ಬೆಂಗಳೂರು: ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಗೆ (ಕೆಎಟಿ) ಕನ್ನಡದಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಕನ್ನಡ ಭಾಷೆಯಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಕೆಎಟಿ ಆದೇಶವನ್ನು ರದ್ದುಪಡಿಸಿದೆ.

ಕೆಎಟಿ ಕ್ರಮ ಪ್ರಶ್ನಿಸಿ ಕಲಬುರಗಿಯ ಛಾಯಾಗ್ರಾಹಕ ಸೂರ್ಯಕಾಂತ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಅಶೋಕ ಎಸ್. ಕಿಣಗಿ ಹಾಗೂ ನ್ಯಾಯಮೂರ್ತಿ ಸುಬ್ರಹ್ಮಣ್ಯ ರಂಗರಾವ್ ಅವರಿದ್ದ ವಿಭಾಗೀಯ ನ್ಯಾಯಪೀಠ (ಕಲಬುರಗಿ) ಕೆಎಟಿಗೆ ಕನ್ನಡದಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಯಾವುದೇ ಸಂಪೂರ್ಣ ನಿರ್ಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.

ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ನಿಯಮಾವಳಿ-1990ರ ನಿಯಮ 9(iii) ಅನ್ನು ಪರಿಶೀಲಿಸಿದ ನ್ಯಾಯಪೀಠ, ಈ ನಿಯಮದ ಪ್ರಕಾರ ನ್ಯಾಯಮಂಡಳಿಗೆ ಸಲ್ಲಿಸುವ ಎಲ್ಲ ಕೋರಿಕೆ, ಪ್ರಮಾಣಪತ್ರ, ಒಡಂಬಡಿಕೆ (ಮೆಮೊರಾಂಡಮ್), ದಾಖಲೆಗಳ ಪಟ್ಟಿಗಳು ಹಾಗೂ ದಾಖಲೆಗಳನ್ನು ಇಂಗ್ಲಿಷ್ ಅಥವಾ ಕನ್ನಡದಲ್ಲಿ ಸಲ್ಲಿಸಬಹುದು. 1990ರ ನಿಯಮಗಳ ನಿಯಮ 9(iii)ರ ಪ್ರಕಾರ ಅರ್ಜಿದಾರರು ಕನ್ನಡದಲ್ಲಿ ಅರ್ಜಿ ಸಲ್ಲಿಸಿರುವುದು ಸರಿಯಾಗಿದೆ ಎಂದು ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕಾರ್ಯವಿಧಾನ) ನಿಯಮಗಳು-1986ರ ನಿಯಮಗಳ ಜತೆಗೆ 1990ರ ನಿಯಮಾವಳಿಯನ್ನೂ ಪರಿಗಣಿಸಬೇಕಿತ್ತು. ಆದರೆ, ನ್ಯಾಯಮಂಡಳಿ ಈ ಮೂಲಭೂತ ಅಂಶವನ್ನು ಸರಿಯಾಗಿ ಪರಿಗಣಿಸದೆ ಆದೇಶ ಹೊರಡಿಸಿದೆ. ಇಂತಹ ಮೂಲಭೂತ ಅಂಶವನ್ನು ನ್ಯಾಯಮಂಡಳಿ ಸರಿಯಾಗಿ ಪರಿಗಣಿಸಿಲ್ಲ ಹಾಗೂ ಆಕ್ಷೇಪಾರ್ಹ ಆದೇಶ ಹೊರಡಿಸುವಲ್ಲಿ ತಪ್ಪು ಮಾಡಿದೆ ಎಂದು ಪೀಠ ತಿಳಿಸಿದೆ. 2025ರ ಜೂನ್ 5ರಂದು ಕೆಎಟಿ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿತಲ್ಲದೆ, ಮೂಲ ಅರ್ಜಿಯನ್ನು ಕಾನೂನಿನ ಪ್ರಕಾರ ವಿಲೇವಾರಿ ಮಾಡುವಂತೆ ನ್ಯಾಯಮಂಡಳಿಗೆ ನಿರ್ದೇಶಿಸಿದೆ.

ಪ್ರಕರಣವೇನು? :

ಅರ್ಜಿದಾರರು ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಪ್ರಶ್ನಿಸಿ ಕೆಎಟಿಗೆ ಕನ್ನಡದಲ್ಲಿ ಮೂಲ ಅರ್ಜಿ ಸಲ್ಲಿಸಿದ್ದರು. 2025ರ ಜೂನ್ 5ರಂದು ನ್ಯಾಯಮಂಡಳಿಯು, ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕಾರ್ಯವಿಧಾನ) ನಿಯಮಗಳು-1986ರ ನಿಯಮ 3 ಅನ್ನು ಉಲ್ಲೇಖಿಸಿದ್ದ ನ್ಯಾಯಮಂಡಳಿಯು ಅರ್ಜಿಯನ್ನು ಇಂಗ್ಲಿಷ್‌ನಲ್ಲಿ ಸಲ್ಲಿಸುವಂತೆ ಸೂಚಿಸಿ ಹಿಂದಿರುಗಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲ ಶಂಕರ್‌ ಕಟ್ಟೀಮನಿ ಅವರು, 1986ರ ನಿಯಮಗಳ ನಿಯಮ 3ರ ಪ್ರಕಾರ ಕನ್ನಡದಲ್ಲಿ ದಾಖಲೆಗಳನ್ನು ಸಲ್ಲಿಸಲು ಅವಕಾಶವಿದೆ. ಅಲ್ಲದೆ, ನ್ಯಾಯಮಂಡಳಿಯು ತನ್ನ ವಿವೇಚನೆಯ ಪ್ರಕಾರ ವಿಚಾರಣೆಯಲ್ಲಿ ಕನ್ನಡ ಬಳಕೆಗೆ ಅನುಮತಿ ನೀಡಬಹುದು. ಅಂತಿಮ ಆದೇಶ ಮಾತ್ರ ಇಂಗ್ಲಿಷ್‌ನಲ್ಲಿ ಇರಬೇಕು ಎಂದು ಪ್ರತಿಪಾದಿಸಿದ್ದರು. ರಾಜ್ಯ ಸರ್ಕಾರದ ಪರ ಹೆಚ್ಚುವರಿ ಸರ್ಕಾರಿ ವಕೀಲರು, ನ್ಯಾಯಮಂಡಳಿಯಲ್ಲಿ ಅರ್ಜಿಗಳನ್ನು ಇಂಗ್ಲಿಷ್‌ನಲ್ಲಿ ಸಲ್ಲಿಸಬೇಕು ಎಂದು ವಾದ ಮಂಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor