ಸಿಜೆಐ ಮೇಲೆ ಶೂ ಎಸೆದ ವಕೀಲನಿಗೆ ಮೆಚ್ಚುಗೆ: ವ್ಯಾಪಕ ಟೀಕೆ ಬೆನ್ನಲ್ಲೇ ಕ್ಷಮೆಯಾಚಿಸಿದ ಮಾಜಿ ಐಪಿಎಸ್ ಅಧಿಕಾರಿ, ಬಿಜೆಪಿ ನಾಯಕ ಭಾಸ್ಕರ್ ರಾವ್
ಭಾಸ್ಕರ್ ರಾವ್ (Photo: siasat.com)
ಬೆಂಗಳೂರು: ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ವಕೀಲನಿಗೆ ಬೆಂಬಲ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕಾಗಿ ತೀವ್ರ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ, ಮಾಜಿ ಐಪಿಎಸ್ ಅಧಿಕಾರಿ ಮತ್ತು ಬಿಜೆಪಿ ನಾಯಕ ಭಾಸ್ಕರ್ ರಾವ್ ಅವರು ಕ್ಷಮೆಯಾಚಿಸಿದ್ದಾರೆ ಮತ್ತು ತಮ್ಮ ಪೋಸ್ಟ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತರಾಗಿರುವ ಭಾಸ್ಕರ್ ರಾವ್ ರಾವ್, ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ವಕೀಲ ರಾಕೇಶ್ ಕಿಶೋರ್ ಅವರ ಕೃತ್ಯವನ್ನು ಪ್ರಶಂಸಿದ್ದರು.
"ಇದು ಕಾನೂನಿನ ಪ್ರಕಾರ ತಪ್ಪಾದರೂ, ಈ ವಯಸ್ಸಿನಲ್ಲಿ ಯಾವುದೇ ಪರಿಣಾಮಗಳನ್ನು ಲೆಕ್ಕಿಸದೆ ನಿಲುವು ತೆಗೆದುಕೊಂಡು ಅದರಲ್ಲಿ ದೃಢವಾಗಿ ನಿಲ್ಲುವ ನಿಮ್ಮ ಧೈರ್ಯವನ್ನು ನಾನು ಮೆಚ್ಚುತ್ತೇನೆ" ಎಂದು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಭಾಸ್ಕರ್ ರಾವ್ ವಕೀಲನಿಗೆ ಪ್ರಶಂಸಿದ್ದರು.
ಈ ಕುರಿತು ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಮತ್ತೆ ಪ್ರತಿಕ್ರಿಯಿಸಿದ ಭಾಸ್ಕರ್ ರಾವ್, "ಇಷ್ಟೊಂದು ಶಿಕ್ಷಿತ, ವಯಸ್ಕ, ಕಾನೂನುಬದ್ಧವಾಗಿ ತನ್ನ ಕೃತ್ಯ ತಪ್ಪು ಎಂದು ಮತ್ತು ಅದರ ಪರಿಣಾಮಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿದ್ದರೂ ವ್ಯಕ್ತಿಯೊಬ್ಬರು ಈ ರೀತಿ ಮಾಡಿರುವುದಕ್ಕೆ ನನ್ನ ದಿಗ್ಭ್ರಮೆ ಮತ್ತು ಅಚ್ಚರಿಯ ಪ್ರತಿಕ್ರಿಯೆಯಾಗಿತ್ತು. ನಾನು ಸುಪ್ರೀಂ ಕೋರ್ಟ್, ಮುಖ್ಯ ನ್ಯಾಯಮೂರ್ತಿ ಅಥವಾ ಯಾವುದೇ ಸಮುದಾಯವನ್ನು ಅವಮಾನಿಸಿಲ್ಲ. ನನ್ನ ಪೋಸ್ಟ್‌ನಿಂದ ಕೋಪಗೊಂಡಿದ್ದರೆ ಅಥವಾ ನೋವಾಗಿದ್ದರೆ ಕ್ಷಮಿಸಿ" ಎಂದು ಬರೆದಿದ್ದಾರೆ.
My reaction was one of aghast and shock that a person, despite being so highly educated, Aged and experienced such an action knowing fully the Consequences of a Terribly and Legally Wrong Act. , I have not insulted the Supreme Court, nor Chief Justice or any Community. If my…
— Bhaskar Rao (@Nimmabhaskar22) October 8, 2025