ವಿಜಯಪುರ ನೂತನ ವಿಮಾನ ನಿಲ್ದಾಣದಲ್ಲಿ ಪೈಲಟ್ ತರಬೇತಿ ಅಕಾಡೆಮಿ ಸ್ಥಾಪನೆ : ಎಂ.ಬಿ.ಪಾಟೀಲ್
ಬೆಂಗಳೂರು : ವಿಜಯಪುರದಲ್ಲಿ ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿರುವ ನೂತನ ವಿಮಾನ ನಿಲ್ದಾಣದಲ್ಲಿ ಕಾರ್ವರ್ ಏವಿಯೇಷನ್ ಸಂಸ್ಥೆಯು ಪೈಲಟ್ ತರಬೇತಿ ಅಕಾಡೆಮಿಯನ್ನು ಸ್ಥಾಪಿಸಲು ಮುಂದಾಗಿದ್ದು, ಇದರಿಂದ ರಾಜ್ಯದ ಯುವಕ-ಯುವತಿಯರಿಗೆ ಪೈಲಟ್ ತರಬೇತಿ ಪಡೆಯಲು ಸೌಲಭ್ಯ ದೊರೆಯಲಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕಾಡೆಮಿ ಸ್ಥಾಪನೆ, ಹ್ಯಾಂಗರ್ಸ್ ನಿರ್ಮಾಣ ಹಾಗೂ ತರಬೇತಿ ಮೂಲಸೌಕರ್ಯಕ್ಕಾಗಿ ಸಂಸ್ಥೆಯು ವಿಮಾನ ನಿಲ್ದಾಣದ ಆವರಣಕ್ಕೆ ಹೊಂದಿಕೊಂಡಂತೆ 25 ಎಕರೆ ಜಾಗವನ್ನು ಕೋರಿದೆ. ಯೋಜನೆ ಜಾರಿಯಾದರೆ ವಿಮಾನ ನಿಲ್ದಾಣದ ರನ್-ವೇ, ಟ್ಯಾಕ್ಸಿ-ವೇ ಹಾಗೂ ಏಪ್ರಾನ್ ಬಳಸಿಕೊಂಡು ಪೈಲಟ್ ತರಬೇತಿಯ ಜೊತೆಗೆ ವಿಮಾನಗಳ ದುರಸ್ತಿ ನಿರ್ವಹಣೆ ಮತ್ತು ಗ್ರೌಂಡ್ ಸಪೋರ್ಟ್ ಸೇವೆಗಳು ಲಭ್ಯವಾಗಲಿವೆ ಎಂದರು.
ಈ ಯೋಜನೆಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ವೈಮಾನಿಕ ಸಂಪರ್ಕ ಸುಧಾರಿಸುವುದಲ್ಲದೆ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನೂರಾರು ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಜೊತೆಗೆ ತರಬೇತಿಗೆ ಸೇರುವ ಸ್ಥಳೀಯ ವಿದ್ಯಾರ್ಥಿಗಳಿಗೆ ಕೋರ್ಸ್ ಶುಲ್ಕದಲ್ಲಿ ಆಕರ್ಷಕ ರಿಯಾಯಿತಿ ನೀಡುವುದಾಗಿ ಸಂಸ್ಥೆಯ ಅಧಿಕಾರಿಗಳು ಆಶ್ವಾಸನೆ ನೀಡಿದ್ದಾರೆ ಎಂದು ಎಂ.ಬಿ.ಪಾಟೀಲ್ ಹೇಳಿದರು.
ವಿಮಾನ ನಿಲ್ದಾಣವು ತ್ವರಿತವಾಗಿ ಕಾರ್ಯಾರಂಭ ಮಾಡಿದರೆ ಇಂತಹ ಮಹತ್ವದ ಯೋಜನೆಗಳನ್ನು ಜಾರಿಗೆ ತರಲು ಅನುಕೂಲವಾಗಲಿದೆ. ಈ ಅಕಾಡೆಮಿಯ ಕಾರ್ಯಚಟುವಟಿಕೆಗಳ ಅಂತಿಮ ಸ್ವರೂಪ ಮತ್ತು ಅನುಷ್ಠಾನದ ಕುರಿತು ಶೀಘ್ರದಲ್ಲೇ ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಎಂ.ಬಿ.ಪಾಟೀಲ್ ತಿಳಿಸಿದರು.