ಬೆಂಗಳೂರು : ಚಿತ್ರ ನಟ ದುನಿಯಾ ವಿಜಯ್‌ ಅಲಿಯಾಸ್‌ ಬಿ.ಆರ್‌.ವಿಜಯ್‌ ಕುಮಾರ್‌ ಹಾಗೂ ಅವರ ಮೊದಲ ಪತ್ನಿ ನಾಗರತ್ನ ನಡುವಿನ ವಿಚ್ಛೇದನಕ್ಕೆ ಹೈಕೋರ್ಟ್‌ ಅನುಮತಿಸಿದೆ.

ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ವಿಜಯ್‌ ಸಲ್ಲಿಸಿದ್ದ ಮೇಲ್ಮನವಿ (ಎಂಎಫ್‌ಎ) ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಡಿ.ಕೆ. ಸಿಂಗ್‌ ಹಾಗೂ ನ್ಯಾಯಮೂರ್ತಿ ಎಚ್‌. ಶಾಂತಿಭೂಷಣ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ಪ್ರಕಟಿಸಿತು.

ಮೇಲ್ಮನವಿ ಮಾನ್ಯ ಮಾಡಿರುವ ನ್ಯಾಯಪೀಠ, ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಪಡಿಸಿ, ವಿಚ್ಛೇದನ ನೀಡಿದೆ. ಜತೆಗೆ, ವಿಜಯ್ ಅವರು ನಾಗರತ್ನ ಅವರಿಗೆ 3 ತಿಂಗಳ‌ ಒಳಗೆ 2 ಕೋಟಿ ರೂ. ಜೀವನಾಂಶ ಪಾವತಿಸಬೇಕೆಂದು ಆದೇಶಿಸಿದೆ. ವಿಸ್ತೃತ ತೀರ್ಪು ಇನ್ನಷ್ಟೇ ಲಭ್ಯವಾಗಬೇಕಿದೆ.

 ಹೊಸ ಬದುಕಿನ ಪ್ರಯಾಣದತ್ತ ಹೆಜ್ಜೆ:

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ನಟ ದುನಿಯಾ ವಿಜಯ್​, "ನ್ಯಾಯಾಲಯದ ಆದೇಶಕ್ಕೆ ಶಿರಸಾಷ್ಟಾಂಗ ಪ್ರಣಾಮಗಳೊಂದಿಗೆ ಶರಣಾಗಿದ್ದೇನೆ. ಕಾನೂನಿನ ಮೇಲಿನ ನಂಬಿಕೆ ಮತ್ತಷ್ಟು ಹೆಚ್ಚಾಗಿದೆ. ನನ್ನ ಮೇಲಿನ ಮಾನಸಿಕ ಕ್ರೌರ್ಯವನ್ನು ಪರಿಗಣಿಸಿ, ಮಾನ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ  ಡಿ.ಕೆ. ಸಿಂಗ್ ಹಾಗೂ ಶಾಂತಿಭೂಷಣ್ ಅವರ ಆದೇಶಕ್ಕೆ ತಲೆಬಾಗಿದ್ದೇನೆ. ಈ ಆದೇಶಕ್ಕೆ ನನ್ನ ಗೌರವಪೂರ್ವಕ ಧನ್ಯವಾದಗಳು. ಹಾಗೆಯೇ ನನ್ನ ವಕೀಲರಾದ ಹಿರಿಯ ಕೌನ್ಸಿಲ್ ಶ್ರೀವತ್ಸ ಹಾಗೂ ಯುಕ್ತ ಅನಿಲ್ ಅವರಿಗೆ ನನ್ನ ಹೃತ್ತೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಮಾಧ್ಯಮಗಳಲ್ಲಾಗಲಿ ಅಥವಾ ಸಾರ್ವಜನಿಕವಾಗಲಿ ಮಾತನಾಡಲು ಇಚ್ಛಿಸುವುದಿಲ್ಲ. ನನ್ನ ಹೆಣ್ಣುಮಕ್ಕಳು ವಯಸ್ಕರಾಗಿದ್ದು, ಸಮಾಜದಲ್ಲಿ ತಮ್ಮದೇ ಆದ ಸ್ಥಾನಮಾನ ಗಳಿಸಿದ್ದಾರೆ; ಅವರಿಗೆ ಯಾವುದೇ ಮುಜುಗರವಾಗಬಾರದು. 'ಮಕ್ಕಳ ಭವಿಷ್ಯ ಹಾಗೂ ಹಿತದೃಷ್ಟಿಯಿಂದ, ನನ್ನ ವೈಯಕ್ತಿಕ ಸಾಂಸಾರಿಕ ವಿಚಾರಕ್ಕೆ ನ್ಯಾಯಾಲಯ ನೀಡಿದ ಆದೇಶವನ್ನು ಆತ್ಮಸಾಕ್ಷಿಯಿಂದ ಸ್ವೀಕರಿಸಿದ್ದು, ಇಲ್ಲಿಂದ ಹೊಸ ಬದುಕಿನ ಪ್ರಯಾಣದತ್ತ ಹೆಜ್ಜೆ ಹಾಕುತ್ತಿದ್ದೇನೆ. ನಿಮ್ಮ ಆಶೀರ್ವಾದ ಮತ್ತು ಹಾರೈಕೆ ಹೀಗೆಯೇ ಇರಲಿ" ಎಂದು ಬರೆದುಕೊಂಡಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor