ಬೆಂಗಳೂರು | ಒಳಮೀಸಲಾತಿ ಹಂಚಿಕೆಯಲ್ಲಿ ಅನ್ಯಾಯ ಆರೋಪ : ನಾಲ್ಕು ಸಮುದಾಯಗಳ ತೀವ್ರ ಆಕ್ರೋಶ, ಬೃಹತ್ ಪ್ರತಿಭಟನೆ
ಬೆಂಗಳೂರು, ಸೆ.10: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹಂಚಿಕೆಯಲ್ಲಿ ಅನ್ಯಾಯ ಎಂದು ಆರೋಪಿಸಿ ರಾಜ್ಯ ಸರಕಾರದ ವಿರುದ್ಧ ಬುಧವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಬಂಜಾರ, ಭೋವಿ, ಕೊರಚ, ಕೊರಮ ಮೀಸಲಾತಿ ಒಕ್ಕೂಟ-ಕರ್ನಾಟಕದ ವತಿಯಿಂದ ಸಾವಿರಾರು ಸಂಖ್ಯೆಯಲ್ಲಿ ಹೋರಾಟಗಾರರು ಜಮಾಯಿಸಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯಗಳನ್ನು ಒಳಮೀಸಲಾತಿಯಲ್ಲಿ ‘ಸಿ’ ವರ್ಗಕ್ಕೆ ಸೇರ್ಪಡೆ ಮಾಡಿ ಶೇ.5ರಷ್ಟು ಮೀಸಲಾತಿ ನೀಡುವ ಮೂಲಕ ‘ಸ್ಪೃಶ್ಯ’ ಜಾತಿಗಳಿಗೆ ಅನ್ಯಾಯ ಮಾಡಲಾಗಿದೆ, ನ್ಯಾ.ನಾಗಮೋಹನದಾಸ್ ಆಯೋಗವು ಅವೈಜ್ಞಾನಿಕವಾಗಿ ವರ್ಗೀಕರಣ ಮಾಡಿದೆ ಎಂದು ಪ್ರತಿಭಟನೆಕಾರರು ಸಿಎಂ, ಡಿಸಿಎಂ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರತಿಭಟನೆಯಲ್ಲಿ ಪಾಲ್ಗೊಂದು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಬ್ರಿಟಿಷರ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದೆ. ಬಂಜಾರ, ಭೋವಿ, ಕೊರಚ, ಕೊರಮ, ಅಲೆಮಾರಿ ಸಮುದಾಯದವರಿಗೆ ಅನ್ಯಾಯ ಮಾಡುವ ಮತ್ತು ಸಮಾಜದಲ್ಲಿ ವಿಷಬೀಜ ಬಿತ್ತುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡಿದ್ದಾರೆ. ಮುಖ್ಯಮಂತ್ರಿಗಳನ್ನು ಆ ಭಗವಂತನೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯನವರೇ, ರಾಜ್ಯದಲ್ಲಿ ಎಷ್ಟು ದಿನ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತಿದ್ದೀರಿ ಎಂಬುದು ಮುಖ್ಯವಲ್ಲ; ಆ ಕುರ್ಚಿಯಲ್ಲಿ ಕೂತಾಗ ಎಲ್ಲ ಸಮುದಾಯಗಳಿಗೆ ನ್ಯಾಯ ಕೊಟ್ಟಿದ್ದೀರಾ ಎಂಬುದು ಅತ್ಯಂತ ಮುಖ್ಯವಾದುದು ಎಂದು ವಿಜಯೇಂದ್ರ ತಿರುಗೇಟು ನೀಡಿದರು.
ಮನೆ ಮುರಿಯುವ ಕೆಲಸ ಮಾಡುವುದು ಸುಲಭ. ಮನೆ ಕಟ್ಟುವುದು ಅತ್ಯಂತ ಕಷ್ಟದ ಕೆಲಸ. ಜನರು ಆಶೀರ್ವಾದ ಮಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ತಂದಿದ್ದಾರೆ. ಆದರೆ, ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಸರಕಾರವು ಶೋಷಿತರಿಗೆ ನ್ಯಾಯ ನೀಡುವ ವಿಚಾರದಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ವಿಜಯೇಂದ್ರ ಆಕ್ಷೇಪಿಸಿದರು.
ಶಾಸಕ ಅವಿನಾಶ್ ಜಾಧವ್ ಮಾತನಾಡಿ, ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯದವರು ಅಮಾಯಕರು. ಇದೇ ಕಾರಣಕ್ಕೆ ಕಾಂಗ್ರೆಸ್ ಸರಕಾರ ಅನ್ಯಾಯ ಮಾಡುತ್ತಿದೆ. ದಲಿತರಿಗೆ ಮೀಸಲಿಟ್ಟ ಎಸ್‍ಟಿಪಿ-ಟಿಎಸ್‍ಪಿ ಹಣವನ್ನೂ ಸಹ ಗ್ಯಾರಂಟಿಗಳಿಗೆ ಬಳಸಲಾಗುತ್ತಿದೆ ಎಂದು ಕಿಡಿಕಾರಿದರು.
ಪ್ರತಿಭಟನಾ ವೇಳೆಯಲ್ಲಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್‍ಗಳನ್ನು ತಳ್ಳಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾಜಿ ಸಂಸದ ಡಾ.ಉಮೇಶ್ ಜಾಧವ್, ಶಾಸಕರಾದ ಪ್ರಭು ಚೌಹಾಣ್, ಎಂ.ಚಂದ್ರಪ್ಪ, ಮಾಜಿ ಸಚಿವ ಸುನೀಲ್ ವಲ್ಯಾಪುರೆ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಶಾಸಕರಾದ ಪಿ.ರಾಜೀವ್, ದೇವನಹಳ್ಳಿ ಚಂದ್ರಪ್ಪ ಸೇರಿದಂತೆ ಮಾಜಿ ಸಚಿವರು, ಮಾಜಿ ಶಾಸಕರು ಮತ್ತು ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.
ಅರೆಬೆತ್ತಲೆ ಪ್ರತಿಭಟನೆ, ಮಹಿಳೆ ಆತ್ಮಹತ್ಯೆಗೆ ಯತ್ನ: ಪ್ರತಿಭಟನೆ ವೇಳೆಯಲ್ಲಿ ವೀಣಾ ಎಂಬ ಮಹಿಳಾ ಹೋರಾಟಗಾರ್ತಿ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆಯಿತು. ಕೂಡಲೇ ಸ್ಥಳದಲ್ಲಿದ್ದ ಇತರೆ ಹೋರಾಟಗಾರರು ಅವರನ್ನು ರಕ್ಷಿಸಿದರು. ಅಲ್ಲದೆ, ವೇದಿಕೆ ಮೇಲೆ ಸಮುದಾಯಗಳ ಕೆಲ ಯುವಕರು ಅರೆಬೆತ್ತಲೆ ಪ್ರತಿಭಟನೆ ಮಾಡಿ ರಾಜ್ಯ ಸರಕಾರ ನ್ಯಾಯ ಕೊಡದಿದ್ದರೆ ರಕ್ತಪಾತ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಂಚಾರ ದಟ್ಟಣೆ: ಪ್ರತಿಭಟನೆಕಾರರು ಮಹಾರಾಣಿ ಕಾಲೇಜು ಬಳಿ ರಸ್ತೆ ತಡೆದು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ರಸ್ತೆ ತಡೆಯಿಂದಾಗಿ ಕೆ.ಆರ್.ಸರ್ಕಲ್ ಬಳಿ ಉಂಟಾದ ಸಂಚಾರ ದಟ್ಟಣೆಯಿಂದ ಗಂಟೆಗಟ್ಟಲೆ ವಾಹನಗಳು ಕಿಲೋ ಮೀಟರ್ ಉದ್ದ ನಿಂತಲ್ಲೇ ನಿಂತಿದ್ದವು. ಇದರಿಂದ ವಾಹನ ಸವಾರರು ಪರದಾಡಿದರು.
ತಾತ್ಕಾಲಿಕವಾಗಿ ಪ್ರತಿಭಟನೆ ವಾಪಸ್: ಕೊನೆಯಲ್ಲಿ ಸಮುದಾಯದ ಸ್ವಾಮೀಜಿಗಳ ಸಮ್ಮುಖದಲ್ಲಿ ಪ್ರಮುಖ ಹೋರಾಟಗಾರರು ಮಾತುಕತೆ ನಡೆಸಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದು, ಸರಕಾರಕ್ಕೆ ಒಂದು ವಾರದ ಗಡುವು ನೀಡಲಾಯಿತು. ವಾರದೊಳಗೆ ಸರಕಾರ ಮೀಸಲಾತಿ ಘೋಷಣೆ ಬಗ್ಗೆ ಚರ್ಚಿಸದಿದ್ದರೆ ಹೋರಾಟ ಉಗ್ರಸ್ವರೂಪ ಪಡೆದುಕೊಳ್ಳುವುದಾಗಿ ಹೋರಾಟಗಾರರು ಎಚ್ಚರಿಕೆ ನೀಡಿದರು.