ಔಷಧ, ವೈದ್ಯಕೀಯ ಉಪಕರಣಗಳ ಮೂಲ ದರ ಪ್ರಕಟಣೆ ಸುತ್ತೋಲೆ ಜಾರಿಗೆ ಒತ್ತಾಯಿಸುವುದಿಲ್ಲ; ಹೈಕೋರ್ಟ್ಗೆ ಸರ್ಕಾರದ ಭರವಸೆ
ಬೆಂಗಳೂರು : ಔಷಧಗಳು, ವೈದ್ಯಕೀಯ ಉಪಕರಣಗಳು ಹಾಗೂ ಬಳಕೆಯ ವಸ್ತುಗಳ ಮೂಲ ದರವನ್ನು ಬಹಿರಂಗವಾಗಿ ಪ್ರಕಟಿಸುವಂತೆ ಆಸ್ಪತ್ರೆಗಳಿಗೆ ಸೂಚಿಸಿ ಹೊರಡಿಸಿರುವ ಸುತ್ತೋಲೆಯನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಒತ್ತಾಯಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ.
ದರ ಪ್ರಕಟಣೆ ಕಡ್ಡಾಯಗೊಳಿಸಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಖಾಸಗಿ ಆಸ್ಪತ್ರೆಗಳ ಪರವಾಗಿ ಡಾ. ಶೋಭಾ ಪ್ರಕಾಶ್, ಡಾ. ಹಾಲಗೆರೆ ಮಲ್ಲಿಕಾರ್ಜುನ ಪ್ರಸನ್ನ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ಏಕಸದಸ್ಯ ನ್ಯಾಯಪೀಠಕ್ಕೆ ಸರ್ಕಾರ ಈ ಭರವಸೆ ನೀಡಿದೆ.
ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಬಿ.ವಿ. ಭಾನುಪ್ರಕಾಶ್ ಅವರು ಔಷಧಗಳು, ವೈದ್ಯಕೀಯ ಉಪಕರಣಗಳು ಮತ್ತು ಬಳಕೆಯ ವಸ್ತುಗಳ ಮೂಲ ದರವನ್ನು ಬಹಿರಂಗಪಡಿಸುವಂತೆ ಸರ್ಕಾರ ಅಕ್ಟೋಬರ್ 1ರಂದು ಸುತ್ತೋಲೆ ಹೊರಡಿಸಿದೆ. ಆದರೆ, ಅರ್ಜಿದಾರರು ಸುತ್ತೋಲೆ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿರುವುದು ತಡವಾಗಿದೆ. ಸುತ್ತೋಲೆಯಲ್ಲಿ ಉಲ್ಲೇಖಿಸಿರುವ ಕಾನೂನು ನಿಬಂಧನೆಗಳಿಗೆ ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಸ್ವಲ್ಪ ಕಾಲಾವಕಾಶ ನೀಡಿದರೆ, ಸುತ್ತೋಲೆಯನ್ನು ಹಿಂಪಡೆದು ಹೊಸದಾಗಿ ಸುತ್ತೋಲೆ ಹೊರಡಿಸುವ ಸಾಧ್ಯತೆಯೂ ಇದೆ ಎಂದು ವಿವರಿಸಿದರು.
ಆಗ ನ್ಯಾಯಪೀಠ, ನವೆಂಬರ್ 1ರಿಂದ ಸುತ್ತೋಲೆ ಜಾರಿಗೆ ಬರಲಿದ್ದು, ಅಲ್ಲಿಯವರೆಗೆ ಸುತ್ತೋಲೆ ಜಾರಿ ಮಾಡುವಂತೆ ಕಡ್ಡಾಯಗೊಳಿಸಬಾರದು ಎಂಬುದು ಅರ್ಜಿದಾರರ ಮನವಿಯಾಗಿದೆ ಎಂದು ತಿಳಿಸಿತು. ಇದಕ್ಕೆ ಸರ್ಕಾರದ ಪರ ವಕೀಲರು, ಅರ್ಜಿದಾರರ ವಿರುದ್ಧ ಯಾವುದೇ ಆತುರದ ಕ್ರಮ ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡಿದರು.
ಇದನ್ನು ಆಲಿಸಿದ ನ್ಯಾಯಪೀಠ, ಸುತ್ತೋಲೆಯನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಒತ್ತಾಯಿಸುವುದಿಲ್ಲ ಎಂಬುದಾಗಿ ಸರ್ಕಾರ ತಿಳಿಸಿದೆ ಎಂಬ ಅಂಶವನ್ನು ದಾಖಲಿಸಿಕೊಂಡು ಅರ್ಜಿ ವಿಚಾರಣೆಯನ್ನು ನವೆಂಬರ್ 12ಕ್ಕೆ ಮುಂದೂಡಿತು.