2ಬಿ ಮೀಸಲಾತಿಯನ್ನು ಶೇ.8ಕ್ಕೆ ಹೆಚ್ಚಿಸಿ : ಸಿ.ಎಂ.ಇಬ್ರಾಹೀಂ ಆಗ್ರಹ
ಬೆಂಗಳೂರು : 2ಬಿ ವರ್ಗದಲ್ಲಿರುವ ಶೇ.4ರಷ್ಟು ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಶೇ.8ಕ್ಕೆ ಹೆಚ್ಚಿಸಬೇಕು ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹೀಂ ಆಗ್ರಹಿಸಿದ್ದಾರೆ.
ಶುಕ್ರವಾ ನಗರದ ಪ್ರೆಸ್ಕ್ಲಬ್ನಲ್ಲಿ ಕರ್ನಾಟಕ ಮುಸ್ಲಿಂ ಯೂನಿಟಿ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಜೆಟ್ ನಲ್ಲಿ ದಲಿತ ಸಮುದಾಯಕ್ಕೆ 36 ಸಾವಿರ ಕೋಟಿ ರೂ. ಅನುದಾನ ಕೊಟ್ಟಿದ್ದಾರೆ. ಹಿಂದುಳಿದ ವರ್ಗಗಳಿಗೆ 20 ಸಾವಿರ ಕೋಟಿ ರೂ.ಕೊಡುತ್ತಿದ್ದಾರೆ ಎಂದು ಹೇಳಿದರು.
ಆದರೆ, ರಾಜ್ಯದಲ್ಲಿ ಶೇ.13ರಷ್ಟು ಜನಸಂಖ್ಯೆ ಇರುವ ಅಲ್ಪಸಂಖ್ಯಾತರಿಗೆ ಕಳೆದ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ವರ್ಷಕ್ಕೆ 10 ಸಾವಿರ ಕೋಟಿ ರೂ. ಅನುದಾನ ಕೊಡುತ್ತೇವೆ ಎಂದು ಹೇಳಿತ್ತು. ಆದರೆ ಇದುವರೆಗೂ ಕೊಟ್ಟಿಲ್ಲ. ಮತ ಕೊಡಲು ಮಾತ್ರ ಅಲ್ಪಸಂಖ್ಯಾತರು ಬೇಕು. ಆದರೆ ಹಕ್ಕು ಕೇಳಿದರೆ, ಆ ಧ್ವನಿಯನ್ನೇ ಅಡಗಿಸುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದು ಇಬ್ರಾಹೀಂ ಬೇಸರ ವ್ಯಕ್ತಪಡಿಸಿದರು.
ಗೋವನ್ನು ರಾಷ್ಟ್ರ ಪ್ರಾಣಿ ಎಂದು ಘೋಷಣೆ ಮಾಡಬೇಕು. ಸರಕಾರ ಗೋಶಾಲೆಗಳನ್ನು ಪ್ರಾರಂಭಿಸಬೇಕು. ಹಾಲು ಕೊಡುವುದನ್ನು ನಿಲ್ಲಿಸಿರುವ ಹಸುಗಳನ್ನು ರೈತರಿಂದ ನೇರವಾಗಿ ಖರೀದಿ ಮಾಡಿ ಗೋಶಾಲೆಗೆ ನೀಡಬೇಕು. ಇವತ್ತು ಗೋ ಮಾಂಸ ರಫ್ತಿನಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಕಾರ್ಖಾನೆಗಳಲ್ಲಿ ಗೋ ಮಾಂಸಕ್ಕೆ ಯಾವುದೇ ಅಡ್ಡಿ ಮಾಡುವುದಿಲ್ಲ. ಆದರೆ ಬಡವರಿಗೆ ವ್ಯಾಪಾರ ಮಾಡಲು ಬಿಡುತ್ತಿಲ್ಲ ಎಂದು ಅವರು ಟೀಕಿಸಿದರು.
ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಪಕ್ಷ ಕೊಟ್ಟಿರುವ ಭರವಸೆಗಳು ಹಾಗೂ ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸದಿದ್ದರೆ, ಡಿಸೆಂಬರ್ನಿಂದ ರಾಜ್ಯದಲ್ಲಿ ಜಿಲ್ಲಾವಾರು ಹೋರಾಟಗಳನ್ನು ರೂಪಿಸುತ್ತೇವೆ ಎಂದು ಇಬ್ರಾಹೀಂ ಎಚ್ಚರಿಕೆ ನೀಡಿದರು.
ಕರ್ನಾಟಕ ಮುಸ್ಲಿಂ ಯೂನಿಟಿ ರಾಜ್ಯಾಧ್ಯಕ್ಷ ಜಬ್ಬಾರ್ ಕಲಬುರ್ಗಿ ಮಾತನಾಡಿ, ಹಿಂದೆ ಬಿಜೆಪಿ ಸರಕಾರ ರದ್ದು ಮಾಡಿರುವ 2ಬಿ ವರ್ಗದ ಶೇ.4ರಷ್ಟು ಮೀಸಲಾತಿಯನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ, ಹಿಂದಿನ ಸರಕಾರದ ನಿರ್ಧಾರವನ್ನು ಹಿಂದಕ್ಕೆ ಪಡೆದು ರದ್ದುಗೊಳಿಸಬೇಕು ಎಂದು ಹೇಳಿದರು.
ಶೇ.4ರಷ್ಟು ಮೀಸಲಾತಿಯನ್ನು ಮತ್ತೆ ಯಥಾಸ್ಥಿತಿ ಮುಂದುವರಿಸಲಾಗಿದೆ ಎಂಬ ನಿರ್ಧಾರವನ್ನು ಸರಕಾರ ಪ್ರಕಟಿಸಬೇಕು. ರಾಜ್ಯ ಸರಕಾರದ ನಿರ್ಧಾರವನ್ನು ಪ್ರಮಾಣಪತ್ರ(ಅಫಿಡವಿಟ್) ಮೂಲಕ ಸುಪ್ರೀಂಕೋರ್ಟ್ಗೆ ಕಳುಹಿಸಬೇಕು. ಇಲ್ಲದಿದ್ದರೆ ಅಧಿವೇಶನದ ಸಂದರ್ಭದಲ್ಲಿ ಕರ್ನಾಟಕ ಮುಸ್ಲಿಂ ಯೂನಿಟಿ ಬೆಳಗಾವಿಯಲ್ಲಿ ಅವಿರತ ಹೋರಾಟವನ್ನು ಆರಂಭ ಮಾಡುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎನ್.ಎಂ.ನಬಿ, ಕರ್ನಾಟಕ ಮುಸ್ಲಿಂ ಯೂನಿಟಿಯ ಮುಖಂಡರಾದ ನೂರ್ ನಬಿ, ಬಶೀರ್ ಮತ್ತಿತರರು ಹಾಜರಿದ್ದರು.
ರವಿ ಹಂಜ್ನನ್ನು ಬಂಧಿಸಿ :
ಬಸವ ಮಂಟಪ ಪುಸ್ತಕವನ್ನು ಸರಕಾರ ಮುಟ್ಟುಗೋಲು ಹಾಕಿದೆ, ಆದರೆ ಲೇಖಕ ರವಿ ಹಂಜ್ನನ್ನು ಯಾಕೆ ಬಂಧಿಸಿಲ್ಲ. ಸರಕಾರಿ ಕಚೇರಿಗಳಲ್ಲಿ ಬಸವಣ್ಣ ಅವರ ಭಾವಚಿತ್ರ ಹಾಕಿ ಸರಕಾರ ಗೌರವಿಸುತ್ತಿದೆ. ಆದರೆ ಬಸವಣ್ಣ ಅವರ ಕುರಿತು ಅವಹೇಳನವಾಗಿ ಪುಸ್ತಕ ಬರೆದವರು ಇನ್ನೂ ಹೊರಗಡೆ ತಿರುಗಾಡುತ್ತಿದ್ದಾರೆ. ಪ್ರಕಾಶಕರ ಮೇಲೆ ಕೂಡ ಯಾವುದೇ ಪ್ರಕರಣ ದಾಖಲಿಸಿಲ್ಲ. ಕರ್ನಾಟಕ ಸರಕಾರ ಕೂಡಲೇ ಅವರನ್ನು ಬಂಧಿಸಬೇಕು.
ಜಬ್ಬಾರ್ ಕಲಬುರ್ಗಿ, ರಾಜ್ಯಾಧ್ಯಕ್ಷ, ಕರ್ನಾಟಕ ಮುಸ್ಲಿಂ ಯೂನಿಟಿ