ಸಜ್ಜೆಪಾಳ್ಯ 44 ಎಕರೆ ಆಸ್ತಿ ವ್ಯಾಜ್ಯ ವಿವಾದ : ಒಕ್ಕಲಿಗರ ಸಂಘಕ್ಕೆ ಹೈಕೋರ್ಟ್ನಲ್ಲಿ ಭಾರಿ ಹಿನ್ನಡೆ
ಬೆಂಗಳೂರು: ಯಶವಂತಪುರ ಹೋಬಳಿಯ ಶ್ರೀಗಂಧ ಕಾವಲು ವ್ಯಾಪ್ತಿಯ ಸಜ್ಜೆಪಾಳ್ಯದಲ್ಲಿರುವ ವಿವಾದಿತ 44 ಎಕರೆ ಜಮೀನಿನ ಹಕ್ಕಿನ ವ್ಯಾಜ್ಯದಲ್ಲಿ ಒಕ್ಕಲಿಗರ ಸಂಘಕ್ಕೆ ಭಾರಿ ಹಿನ್ನಡೆಯಾಗಿದ್ದು, ಜಮೀನಿನ ಮೂಲ ವಾರಸುದಾರರ ಪರವಾಗಿ ಹೈಕೋರ್ಟ್ ತೀರ್ಪು ಪ್ರಕಟಿಸಿದೆ.
ಲೇಔಟ್ ನಕ್ಷೆ ಮಂಜೂರು ಮಾಡಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೈಗೊಂಡಿರುವ ನಿರ್ಣಯ ಮತ್ತು ಕಂದಾಯ ದಾಖಲೆಗಳ ನಮೂದು ರದ್ದು ಕೋರಿ ಒಕ್ಕಲಿಗರ ಸಂಘದ ಕೃಷ್ಣಪ್ಪ ರಂಗಮ್ಮ ಶಿಕ್ಷಣ ಟ್ರಸ್ಟ್‌ನ ಅಧಿಕೃತ ಕಾರ್ಯದರ್ಶಿ ಎಚ್.ಎನ್. ಅಶೋಕ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿ ಆದೇಶಿಸಿದೆ.
ಪ್ರಕರಣವೇನು? :
ಸಜ್ಜೆಪಾಳ್ಯದ ಸರ್ವೇ ನಂಬರ್ 15ರಲ್ಲಿದ್ದ 44 ಎಕರೆ ಜಮೀನನ್ನು ದಿವಂಗತ ರಂಗಮ್ಮ ಅವರು ಬಿ.ಎಂ. ಪುಟ್ಟಸ್ವಾಮಿ ಎಂಬುವರಿಗೆ ಉಯಿಲು ಬರೆದುಕೊಟ್ಟಿದ್ದರು. 1978ರಲ್ಲಿ ಭೂ ಸುಧಾರಣೆ ಕಾಯ್ದೆಯ ಗರಿಷ್ಠ ಭೂ ಮಿತಿಯಿಂದ ವಿನಾಯಿತಿ ಪಡೆಯಲು ಪುಟ್ಟಸ್ವಾಮಿ ಅವರು ಒಕ್ಕಲಿಗರ ಸಂಘದ ಜತೆ ಟ್ರಸ್ಟ್ ಡೀಡ್ ಮಾಡಿಕೊಂಡಿದ್ದರು. ಆದರೆ, ಈ ಟ್ರಸ್ಟ್ ಡೀಡ್ ಜಾರಿಗೆ ಬಂದಿರಲಿಲ್ಲ. ಪುಟ್ಟಸ್ವಾಮಿ ಅವರ ನಿಧನದ ಬಳಿಕ ಅವರ ಪುತ್ರ ಬಿ.ಪಿ. ಮಹೇಂದ್ರ ಆಸ್ತಿಯ ಮೇಲಿನ ಹಕ್ಕು ಸಾಧಿಸಿ ಕಾನೂನು ಹೋರಾಟ ಮುಂದುವರಿಸಿದ್ದರು.
ಹೈಕೋರ್ಟ್ ಆದೇಶವೇನು? :
ಒಕ್ಕಲಿಗರ ಸಂಘ ಅವಲಂಬಿಸಿದ್ದ 1978ರ ಟ್ರಸ್ಟ್ ಡೀಡ್ ಜಾರಿಗೆ ಬಂದಿರಲಿಲ್ಲ ಮತ್ತು ಅದರ ಆಧಾರದಡಿ ಸಂಘಕ್ಕೆ ಆಸ್ತಿಯ ಮೇಲೆ ಯಾವುದೇ ಹಕ್ಕು ಉಂಟಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ವಿವಾದಿತ ಆಸ್ತಿಯ ಮೇಲೆ ಸಂಘಕ್ಕಾಗಲೀ ಅಥವಾ ಟ್ರಸ್ಟ್‌ಗಾಗಲೀ ಯಾವುದೇ ಹಕ್ಕು, ಸ್ವಾಮ್ಯ ಅಥವಾ ಆಸಕ್ತಿ ಉಳಿಯುವುದಿಲ್ಲ. ದಿವಂಗತ ರಂಗಮ್ಮ ಹಾಗೂ ಬಿ.ಎಂ.ಪುಟ್ಟಸ್ವಾಮಿ ಅವರ ವಿಲ್‌ಗಳ ಆಧಾರದಡಿ ಬಿ.ಪಿ.ಮಹೇಂದ್ರ ಅವರಿಗೆ ಮಾತ್ರವೇ ಆಸ್ತಿ ನಿರ್ವಹಿಸುವ, ಬಳಸಿಕೊಳ್ಳುವ ಹಾಗೂ ಮಾರಾಟ ಮಾಡುವ ಹಕ್ಕು ಇರುತ್ತದೆ ಎಂದು ಸ್ಪಷ್ಟಪಡಿಸಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅನುಮೋದಿಸಿದ್ದ ಬಡಾವಣೆಯ ವಿನ್ಯಾಸವನ್ನು ಎತ್ತಿಹಿಡಿದಿರುವ ನ್ಯಾಯಪೀಠ, ಸಂಘವು ಸಹಾಯಕ ಆಯುಕ್ತರ ಮುಂದೆ ಆರಂಭಿಸಿದ್ದ ಕಂದಾಯ ಪ್ರಕ್ರಿಯೆಗಳನ್ನೂ ರದ್ದುಪಡಿಸಿದೆ.
ನಾಲ್ಕು ದಶಕಗಳ ವ್ಯಾಜ್ಯ :
ಕಳೆದ ನಾಲ್ಕು ದಶಗಳಿಗೂ ಹೆಚ್ಚಿನ ಕಾಲದಿಂದ ನಡೆಯುತ್ತಿರುವ ಈ ಆಸ್ತಿ ವಿವಾದದಲ್ಲಿ ಒಕ್ಕಲಿಗರ ಸಂಘ ಮತ್ತು ದಾವೆದಾರರ ನಡುವೆ ನಡೆದಿದ್ದ ರಾಜಿ ಪ್ರಕ್ರಿಯೆಯಡಿ 6 ಎಕರೆ 20 ಗುಂಟೆ ಜಮೀನಿನ ಮೇಲೆ ಸಂಘ ಹಕ್ಕು ಪಡೆಯುವ ಪ್ರಯತ್ನ ನಡೆಸಿತ್ತು. ಆದರೆ, ಅಗತ್ಯ ಕೋರ್ಟ್ ಶುಲ್ಕ ಪಾವತಿಸದ ಕಾರಣದಿಂದ ಅಂತಿಮವಾಗಿ ವಿಫಲವಾಗಿತ್ತು.