟೇಟ್‌ ವ್ಯವಹಾರ ನಡೆಸಲು ಅವಕಾಶ ನೀಡಲಾಗದು ಎಂದು ಹೈಕೋರ್ಟ್ ತೀಕ್ಷ್ಣವಾಗಿ ನುಡಿದಿದೆ.

ಕೋಲಾರ ತಾಲೂಕು ವೇಮಗಲ್ ಹೋಬಳಿಯ ಕ್ಯಾಲನೂರು ಗ್ರಾಮದ ಸರಕಾರಿ ಶಾಲೆಯ ಕಾಂಪೌಂಡ್ ಹಾಗೂ ಗ್ರಾಮದ ರಸ್ತೆಯ ಸರಕಾರಿ ಜಾಗದಲ್ಲಿ ನಿರ್ಮಿಸಲಾಗಿರುವ ಮಳಿಗೆಗಳ ತೆರವಿಗೆ ಕೋಲಾರ ತಹಶೀಲ್ದಾರ್ ಜಾರಿಗೊಳಿಸಿರುವ ನೋಟಿಸ್ ಪ್ರಶ್ನಿಸಿ ಗ್ರಾಮದ ವಿರಾಟ್ ಹಿಂದೂ ಸೇವಾ ಚಾರಿಟಬಲ್ ಟ್ರಸ್ಟ್ ಹಾಗೂ ಜಾಮೀಯಾ ಮಸ್ಜಿದ್ ಕಮಿಟಿ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ರೀತಿ ಹೇಳಿದೆ.

ಜತೆಗೆ, ಸರಕಾರಿ ಜಾಗವನ್ನು ಖಾಸಗಿಯವರು ಬಳಕೆ ಮಾಡುತ್ತಿದ್ದರೂ ಇಲ್ಲಿಯವರೆಗೆ ಸುಮ್ಮನೆ ಇದ್ದದ್ದು ಏಕೆ ಎಂದು ಸರಕಾರದ ಪರ ವಕೀಲರನ್ನು ಪ್ರಶ್ನಿಸಿರುವ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಸರಕಾರ, ಕೋಲಾರ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ನವೆಂಬರ್ 21ಕ್ಕೆ (ಶುಕ್ರವಾರ) ಮುಂದೂಡಿತು.

ಅರ್ಜಿದಾರರ ವಾದವೇನು?

ಗುರುವಾರ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಕ್ಯಾಲನೂರು ಗ್ರಾಮದ ಖಾಲಿ ಜಾಗವನ್ನು ದಶಕದಿಂದ ಎರಡೂ ಅರ್ಜಿದಾರ ಸಂಸ್ಥೆಗಳು ನಿರ್ವಹಣೆ ಮಾಡಿಕೊಂಡು ಬಂದಿವೆ. ಗ್ರಾಮಸ್ಥರ ಹಿತದೃಷ್ಟಿಯಿಂದ ಈ ಜಾಗದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಮತ್ತು ವಾಣಿಜ್ಯ ಚಟುವಟಿಕೆ ನಡೆಸಿಕೊಂಡು ಬರಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಸಮುದಾಯದ ದೇಣಿಗೆಗಳಿಂದ ಮಳಿಗೆಗಳನ್ನು ನಿರ್ಮಿಸಿ, ಮೂಲಸೌಕರ್ಯಗಳನ್ನು ಸೃಷ್ಟಿಸಲಾಗಿದೆ. ಇವುಗಳಿಂದ ಬರುವ ಬಾಡಿಗೆ ಹಣವನ್ನು ಧಾರ್ಮಿಕ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತದೆ. ಈ ಜಾಗ ಅರ್ಜಿದಾರರ ಸಂಸ್ಥೆಗಳಿಗೆ ಮಂಜೂರು ಮಾಡಬೇಕು ಎಂದು 2015ರಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯ ಆಗಿದೆ. ಆ ಪ್ರಸ್ತಾವನೆ ಸದ್ಯ ಜಿಲ್ಲಾಧಿಕಾರಿ ಬಳಿ ಬಾಕಿ ಇದೆ. ಈ ನಡುವೆ, ಮಳಿಗೆಗಳನ್ನು ತೆರವುಗೊಳಿಸಲು ತಹಶೀಲ್ದಾರ್ ನೋಟಿಸ್ ಜಾರಿಗೊಳಿಸಿದ್ದು, ನವೆಂಬರ್ 21ರಂದು ತೆರವು ಕಾರ್ಯಾಚರಣೆ ನಿಗದಿಯಾಗಿದೆ ಎಂದರು.

ಅರ್ಜಿದಾರರು ಮಳಿಗೆಗಳನ್ನು ನಿರ್ಮಿಸಿರುವ ಜಾಗ ಸರಕಾರಿ ಜಮೀನು ಎಂದು ತಿಳಿದ ನ್ಯಾಯಪೀಠ, ಸರಕಾರಿ ಜಾಗದಲ್ಲಿ ಧಾರ್ಮಿಕ ಸಂಸ್ಥೆಗಳ ಕೆಲಸ ಏನಿದೆ? ಯಾವ ಆಧಾರ ಮತ್ತು ಯಾವ ಉದ್ದೇಶಕ್ಕೆ ಮಳಿಗೆಗಳನ್ನು ನಿರ್ಮಿಸಿ, ಬಾಡಿಗೆಗೆ ಕೊಟ್ಟು ಬಾಡಿಗೆ ವಸೂಲಿ ಮಾಡಲಾಗುತ್ತಿದೆ? ಇದು ದೇವರ ಹೆಸರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಅಲ್ಲದೆ ಮತ್ತೇನಿಲ್ಲ ಎಂದು ಹೇಳಿತು.

ಧರ್ಮದ ಹೆಸರಿನಲ್ಲಿ ಈ ರೀತಿ ಸರಕಾರಿ ಜಾಗ ಅತಿಕ್ರಮಿಸುವುದಕ್ಕೆ ಮತ್ತು ದೇವರ ಹೆಸರಲ್ಲಿ ರಿಯಲ್ ಎಸ್ಟೇಟ್‌ಗೆ ಅವಕಾಶ ನೀಡಲಾಗದು. ಅರ್ಜಿದಾರರು ಚಾರಿಟಬಲ್ ಟ್ರಸ್ಟ್ ಎಂದು ಹೇಳಿಕೊಂಡಿದ್ದಾರೆ. ಹೀಗಿರುವಾಗ, ಮಳಿಗೆ ಕಟ್ಟಿ ಬಾಡಿಗೆ ವಸೂಲಿ ಮಾಡುವುದು ಏಕೆ? ಎರಡೂ ಧರ್ಮದವರು ಅರ್ಜಿ ಸಲ್ಲಿಸಿದ್ದಾರೆ. 'ರಾಮ್-ರಹೀಮ್' ಸೇರಿ ಬಂದಿರುವುದೇ ಅನುಮಾನಗಳನ್ನು ಹುಟ್ಟುಹಾಕುತ್ತಿದೆ ಎಂದು ನ್ಯಾಯಪೀಠ ನುಡಿಯಿತು.

ಜಾಗ ಮಂಜೂರು ಪ್ರಸ್ತಾವನೆ ಜಿಲ್ಲಾಧಿಕಾರಿ ಮುಂದಿದ್ದರೆ ಅವರ ಬಳಿ ಹೋಗಿ, ಜಾಗ ಮಂಜೂರು ಮಾಡುವುದು ಅವರಿಗೆ ಬಿಟ್ಟಿದ್ದು. ಸದ್ಯಕ್ಕಂತೂ ವಿವಾದಿತ ಜಾಗ ಸರಕಾರಕ್ಕೆ ಸೇರಿದ್ದು. ಸರಕಾರಿ ಜಾಗದಲ್ಲಿ ನೀವು ಹಕ್ಕು ಸಾಧಿಸಲು ಬರುವುದಿಲ್ಲ. ಸರಕಾರಿ ಜಾಗ ಇದ್ದಾಗ ನಿಮಗೆ ಯಾವುದೇ ರಕ್ಷಣೆ ಅಥವಾ ಪರಿಹಾರ ನೀಡಲಾಗದು ಎಂದು ನ್ಯಾಯಪೀಠ ಹೇಳಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News