ಐಎಎಸ್ ಅಧಿಕಾರಿ ಫೌಝಿಯಾ ತರನ್ನುಮ್ ಬಗ್ಗೆ ವಿವಾದಾತ್ಮಕ ಹೇಳಿಕೆ; ಎಂಎಲ್ಸಿ ಎನ್.ರವಿಕುಮಾರ್ ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಬೆಂಗಳೂರು : ಕಲಬುರಗಿಯಲ್ಲಿ ನಡೆದಿದ್ದ ಬಿಜೆಪಿ ಪ್ರತಿಭಟನೆ ವೇಳೆ ಐಎಎಸ್ ಅಧಿಕಾರಿ ಫೌಝಿಯಾ ತರನ್ನುಮ್ ಅವರು ಭಾರತೀಯರೋ ಅಥವಾ ಪಾಕಿಸ್ತಾನಿಯೋ ಎಂದು ಹೇಳಿಕೆ ನೀಡಿದ ಆರೋಪದಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದು ಕೋರಿ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಎನ್. ರವಿಕುಮಾರ್ ಸಲ್ಲಿಸಿದ್ದ ಅರ್ಜಿ ಕುರಿತ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ.
ಕಲಬುರಗಿ ಜಿಲ್ಲಾಧಿಕಾರಿಯಾಗಿದ್ದ ಫೌಝಿಯಾ ತರನ್ನುಮ್ ಅವರ ಬಗ್ಗೆ ವಿವಾದಾತ್ಮ ಹೇಳಿಕೆ ನೀಡಿದ ಆರೋಪದಲ್ಲಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಎನ್. ರವಿಕುಮಾರ್ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಅರ್ಜಿದಾರರು ಹಾಗೂ ಪ್ರತಿವಾದಿಗಳ ವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಪೀಠ, ತೀರ್ಪು ಕಾಯ್ದಿರಿಸಿತು.
ಆಡು ಭಾಷೆಯಲ್ಲಿ ‘ಪಾಕಿಸ್ತಾನ’ ಬಳಕೆ:
ಇದಕ್ಕೂ ಮುನ್ನ ರವಿ ಕುಮಾರ್ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರು ಉದ್ದೇಶಪೂರ್ವಕವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಆಡುಭಾಷೆಯಲ್ಲಿ ಪಾಕಿಸ್ತಾನ ಎಂದು ಬಳಸಿದ್ದಾರೆಯೇ ಹೊರತು ಧರ್ಮದ ಆಧಾರದಲ್ಲಿ ಅಲ್ಲ. ಪಾಕಿಸ್ತಾನ ಎಂದರೆ ಕಾನೂನು ಪಾಲನೆಯಾಗದ ದೇಶ ಎಂದರ್ಥ. ಸಾಮಾನ್ಯವಾಗಿ “ನಾನೇನು ಹಳ್ಳಿಯಿಂದ ಅಥವಾ ದೂರದ ಸ್ಥಳದಿಂದ ಬಂದಿಲ್ಲ” ಎಂದು ಹೇಳುವಾಗ “ನಾನೇನು ಅಂಡಮಾನ್‌ನಿಂದ ಬಂದಿಲ್ಲ” ಎಂದು ಹೇಳಲಾಗುತ್ತದೆ. ಅದೇ ರೀತಿ ಕಾನೂನು ಪಾಲನೆಯಾಗದ ದೇಶವಾಗಿರುವ ಪಾಕಿಸ್ತಾನವನ್ನು ಉಲ್ಲೇಖಿಸಲಾಗಿದೆ. ಏಕೆಂದರೆ, ಅಲ್ಲಿ ಕಾನೂನು ಎನ್ನುವುದೇ ಇಲ್ಲ. ಪ್ರಧಾನಮಂತ್ರಿಗಳಿಗೇ ಗುಂಡು ಹಾರಿಸಲಾಗುತ್ತದೆ. ಈ ಪ್ರಕರಣದಲ್ಲಿ ತಿರಂಗಾ ಯಾತ್ರೆಗೆ ಅಧಿಕಾರಿ ಅಡ್ಡಿಪಡಿಸಿದ್ದರೆಂಬ ಕಾರಣಕ್ಕೆ ಇಲ್ಲಿ ಯಾವುದೇ ಕಾನೂನು ಪಾಲನೆಯಾಗುತ್ತಿಲ್ಲ, ಅಧಿಕಾರಿ ಏನು ಪಾಕಿಸ್ತಾನದಿಂದ ಬಂದಿದ್ದಾರೆಯೇ ಎಂಬರ್ಥದಲ್ಲಿ ಪ್ರಶ್ನಿಸಿದ್ದಾರೆ ಎಂದು ಸಮಜಾಯಿಷಿ ನೀಡಲು ಮುಂದಾದರು.
ಈ ವಾದವನ್ನೊಪ್ಪದ ನ್ಯಾಯಪೀಠ, ಯಾವ ಆಡುಭಾಷೆಯೂ ಇಲ್ಲ ಸುಮ್ಮನಿರಿ. ಈಗ ನೀವು ಹೇಳುತ್ತಿರುವುದೆಲ್ಲ ಹೊಸ ಆವಿಷ್ಕಾರ. ಈಗಾಗಲೇ ನೀವು ನೀಡಿರುವ ಹೇಳಿಕೆ ಇದ್ಯಾವುದೂ ಅಲ್ಲ. ಇದನ್ನೆಲ್ಲ ಇಲ್ಲಿ ಹೇಳಬೇಡಿ ಎಂದು ಅರ್ಜಿದಾರರ ಪರ ವಕೀಲರ ವಾದವನ್ನು ಅರ್ಧಕ್ಕೇ ತಡೆ ಹಿಡಿಯಿತು.