ಹೊಸದಿಲ್ಲಿ: ಕರ್ನಾಟಕದ ಇತಿಹಾಸದಲ್ಲೇ ಇಂದೆಂದೂ ಕಾಣದ ಭಾರಿ ಬೆಲೆ ಏರಿಕೆ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಜೇಬಿಗೆ ಕನ್ನ ಹಾಕಿದೆ. ತನ್ನ ಆರ್ಥಿಕ ದುರಾಡಳಿತ ಹಾಗೂ ಖಾಲಿ ಬೊಕ್ಕಸವನ್ನು ಮುಚ್ಚಿಕೊಳ್ಳಲು ಕೆಎಂಎಫ್ (KMF) ಮೂಲಕ ಮೊಸರಿನ ದರವನ್ನು ಅತಿರೇಕದ ಮಟ್ಟಕ್ಕೆ ಏರಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಸಿರುವ ಅವರು "ನಿನ್ನೆಯಷ್ಟೇ ರೈತರ ಹೆಸರು ಹೇಳಿ ನಂದಿನಿ ಹಾಲಿನ ದರ ಏರಿಕೆ ಮಾಡಿದ್ದ ಸರ್ಕಾರ ಇದೀಗ ನಂದಿನಿ ಮೊಸರಿನ ಬೆಲೆಯನ್ನೂ ಗಗನಕ್ಕೇರಿಸಿದೆ. ಹಾಲು, ಮೊಸರು, ತುಪ್ಪ ಹೀಗೆ ಇಡೀ KMF ಉತ್ಪನ್ನಗಳ ಬೆಲೆಯನ್ನು ದುಪ್ಪಟ್ಟು ಅಧಿಕಗೊಳಿಸಿ ಶ್ರೀಸಾಮಾನ್ಯರ ಜೇಬನ್ನು ಖಾಲಿ ಮಾಡುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಕರ್ನಾಟಕದ ಇತಿಹಾಸದಲ್ಲೇ ಮೊದಲೆನ್ನುವಂತೆ ಭಾರೀ ಬೆಲೆ ಏರಿಕೆ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಜೇಬಿಗೆ ಕನ್ನ ಹಾಕಿದೆ ಎಂದು ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಂ ಡಿಕೆಶಿ ನೇತೃತ್ವದ ಸರ್ಕಾರ, ತನ್ನ ಆರ್ಥಿಕ ದುರಾಡಳಿತ ಹಾಗೂ ಖಾಲಿ ಬೊಕ್ಕಸವನ್ನು ಮುಚ್ಚಿಕೊಳ್ಳಲು ಕೆಎಂಎಫ್ ಮೂಲಕ ಮೊಸರಿನ ದರವನ್ನು ಅತಿರೇಕ ಎನ್ನುವಂತೆ ಏರಿಸಿದೆ. ಈ ಸರ್ಕಾರಕ್ಕೆ ನಿಜಕ್ಕೂ ಶ್ರೀಸಾಮಾನ್ಯರ ಬಗ್ಗೆ ಕಾಳಜಿಯೇ ಇಲ್ಲವಾಗಿದೆ. ಪ್ರಸ್ತುತ ಅರ್ಧ ಲೀಟರ್ ಮೊಸರಿನ ಬೆಲೆಯನ್ನು 28ರೂ. ನಿಂದ 34ಕ್ಕೆ ಏರಿಸಿದ್ದು, ಶೇ.21.43ರಷ್ಟು ಅಂದರೆ 6 ರೂ. ಹೆಚ್ಚಿದೆ. ಒಂದು ಲೀಟರ್ ಮೊಸರಿನ ಬೆಲೆಯನ್ನು 54ರಿಂದ 68ಕ್ಕೆ ಅಂದರೆ ಶೇ.25.93ರಷ್ಟು ಲೀಟರ್ ಗೆ ಬರೋಬ್ಬರಿ 14 ರೂ.ಭಾರೀ ಏರಿಕೆ ಮಾಡಿದ್ದು, ಕಾಂಗ್ರೆಸ್ ಸರ್ಕಾರ ಜನರಿಗೆ ಮೊಸರು ಕೊಟ್ಟು ತಾನು ಬೆಣ್ಣೆ ತಿನ್ನುತ್ತಿದೆ.   

ನಿನ್ನೆಯಷ್ಟೇ ಹಾಲಿನ ದರವನ್ನು ಲೀಟರ್‌ಗೆ 8 ರೂ. ಹೆಚ್ಚಿಸಿದ್ದ ಸರ್ಕಾರ, ಈಗ ಒಂದೇ ಬಾರಿಗೆ ಶೇ.21ರಿಂದ 26% ರಷ್ಟು ಮೊಸರಿನ ಬೆಲೆಯನ್ನೂ ಏರಿಸಿ ಬಡ ಹಾಗೂ ಮಧ್ಯಮ ವರ್ಗದವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡಿದೆ ಎಂದು ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಅಭಿವೃದ್ಧಿಯನ್ನು ಮರೀಚಿಕೆಯಾಗಿಸಿದ ಕಾಂಗ್ರೆಸ್ ಸರ್ಕಾರ, ತನ್ನ ತಪ್ಪು ನಡೆ-ನಿರ್ಣಯ, ಯೋಜನೆಗಳಿಂದಾಗಿ ಈಗ KMF ಉತ್ಪನ್ನಗಳ ಬೆಲೆ ಏರಿಕೆ ಮೂಲಕ ರಾಜ್ಯದ ಕಡುಬಡವರಿಂದ ಸುಂಕ ವಸೂಲಿ ಮಾಡುತ್ತಿದ್ದು, ಇದು ಸರ್ಕಾರದ ಸಂಪೂರ್ಣ ಜನವಿರೋಧಿ ಹಾಗೂ ದುಬಾರಿ ನೀತಿಗೆ ಹಿಡಿದ ಕೈಗನ್ನಡಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor