ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ತಲಾ ಆದಾಯ ಹೆಚ್ಚಳ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಗ್ಯಾರಂಟಿ ಯೋಜನೆಗಳಿಗಾಗಿ ಪ್ರತಿ ವರ್ಷ 52-55 ಸಾವಿರ ಕೋಟಿ ರೂ.ಖರ್ಚು ಮಾಡಲಾಗುತ್ತಿದೆ. ಪ್ರಸಕ್ತ ಸಾಲಿನ ಜುಲೈವರೆಗೆ 96 ಸಾವಿರ ಕೋಟಿ ರೂ.ಖರ್ಚು ಮಾಡಿದ್ದೇವೆ. ಸರಕಾರದ ಖಜಾನೆ ಖಾಲಿಯಾಗಿದ್ದರೆ ಇಷ್ಟೊಂದು ಹಣ ಖರ್ಚು ಮಾಡಲು ಸಾಧ್ಯವಿತ್ತೆ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಶುಕ್ರವಾರ ವಿಧಾನಸಭೆಯಲ್ಲಿ ನಿಯಮ 69ರ ಅಡಿಯಲ್ಲಿ ಬೆಂಗಳೂರು ಅಭಿವೃದ್ಧಿ ಕಾರ್ಯಗಳ ಸಮಸ್ಯೆಗಳು, ಅತಿವೃಷ್ಟಿಯಿಂದಾಗಿರುವ ನಷ್ಟ ಹಾಗೂ ಕೇಂದ್ರದ ಅನುದಾನಗಳ ಬಗ್ಗೆ ನಡೆದಿದ್ದ ಚರ್ಚೆಗೆ ಅವರು ಉತ್ತರಿಸಿದರು.
ಶಕ್ತಿ ಯೋಜನೆಯಡಿ ಮಹಿಳೆಯರು 500 ಕೋಟಿ ಉಚಿತ ಪ್ರಯಾಣಗಳನ್ನು ಮಾಡಿದ್ದಾರೆ. ಇದರಿಂದಾಗಿ, ಬೆಂಗಳೂರಿನಲ್ಲಿ ಉದ್ಯೋಗ ಪ್ರಮಾಣ ಶೇ.23ರಷ್ಟು ಹೆಚ್ಚಾಗಿದೆ. ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಶೇ.21ರಷ್ಟು ಹೆಚ್ಚಾಗಿದೆ. ಅಲ್ಲದೇ, ನಮ್ಮ ರಾಜ್ಯವು ಇಡೀ ದೇಶದಲ್ಲಿ ತಲಾ ಆದಾಯದಲ್ಲಿ ಪ್ರಥಮ ಸ್ಥಾನಕ್ಕೇರಲು ಗ್ಯಾರಂಟಿಗಳು ಪ್ರಮುಖ ಕಾರಣವಾಗಿವೆ ಎಂದು ಮುಖ್ಯಮಂತ್ರಿ ಹೇಳಿದರು.
ಗ್ಯಾರಂಟಿ ಯೋಜನೆಗಳು ಅಭಿವೃದ್ಧಿ ಅಲ್ಲ ಎಂದು ತಿಳಿದುಕೊಂಡಿದ್ದಾರೆ. ರಾಜ್ಯದ ತಲಾ ಆದಾಯ ಹೆಚ್ಚಳವಾಗಲು ಜನರ ಕೊಂಡುಕೊಳ್ಳುವ ಶಕ್ತಿ ಹೆಚ್ಚಾಗಿದ್ದು ಪ್ರಮುಖ ಕಾರಣ. ಪ್ರತಿಯೊಂದು ಕುಟುಂಬಕ್ಕೂ ಪ್ರತಿ ತಿಂಗಳು ತಲಾ 4-5 ಸಾವಿರ ರೂ.ಗಳಂತೆ ವರ್ಷಕ್ಕೆ 50-60 ಸಾವಿರ ರೂ.ಉಳಿತಾಯವಾಗುತ್ತಿದೆ. ಇದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.
14ನೆ ಹಣಕಾಸು ಆಯೋಗವು ನಮ್ಮ ರಾಜ್ಯಕ್ಕೆ ತೆರಿಗೆ ಪಾಲು ಶೇ.4.70 ನಿಗದಿ ಮಾಡಿತ್ತು. ಆದರೆ, 15ನೆ ಹಣಕಾಸು ಆಯೋಗವು ಇದನ್ನು ಶೇ.3.60ಕ್ಕೆ ಇಳಿಸಿತು. ಇದರಿಂದಾಗಿ, ಐದು ವರ್ಷಗಳಲ್ಲಿ ನಮ್ಮ ರಾಜ್ಯಕ್ಕೆ 68 ಸಾವಿರ ಕೋಟಿ ರೂ.ನಷ್ಟವಾಯಿತು. ಈ ಹಣ ಇದ್ದಿದ್ದರೆ ರಾಜ್ಯದ ಅಭಿವೃದ್ಧಿಗೆ ಬಳಕೆಯಾಗುತ್ತಿರಲಿಲ್ಲವೇ? ಎಂದು ಸಿದ್ದರಾಮಯ್ಯ ಕೇಳಿದರು.
15ನೆ ಹಣಕಾಸು ಆಯೋಗವು ನಮ್ಮ ರಾಜ್ಯಕ್ಕೆ ನಷ್ಟವಾಗಿರುವುದನ್ನು ಗಮನಿಸಿ 5495 ಕೋಟಿ ರೂ.ವಿಶೇಷ ಅನುದಾನ ನೀಡುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿತ್ತು. ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ.ನೀಡುವುದಾಗಿ ಕೇಂದ್ರ ಸರಕಾರ ಬಜೆಟ್‍ನಲ್ಲಿ ಘೋಷಣೆ ಮಾಡಿತು. ಆದರೆ, ಒಂದು ರೂಪಾಯಿಯೂ ಬಿಡುಗಡೆ ಮಾಡಿಲ್ಲ. ಇದರಿಂದಾಗಿ, ಒಟ್ಟಾರೆ ನಮಗೆ 80 ಸಾವಿರ ಕೋಟಿ ರೂ.ನಷ್ಟವಾಯಿತು ಎಂದು ಅವರು ಮಾಹಿತಿ ನೀಡಿದರು.
4.09 ಲಕ್ಷ ಕೋಟಿ ರೂ.ಗಳ ಬಜೆಟ್‍ನಲ್ಲಿ 1.69 ಲಕ್ಷ ಕೋಟಿ ರೂ.ಗಳನ್ನು ಅಭಿವೃದ್ಧಿಗಾಗಿ ವೆಚ್ಚ ಮಾಡಲಾಗುವುದು. ಎಸ್‍ಸಿಪಿ-ಟಿಎಸ್‍ಪಿ ಯೋಜನೆಯಡಿ ಪರಿಶಿಷ್ಟರಿಗೆ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‍ನಲ್ಲಿ ಶೇ.24.1ರಷ್ಟು ಅನುದಾನ ಒದಗಿಸಲಾಗಿದೆ. ಅದರಂತೆ, ಈ ವರ್ಷ 42,017 ಕೋಟಿ ರೂ.ಗಳ ಅನುದಾನ ನಿಗದಿ ಮಾಡಲಾಗಿದೆ ಎಂದು ಅವರು ಹೇಳಿದರು.
ಬೆಂಗಳೂರಿನ ಬಿಜೆಪಿ ಶಾಸಕರು ಅನುದಾನ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಬಜೆಟ್‍ನಲ್ಲಿ 8 ಸಾವಿರ ಕೋಟಿ ರೂ.ಗಳನ್ನು ಮೂಲಭೂತ ಸೌಕರ್ಯ, ರಸ್ತೆ, ಸೇತುವೆಗಳಿಗಾಗಿ ಮೀಸಲಿಟ್ಟಿದ್ದು, ಅದನ್ನು ಎಲ್ಲ ಶಾಸಕರಿಗೂ ಹಂಚಿಕೆ ಮಾಡಲಾಗುವುದು. ಬಿಜೆಪಿ ಸರಕಾರದ ಅವಧಿಯಲ್ಲಿ ಹಣ ಇಲ್ಲದೆಯೆ 2.70 ಲಕ್ಷ ಕೋಟಿ ರೂ.ಗಳ ಕಾಮಗಾರಿಗೆ ಟೆಂಡರ್ ಕರೆಯಲಾಗಿತ್ತು. ಅಲ್ಲದೇ, ಮುಖ್ಯಮಂತ್ರಿಯ ವಿವೇಚನಾ ಕೋಟದಡಿಯಲ್ಲಿ 1.66 ಲಕ್ಷ ಕೋಟಿ ರೂ.ಗಳ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿತ್ತು ಎಂದು ಸಿದ್ದರಾಮಯ್ಯ ಹೇಳಿದರು.
ಬಿಜೆಪಿ ಸರಕಾರದ ಅವಧಿಯಲ್ಲಿ ಆದ ಈ ತಪ್ಪುಗಳಿಂದಾಗಿ ನಾವು ಕಷ್ಟ ಅನುಭವಿಸುವಂತಾಗಿದೆಯೆ ಹೊರತು, ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದಾಗಿ ಸರಕಾರಕ್ಕೆ ಹಣದ ಮುಗ್ಗಟ್ಟು ಆಗಿಲ್ಲ. 2013-18ರ ನಡುವೆ ನಾನು ಮುಖ್ಯಮಂತ್ರಿ ಆಗಿದ್ದಾಗ ಸುವರ್ಣ ಯುಗ ಆಗ ಹಣಕಾಸಿಗೆ ಯಾವುದೆ ತೊಂದರೆ ಇರಲಿಲ್ಲ ಎಂದು ಅವರು ತಿಳಿಸಿದರು.
ರಾಜ್ಯದ ಎಲ್ಲ ಕಡೆ ಹೆಚ್ಚು ಮಳೆಯಿಂದಾಗಿ ಅತಿವೃಷ್ಟಿಯಾಗಿದೆ. ಎಲ್ಲ ಜಿಲ್ಲಾಧಿಕಾರಿಗಳಿಗೆ ಸಮೀಕ್ಷೆ ಮಾಡಿ, ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ತೆಂಗು, ಅಡಿಕೆ ಬೆಳೆ ನಷ್ಟಕ್ಕೆ ಪರಿಹಾರ ನೀಡಲಾಗುವುದು. ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನದ ಕೊರತೆ ಇಲ್ಲ. ಸಂಪನ್ಮೂಲಗಳನ್ನು ನೋಡಿಕೊಂಡು ರಾಜ್ಯದ 224 ಕ್ಷೇತ್ರಗಳಿಗೂ ಅನುದಾನ ನೀಡುತ್ತೇನೆ ಎಂದು ಮುಖ್ಯಮಂತ್ರಿ ತಿಳಿಸಿದರು.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಾವು ರಾಜ್ಯದ ಜನತೆಗೆ 692 ಭರವಸೆಗಳನ್ನು ನೀಡಿದ್ದೆವು. ಎರಡು ವರ್ಷ ಮೂರು ತಿಂಗಳಲ್ಲಿ 264 ಭರವಸೆಗಳನ್ನು ಈಡೇರಿಸಿದ್ದೇವೆ. ಉಳಿದ ಭರವಸೆಗಳನ್ನು ಈಡೇರಿಸುತ್ತೇವೆ. ನಮ್ಮದು ನುಡಿದಂತೆ ನಡೆಯುವ ಕಾಂಗ್ರೆಸ್ ಸರಕಾರ. 2028ರಲ್ಲಿಯೂ ರಾಜ್ಯದ ಜನ ನಮಗೆ ಆಶೀರ್ವಾದ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.
‘ವಿರೋಧ ಪಕ್ಷದ ಶಾಸಕರ ಸಭೆ ಕರೆದು ಕ್ರಿಯಾಯೋಜನೆ ಪಡೆದುಕೊಂಡು ಅಗತ್ಯವಿರುವ ಅನುದಾನವನ್ನು ಒದಗಿಸುತ್ತೇನೆ. ಈಗ ಸದನದಲ್ಲಿ ಇಷ್ಟೇ ಪ್ರಮಾಣದ ಅನುದಾನ ನೀಡುವುದಾಗಿ ಹೇಳಲು ಸಾಧ್ಯವಿಲ್ಲ. ಆದುದರಿಂದ, ಶಾಸಕರು ಪ್ರತಿಭಟನೆ ಮಾಡುವ ಅಗತ್ಯವಿಲ್ಲ’
-ಸಿದ್ದರಾಮಯ್ಯ, ಮುಖ್ಯಮಂತ್ರಿ
‘ರಾಜ್ಯದಲ್ಲಿ ಯಾವುದೆ ಆರ್ಥಿಕ ಸಮಸ್ಯೆಯಿಲ್ಲದಿದ್ದರೆ, ನಿಗಮಗಳಿಗೆ ಅನುದಾನವನ್ನು ಯಾಕೆ ಕಡಿತ ಮಾಡಲಾಗಿದೆ? ರಾಜ್ಯದ ಜನತೆಯ ಮೇಲೆ ಈ ಸರಕಾರ 25 ತೆರಿಗೆಗಳನ್ನು ಹಾಕಿದೆ. ಇದು ಸುಮಾರು 56 ಸಾವಿರ ಕೋಟಿ ರೂ.ಗಳಾಗುತ್ತದೆ. ಮಳೆ ಹಾನಿ ಪ್ರದೇಶಗಳಿಗೆ ಸಚಿವರು ಹೋಗಿಲ್ಲ, ಬೆಳೆ ಹಾನಿಗೆ ಪರಿಹಾರ ಘೋಷಿಸಿಲ್ಲ. ರಸಗೊಬ್ಬರ ಪೂರೈಕೆಯಲ್ಲಿ ಅವ್ಯವಹಾರ ಆಗಿದೆ. ಈ ಸರಕಾರ ಬಡವರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿದೆ. ಇದೊಂದು ಅಭಿವೃದ್ಧಿ ಶೂನ್ಯ, ಪಾಪರ್ ಸರಕಾರ’
-ಆರ್.ಅಶೋಕ್, ವಿಪಕ್ಷ ನಾಯಕ