×
Ad

ʼಗ್ಯಾರಂಟಿʼ ಫಲಾನುಭವಿಗಳ ಸಂಖ್ಯೆ ಇಳಿಸುವ ದುಸ್ಸಾಹಸಕ್ಕೆ ಮುಂದಾದ ಕಾಂಗ್ರೆಸ್‌ ಸರಕಾರ : ವಿಜಯೇಂದ್ರ

Update: 2026-06-14 18:23 IST

ಬೆಂಗಳೂರು : ‘ಗ್ಯಾರಂಟಿ ಯೋಜನೆಗಳಿಂದ ಆರ್ಥಿಕತೆಗೆ ಪೆಟ್ಟು ಬಿದ್ದಿದೆ. ಹೀಗಾಗಿ ಒಂದೊಂದೇ ನೆಪಗಳನ್ನು ಒಡ್ಡಿ ಗ್ಯಾರಂಟಿ ಫಲಾನುಭವಿಗಳ ಸಂಖ್ಯೆಯನ್ನು ಇಳಿಸುವ ದುಸ್ಸಾಹಸಕ್ಕೆ ಕಾಂಗ್ರೆಸ್ ಸರಕಾರ ಕೈಹಾಕಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ಷೇಪಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಗ್ಯಾರಂಟಿ ಯೋಜನೆಗಳಿಗೆ ಯಾರು ಅರ್ಹರಿದ್ದಾರೋ ಅವರಿಗೆ ಕೊಡಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಮೂರು ವರ್ಷದ ಕೆಳಗೆ ಇವರದೇ ಸರಕಾರ ಆಡಳಿತದಲ್ಲಿ ಇತ್ತಲ್ಲವೇ?. ಯೋಜನೆ ನೀಡುವ ವೇಳೆ ಅರ್ಹತೆ, ಅನರ್ಹತೆ ಬಗ್ಗೆ ಏಕೆ ಯೋಚಿಸಿಲ್ಲ’ ಎಂದು ಪ್ರಶ್ನಿಸಿದರು.

‘ಗ್ಯಾರಂಟಿಯಿಂದ ಕ್ಷೇತ್ರದ ಅಭಿವೃದ್ಧಿ ಆಗುತ್ತಿಲ್ಲ’ ಎಂದು ಕಾಂಗ್ರೆಸ್ಸಿನ ಶಾಸಕ ಆರ್.ವಿ.ದೇಶಪಾಂಡೆ ಹೇಳುತ್ತಾರೆ. ‘ಗ್ಯಾರಂಟಿಯಿಂದ ಅಭಿವೃದ್ಧಿ ಆಗದೇ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿ ಇದೆ’ ಎಂದು ಕಾಂಗ್ರೆಸ್ ಪಕ್ಷದ ಶಾಸಕರೇ ಹೇಳಿದ್ದಾರೆ. ಹಿಂದಿನ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಯ ರಾಯರೆಡ್ಡಿ ಅವರು ‘ಗ್ಯಾರಂಟಿ ಯೋಜನೆಗಳಿಂದ ಸಂಕಷ್ಟ ಆಗಿದೆ’ ಎಂದು ಹೇಳಿಕೆ ನೀಡಿದ್ದಾರೆ ಎಂದು ವಿಜಯೇಂದ್ರ ಉಲ್ಲೇಖಿಸಿದರು.

ಈ ಎಲ್ಲ ವಾಸ್ತವ ಸತ್ಯ ಮರೆಮಾಚಿ ಅನರ್ಹ ಫಲಾನುಭವಿಗಳಿಗೆ ಚುನಾವಣೆ ವೇಳೆ ಗ್ಯಾರಂಟಿ ಕೊಟ್ಟರು ಆಗ ಹೇಳಿದ್ದು ಒಂದು, ಈಗ ಹೇಳೋದು ಒಂದು. ಚುನಾವಣೆ ಮೊದಲು ಅರ್ಹರಾದವರು ಚುನಾವಣೆಯ ನಂತರ ಅನರ್ಹ ಎಂದು ಹೇಳುವುದು ಜನರಿಗೆ ಮಾಡಿದ ಅಪಮಾನ. ಇದು ಸರಿ ಅಲ್ಲ ಎಂದು ಅವರು ಆಕ್ಷೇಪಿಸಿದರು.

ಟೌನ್‍ಶಿಪ್‍ಗೆ ವಿರೋಧ: ಬಿಡದಿ ಟೌನ್‍ಶಿಪ್ ವಿಚಾರದಲ್ಲಿ ಬಿಜೆಪಿ ನಿಲುವು ಸ್ಪಷ್ಟವಾಗಿದೆ. ರೈತರ ಪರವಾಗಿ ನಾವು ನಿಲ್ಲುತ್ತೇವೆ. ಒತ್ತಾಯಪೂರ್ವಕವಾಗಿ ರೈತರ ಜಮೀನು ವಶಪಡಿಸಿಕೊಳ್ಳಲು ನಾವು ಬಿಡುವುದಿಲ್ಲ. ಸ್ವತಃ ಸಿಎಂ ಡಿ.ಕೆ.ಶಿವಕುಮಾರ್ ಅವರೇ ಆಸಕ್ತಿ ವಹಿಸಿ ರೈತರನ್ನು ಒಕ್ಕಲೆಬ್ಬಿಸಲು ಹೋರಟಿರುವುದು ಸರಿಯಲ್ಲ. ಇದು ಅಕ್ಷಮ್ಯ ಅಪರಾಧ ಎಂದು ವಿಜಯೇಂದ್ರ ಹೇಳಿದರು.

ನಾವು ಜಮೀನು ಬಿಡುವುದಿಲ್ಲ ಎಂದು ರೈತರೇ ಹೇಳಿದ್ದಾರೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರೇ ಸಿಎಂ ಮೇಲೆ ಒತ್ತಡ ಹೇರಿ ಇದನ್ನು ತಡೆಯಬೇಕು. ರೈತರಿಗೆ ತೊಂದರೆ ಆಗುವುದನ್ನು ಖಂಡಿಸಿ ಬಿಜೆಪಿ ಹೋರಾಟ ಮಾಡಲಿದೆ. ಟೌನ್‍ಶಿಫ್ ವಿಚಾರದಲ್ಲಿ ಪ್ರಧಾನಿ ಮೋದಿ ಹೆಸರು ಹೇಳಿ ದಲ್ಲಾಳಿತನ ಮಾಡಲು ಬಿಡಲ್ಲ. ಭೂಸ್ವಾಧೀನಕ್ಕೆ ಕೆಐಎಡಿಬಿ ನಿಯಮವನ್ನು ಪಾಲನೆ ಮಾಡಲಿ ಎಂದು ಅವರು ಒತ್ತಾಯಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News