×
Ad

ಪರಿಶಿಷ್ಟ ಜಾತಿ ಒಳಮೀಸಲಾತಿ: ಮೂಲ ಜಾತಿಯೊಂದಿಗೆ ಪ್ರವರ್ಗ ನಮೂದಿಸಿ, ಜಾತಿ ಪ್ರಮಾಣ ಪತ್ರ ನೀಡಲು ಸುತ್ತೋಲೆ

Update: 2025-10-08 22:45 IST

ಬೆಂಗಳೂರು, ಅ.8: ಪರಿಶಿಷ್ಟ ಜಾತಿಗಳನ್ನು ಮೂರು ಪ್ರವರ್ಗಗಳಾಗಿ ವಿಂಗಡಣೆ ಮಾಡಿ ಒಳಮೀಸಲಾತಿ ಜಾರಿ ಮಾಡಿದ್ದು, ಜಾತಿ ಪ್ರಮಾಣ ಪತ್ರವನ್ನು ನೀಡುವ ವೇಳೆ, ಮೂಲ ಜಾತಿಯೊಂದಿಗೆ ಪ್ರವರ್ಗವನ್ನು ನಮೂದಿಸಿ, ಪ್ರಮಾಣ ಪತ್ರವನ್ನು ನೀಡಬೇಕು ಎಂದು ಸರಕಾರವು ಬುಧವಾರ ಸುತ್ತೋಲೆ ಹೊರಡಿಸಿದೆ.

ಈಗಾಗಲೇ ಆದಿ ಕರ್ನಾಟಕ ಎಂದು ಜಾತಿ ಪ್ರಮಾಣ ಪತ್ರ ಪಡೆದಿದ್ದವರ ಮೂಲ ಜಾತಿಯು 'ಹೊಲೆಯ' ಎಂದು ಇದ್ದಲ್ಲಿ, ಈಗ ಜಾತಿ ಪ್ರಮಾಣ ಪತ್ರದಲ್ಲಿ 'ಆದಿ ಕರ್ನಾಟಕ (ಹೊಲೆಯ/ಪ್ರವರ್ಗ-ಬಿ)' ಎಂದು ನಮೂದಿಸಿ, ಜಾತಿ ಪ್ರಮಾಣ ಪತ್ರ ನೀಡಲಾಗುವುದು.

ಅಭ್ಯರ್ಥಿಯು 'ಆದಿ ಕರ್ನಾಟಕ' ಎಂದು ಜಾತಿ ಪ್ರಮಾಣ ಪತ್ರ ಪಡೆದಿದ್ದು ಹಾಗೂ ಮೂಲ ಜಾತಿಯು 'ಮಾದಿಗ' ಎಂದು ಇದ್ದಲ್ಲಿ ಜಾತಿ ಪ್ರಮಾಣ ಪತ್ರದಲ್ಲಿ 'ಆದಿ ಕರ್ನಾಟಕ (ಮಾದಿಗ/ಪ್ರವರ್ಗ-ಎ)' ಎಂದು ನಮೂದಿಸಿ, ಜಾತಿ ಪ್ರಮಾಣ ಪತ್ರ ನೀಡಲಾಗುವುದು.

ಅಭ್ಯರ್ಥಿಯು 'ಕೊರಚ' ಎಂದು ಜಾತಿ ಪ್ರಮಾಣ ಪತ್ರ ಈಗಾಗಲೇ ಪಡೆದಿದ್ದರೆ, ಕೊರಚ ಸಮುದಾಯವನ್ನು ಪ್ರವರ್ಗ-ಸಿ ಯಲ್ಲಿ ವರ್ಗೀಕರಿಸಿರುವುದರಿಂದ ಜಾತಿ ಪ್ರಮಾಣ ಪತ್ರವನ್ನು ಕೊರಚ(ಪ್ರವರ್ಗ-ಸಿ) ಎಂದು ನೀಡಲಾಗುತ್ತದೆ.

ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕಕ್ಕೆ ಸೇರಿದ ಮೂಲ ಜಾತಿಯನ್ನು ತಿಳಿಸದೇ ಇರುವ ಅಭ್ಯರ್ಥಿಗಳು, 'ಪ್ರವರ್ಗ- ಎ ಅಥವಾ ಪ್ರವರ್ಗ- ಬಿ'ಯನ್ನು ಆಯ್ಕೆ ಮಾಡಿಕೊಂಡು ಸ್ಪಷ್ಟವಾಗಿ ನಮೂದಿಸಿ, ಮುಚ್ಚಳಿಕೆ ಪತ್ರ(ಆಫಿಡೆವಿಟ್) ದೊಂದಿಗೆ ಅರ್ಜಿ ಸಲ್ಲಿಸಬೇಕು.

ಅರ್ಜಿ ಸ್ವೀಕರಿಸಿದ ಪ್ರಾಧಿಕಾರಗಳು ಅಭ್ಯರ್ಥಿಗಳೂ ಪರಿಶಿಷ್ಟ ಜಾತಿಗೆ ಸೇರಿರುವ ಬಗ್ಗೆ ಖಾತರಿಪಡಿಸಿಕೊಂಡು, ಅಭ್ಯರ್ಥಿಗಳು ನೀಡಿರುವ ಮುಚ್ಚಳಿಕೆ ಪತ್ರದಲ್ಲಿ ಘೋಷಿಸಿರುವ ಪ್ರವರ್ಗವನ್ನು ನಮೂದಿಸಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಬೇಕು. ಈ ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡು ಯಾವ ಪ್ರವರ್ಗದಲ್ಲಿ ಜಾತಿ ಪ್ರಮಾಣ ಪತ್ರ ಪಡೆದಿರುತ್ತಾರೆಯೋ ಅದೇ ಪ್ರವರ್ಗ ಅವರ ಕುಟುಂಬಕ್ಕೆ ಶಾಶ್ವತವಾಗಿ ಮುಂದುವರೆಯುತ್ತದೆ. ಯಾವುದೇ ಕಾರಣಕ್ಕೂ ಬದಲಾವಣೆಗೆ ಅವಕಾಶವಿರುವುದಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News