×
Ad

ಕಲಬುರಗಿ | ಕಲ್ಲು ತೂರಾಡಿ ಬಡಿದಾಡಿಕೊಂಡ 2 ಕುಟುಂಬಗಳು: ಎಂಟು ಮಂದಿಗೆ ಗಂಭೀರ ಗಾಯ

Update: 2023-07-30 12:49 IST

ಕಲಬುರಗಿ, ಜು.30: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ಮಧ್ಯೆ ಜಗಳ, ಪರಸ್ಪರ ಕಲ್ಲು ತೂರಾಟ ನಡೆದ ಪರಿಣಾಮ ಎಂಟು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಶನಿವಾರ ನಡೆದಿದೆ.

ಒಂದೇ ಸಮುದಾಯಕ್ಕೆ ಸೇರಿದವರೆನ್ನಲಾದ ಹೊನಗುಂಟಾ ಮತ್ತು ಗೋಟಾಳ್ ಎಂಬ ಕುಟುಂಬಗಳ ನಡುವೆ ಈ ಕಲ್ಲು ತೂರಾಟ ನಡೆದಿದೆ. ಪ್ರೇಮ ವಿವಾಹಕ್ಕೆ ಸಂಬಂಧಿಸಿ ಈ ಎರಡು ಕುಟುಂಬದ ಮಧ್ಯೆ ಕಳೆದ ಹಲವು ವರ್ಷಗಳಿಂದ ದ್ವೇಷವಿತ್ತೆನ್ನಲಾಗಿದೆ. ಈ ವಿಚಾರವಾಗಿ ಶನಿವಾರ ಮತ್ತೆ ಜಗಳ ಭುಗಿಲೆದ್ದಿದೆ. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಕಲ್ಲು ತೂರಾಟ ಹಾಗೂ ಬಡಗಿಗಳಿಂದ ಹೊಡೆದಾಟದ ವರೆಗೆ ಮುಂದುವರಿದಿದೆ.

ಈ ವೇಳೆ ಸ್ಥಳದಲ್ಲಿದ್ದ ಪೊಲೀಸರ ಮೇಲೂ ಕಲ್ಲು ತೂರಾಟವಾಗಿದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಪರದಾಡಿದರು. ಇದೇ ವೇಳೆ ಮುಹರ್ರಂ ಆಚರಣೆ ಪ್ರಯುಕ್ತ ಮೆರವಣಿಗೆಗೆಗಾಗಿ ಸ್ಥಳದಲ್ಲಿ ಜಮಾಯಿಸಿ ಸಿದ್ಧರಾಗಿದ್ದ ನೂರಾರು ಮಂದಿ ಭಯಭೀತರಾದರು. 

ಬಳಿಕ ಸ್ಥಳ ಆಗಮಿಸಿದ ಸಿಪಿಐ ಪ್ರಕಾಶ್, ಎರಡು ಕುಟುಂಬದ ಸದಸ್ಯರನ್ನು ವಶಕ್ಕೆ ಪಡೆಯುವ ಮೂಲಕ ಪರಿಸ್ಥಿತಿ ತಿಳಿಗೊಳಿಸುವಲ್ಲಿ ಯಶಸ್ವಿಯಾದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಎರಡು ಕುಟುಂಬಗಳಿಂದ ಪರಸ್ಪರ ವಾಣಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.

ಗಲಾಟೆ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪೊಲೀಸರು, ಇದು ಎರಡು ಕುಟುಂಬಗಳ ಹಳೆಯ ವೈಷಮ್ಯದ ಜಗಳವಾಗಿದ್ದು, ಮುಹರ್ರಂ ಆಚರಣೆಗೂ ಇದಕ್ಕೂ ಸಂಬಂಧ ಇಲ್ಲ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News