ನಾಪತ್ತೆಯಾದವರ ಬಗ್ಗೆ ದೂರು ದಾಖಲಾತಿಗೆ ಹೈಕೋರ್ಟ್ ಮಾರ್ಗಸೂಚಿ
ಬೆಂಗಳೂರು : ಕಾಣೆಯಾದ ವ್ಯಕ್ತಿಗಳ ಬಗ್ಗೆ ದೂರು ದಾಖಲಿಸುವ ಸಂದರ್ಭದಲ್ಲಿ ತಮ್ಮ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವುದಿಲ್ಲವೆಂಬ ಕಾರಣ ನೀಡಿ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಬಾರದು ಎಂದು ಆದೇಶಿರುವ ಹೈಕೋರ್ಟ್, ಅಂತಹ ದೂರುಗಳು ಬಂದಾಗ ಪೊಲೀಸರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ನಾಪತ್ತೆಯಾಗಿರುವ ಮಗಳನ್ನು ಪತ್ತೆ ಹಚ್ಚಲು ಪೊಲೀಸರು ವಿಫಲರಾಗಿದ್ದಾರೆಂದು ಆಕ್ಷೇಪಿಸಿ ಹುಬ್ಬಳ್ಳಿಯ ರಾಮಕೃಷ್ಣ ಭಟ್ ಎಂಬುವರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಧಾರವಾಡದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ. ಜತೆಗೆ, ಹಾಲಿ ಪ್ರಕರಣದಲ್ಲಿ ಪೊಲೀಸರು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿ, ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ಮುಂದೂಡಿದೆ.
ಹೈಕೋರ್ಟ್ ಹೇಳಿದ್ದೇನು?
ಕಾಣೆಯಾದವರ ಕುರಿತ ದೂರುಗಳು ತಮ್ಮ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವುದಿಲ್ಲವೆಂದು ತಿಳಿಸಿ ಯಾವುದೇ ದೂರನ್ನು ಪೊಲೀಸರು ನಿರಾಕರಿಸುವಂತಿಲ್ಲ ಹಾಗೂ ನಾಪತ್ತೆ ಅಥವಾ ಕಾಣೆಯಾಗಿರುವ ದೂರುಗಳು ಬಂದರೆ ಅವುಗಳನ್ನು ದಾಖಲಿಸಿಕೊಳ್ಳಬೇಕು ಮತ್ತು ಆ ಕುರಿತು ಮಾನವ ಕಳ್ಳ ಸಾಗಾಣೆ ಘಟಕ/ಕೋಶಕ್ಕೆ ಮಾಹಿತಿಯನ್ನು ಒದಗಿಸಬೇಕು. ಆ ಮಾಹಿತಿಯನ್ನು ಅದೇ ಉದ್ದೇಶಕ್ಕಾಗಿ ಸೃಷ್ಟಿಸಿರುವ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಬೇಕು. ತನಿಖಾಧಿಕಾರಿ ಆ ಬಗ್ಗೆ ಸಿಐಡಿಗೂ ಮಾಹಿತಿ ನೀಡಿ, ಅಂತರರಾಜ್ಯ ಪರಿಣಾಮಗಳ ಬಗ್ಗೆ ಅವಲೋಕಿಸಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಸಮಯ ಕಳೆದಂತೆ, ತಂತ್ರಜ್ಞಾನ ಬದಲಾದಂತೆ ನಾಪತ್ತೆ ಅಥವಾ ಕಣ್ಮರೆಯಾದ ವ್ಯಕ್ತಿಗಳಿಗೆ ಸಂಬಂಧಿಸಿದ ದೂರುಗಳ ಕುರಿತ ಮಾರ್ಗಸೂಚಿಗಳೂ ಸಹ ಬದಲಾಗುವ ಅಗತ್ಯವಿದೆ ಎಂದಿರುವ ನ್ಯಾಯಪೀಠ, ಭಾರತ ಸರ್ಕಾರ ಈ ಸಂಬಂಧ 2009ರಲ್ಲಿ ಹೊರಡಿಸಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ಮತ್ತು 2016ರಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹೊರಡಿಸಿರುವ ಎಸ್‌ಒಪಿ ಆಧರಿಸಿ ರಾಜ್ಯ ಸರ್ಕಾರ ಅಗತ್ಯ ಸುತ್ತೋಲೆ/ ಅಧಿಸೂಚನೆಯನ್ನು ಹೊರಡಿಸಬೇಕೆಂದು ನಿರ್ದೇಶಿಸಿದೆ.
ನಾಪತ್ತೆಯಾಗಿರುವ ವ್ಯಕ್ತಿಗಳ ಬಗ್ಗೆ ದೂರುಗಳನ್ನು ಸ್ವೀಕರಿಸಿದ ಬಳಿಕ ಆ ಬಗ್ಗೆ ಸೂಕ್ತ ತನಿಖೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾದ್ದು ಪೊಲೀಸ್ ಅಧಿಕಾರಿಗಳ ಕರ್ತವ್ಯ. ಈ ವಿಚಾರದಲ್ಲಿ ಪೊಲೀಸರು ನಿರ್ದೇಶನಗಳನ್ನು ಪಾಲಿಸದೆ ಇದ್ದಾಗ ಅಂತಹ ಅಧಿಕಾರಿಯ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಪೊಲೀಸರು ನಡೆಸಿರುವ ತನಿಖೆಯ ಪರಿಶೀಲನೆಗೆ ಸಮಿತಿಗಳನ್ನು ರಚಿಸಬೇಕು ಮತ್ತು ಆ ಸಮಿತಿ ಇಂತಹ ವಿಚಾರಗಳಲ್ಲಿ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ನ ನಿರ್ದೇಶನಗಳು ಮತ್ತು ಕೇಂದ್ರ ಹಾಗೂ ರಾಜ್ಯಗಳ ಎಸ್‌ಒಪಿಗಳನ್ನು ಪಾಲನೆ ಮಾಡಲಾಗಿದೆಯೇ ಇಲ್ಲವೋ ಎಂಬುದನ್ನು ಅವಲೋಕಿಸಬೇಕು ಎಂದು ಆದೇಶಿಸಿದೆ.
ಹೈಕೋರ್ಟ್ ಮಾರ್ಗಸೂಚಿ:
► ನಾಪತ್ತೆಯಾಗಿರುವ ವ್ಯಕ್ತಿಗಳ ಬಗ್ಗೆ ದೂರುಗಳನ್ನು ಪ್ರಾಮಾಣಿಕವಾಗಿ ದಾಖಲು ಮಾಡಿಕೊಳ್ಳಬೇಕು. ಆ ದೂರುಗಳು ಕಾಣೆಯಾದ ಮಹಿಳೆ/ಅಪ್ರಾಪ್ತ ವಯಸ್ಕರಿಗೆ ಸಂಬಂಧಿಸಿದೆಯೇ ಅಥವಾ ಯಾವುದೇ ಇತರ ವ್ಯಕ್ತಿಗೆ ಸಂಬಂಧಿಸಿದೆಯೇ ಎಂಬುದನ್ನು ಸಂಬಂಧಿತ ಶಾಸನಬದ್ಧ ಪ್ರಾಧಿಕಾರಗಳು ನಿರ್ದಿಷ್ಟವಾಗಿ ಗಮನಿಸಿದ ನಂತರ ಮಾನವ ಕಳ್ಳ ಸಾಗಣೆ ಘಟಕ/ಕೋಶಕ್ಕೆ ಮಾಹಿತಿ ನೀಡಬೇಕು.
► ಯಾವುದೇ ದೂರನ್ನು ಯಾವುದೇ ಸಂದರ್ಭಗಳಲ್ಲಿಯೂ, ಯಾವುದೇ ಪೊಲೀಸ್ ಅಧಿಕಾರಿಗಳು ತಿರಸ್ಕರಿಸಬಾರದು ಮತ್ತು ಅಂತಹ ಪ್ರತಿಯೊಂದು ದೂರನ್ನು ತಕ್ಷಣವೇ ಪರಿಗಣಿಸಿ, ಆ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು.
► ವ್ಯಕ್ತಿಯ ಮೃತದೇಹಗಳು ನಂತರ ಪತ್ತೆಯಾದರೆ, ತನಿಖಾ ಅಧಿಕಾರಿಗಳು ಡಿಎನ್‌ಎ ವಿಶ್ಲೇಷಣೆಯ ಮೂಲಕ ಹೋಲಿಕೆ ಮಾಡಲು ಸಾಧ್ಯವಾಗುವಂತೆ ಕಾಣೆಯಾದ ವ್ಯಕ್ತಿಯ ಕುಟುಂಬ ಸದಸ್ಯರ ಫೋರೆನ್ಸಿಕ್ ಪುರಾವೆಗಳನ್ನು ಪಡೆದುಕೊಳ್ಳಬೇಕು.
► ಕಾಣೆಯಾದ ವ್ಯಕ್ತಿಯ ಇತ್ತೀಚಿನ ಭಾವಚಿತ್ರವನ್ನು ಸಂಗ್ರಹಿಸಿ ಅದರ ಪ್ರತಿಗಳನ್ನು ಎಯುಟಿಎಚ್‌ಯು, ಸಿಐಡಿ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋಗಳಿಗೂ ಒದಗಿಸಬೇಕು.
► ಕಾಣೆಯಾದವರ ದೂರಿನ ವಿವರಗಳನ್ನು ದೂರು ದಾಖಲಾದ 24 ಗಂಟೆಗಳ ಒಳಗೆ ಬೀಟ್ ಪೊಲೀಸ್ ಸಿಬ್ಬಂದಿ ಮತ್ತು ಹೊಯ್ಸಳ ಮುಂತಾದ ಮೊಬೈಲ್ ಪೊಲೀಸ್ ಘಟಕಗಳಿಗೆ ಎಲೆಕ್ಟ್ರಾನಿಕ್ ರೂಪದಲ್ಲಿ ರವಾನಿಸಬೇಕು.
► ಕಾಣೆಯಾದವರ ವಿವರಗಳನ್ನು (ಆ ನಿಟ್ಟಿನಲ್ಲಿಅಗತ್ಯ ಒಪ್ಪಿಗೆ ಪಡೆದ ನಂತರ) ಮಾನ್ಯತೆ ಪಡೆದ ದಿನಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ಹಾಗೂ ಆಡಿಯೊ ಮತ್ತು ವಿಡಿಯೊ ಸುದ್ದಿ ಜಾಲಗಳ ಮೂಲಕ ಪ್ರಕಟಿಸಬೇಕು. ದೂರಿನ ವಿವರಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪೋರ್ಟಲ್‌ಗಳಲ್ಲಿ ಹಾಗೂ ಇತರ ಪೋರ್ಟಲ್‌ಗಳಲ್ಲಿ ಅಪ್‌ಲೋಡ್ ಮಾಡಬೇಕು.