ಉದ್ಘಾಟನೆಗೆ ಸಜ್ಜಾದ ಮೆಟ್ರೋ ಗುಲಾಬಿ ಮಾರ್ಗ ಪರಿಶೀಲಿಸಿದ ಸಚಿವ ಕೃಷ್ಣಬೈರೇಗೌಡ: ಸೆಪ್ಟೆಂಬರ್ನಲ್ಲಿಯೇ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಸಾಧ್ಯತೆ
ಬೆಂಗಳೂರು : ಬೆಂಗಳೂರಿನ ಜಯದೇವ ಜಂಕ್ಷನ್‍ನಿಂದ ಕಾಳೇನ ಅಗ್ರಹಾರವರೆಗೆ ಗುಲಾಬಿ ಮಾರ್ಗ (ಪಿಂಕ್‍ಲೈನ್) ಉದ್ಘಾಟನೆಗೆ ಸಿದ್ಧವಾಗಿದ್ದು, ಬುಧವಾರ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ, ಸಂಸದ ತೇಜಸ್ವಿ ಸೂರ್ಯ, ಶಾಸಕ ಎಂ.ಕೃಷ್ಣಪ್ಪ ಅವರು ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, ಕೇಂದ್ರ ಸರಕಾರದಿಂದ ಉದ್ಘಾಟನೆ ದಿನಾಂಕ ನಿಗದಿಯಾದರೆ ಸೆಪ್ಟೆಂಬರ್ ನಲ್ಲಿಯೇ ಸಂಚಾರ ಆರಂಭಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರ ಮೆಟ್ರೋ ನಿಲ್ದಾಣಕ್ಕೆ ತೆರಳಿ ನಿಲ್ದಾಣದ ಕಾಮಗಾರಿ, ಭದ್ರತೆ ಮತ್ತು ಸಂಚಾರ ವ್ಯವಸ್ಥೆಯ ಬಗ್ಗೆ ಅಧಿಕಾರಿಗಳಿಂದ ಸಚಿವರು ಸಂಪೂರ್ಣ ಮಾಹಿತಿ ಪಡೆದುಕೊಂಡರು. ಅನಂತರ ಸಂಸದ ತೇಜಸ್ವಿ ಸೂರ್ಯ ಅವರೊಂದಿಗೆ ಮೆಟ್ರೋ ಲೋಕೋ ಪೈಲಟ್ ಕ್ಯಾಬಿನ್‍ನಲ್ಲಿ ಕುಳಿತು ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೂ ಸಂಚರಿಸಿ ಪರಿಶೀಲಿಸಿದರು.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಸಂಸದ ತೇಜಸ್ವಿ ಸೂರ್ಯ, ಬಿಎಂಆರ್ ಸಿಎಲ್ ಈ ಮಾರ್ಗವನ್ನು ಸೆಪ್ಟೆಂಬರ್ ತಿಂಗಳ ಅಂತ್ಯದೊಳಗೆ ಉದ್ಘಾಟಿಸುವ ಗುರಿ ಹೊಂದಿದ್ದು, ನಿಗದಿತ ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸಿ, ಉದ್ಘಾಟನೆಗೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಗುಲಾಬಿ ಮಾರ್ಗ ಆರಂಭವಾದರೆ ಬನ್ನೇರುಘಟ್ಟ ರಸ್ತೆಯ ಸಂಚಾರ ದಟ್ಟಣೆ ಗಣನೀಯವಾಗಿ ಕಡಿಮೆಯಾಗಲಿದೆ. ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತಷ್ಟು ಬಲಿಷ್ಠವಾಗಲಿದೆ. ಬೆಂಗಳೂರಿಗೆ ಬೇಕಿರುವುದು ಇಂತಹ ವೈಜ್ಞಾನಿಕ, ಹಾಗೂ ಸಂಚಾರ ದಟ್ಟಣೆ ಕಡಿಮೆ ಮಾಡುವ ಯೋಜನೆಗಳು. ನಗರದ ಹಿತದೃಷ್ಟಿಯಿಂದ ಇಂತಹ ಯೋಜನೆಗಳಿಗೆ ನಾಗರಿಕರು ಮತ್ತು ವಿರೋಧ ಪಕ್ಷವೂ ಬೆಂಬಲ ನೀಡಲಿದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಗುಲಾಬಿ ಮಾರ್ಗವು ಮೊದಲ ಹಂತದಲ್ಲಿ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂ-ಬಿ, ಜೆ.ಪಿ.ನಗರ 4ನೇ ಹಂತ, ಜಯದೇವ ಆಸ್ಪತ್ರೆ(ಹಳದಿ ಮಾರ್ಗದ ಜತೆ ಇಂಟರ್‍ಚೇಂಜ್) ಹಾಗೂ ತಾವರೆಕೆರೆ ನಿಲ್ದಾಣಗಳನ್ನು ಹೊಂದಿದೆ.