×
Ad

ದೇವನಹಳ್ಳಿ ರೈತ ಹೋರಾಟ ಬೆಂಬಲಿಸಿದ ಕನ್ನಡ ಚಿತ್ರರಂಗ | ನಮ್ಮ ಅನ್ನದ ಮೇಲೆ ದಾಳಿ ನಡೆಯುತ್ತಿದೆ : ನಟ ಕಿಶೋರ್ ಕುಮಾರ್

Update: 2025-07-02 19:53 IST

ಬೆಂಗಳೂರು : ದೇವನಹಳ್ಳಿ ಭಾಗದ 13 ಹಳ್ಳಿಗಳ ರೈತರ 1777 ಎಕರೆ ಭೂಸ್ವಾಧೀನ ವಿರೋಧಿ ಉಪವಾಸ ಸತ್ಯಾಗ್ರಹ ಹೋರಾಟಕ್ಕೆ ಕನ್ನಡ ಚಿತ್ರರಂಗ ಬೆಂಬಲ ವ್ಯಕ್ತಪಡಿಸಿದೆ.

ನಿರ್ದೇಶಕರಾದ ರಾಜೇಂದ್ರಸಿಂಗ್ ಬಾಬು, ಟಿ.ಎನ್.ಸೀತಾರಾಮ್, ನಾಗತೀಹಳ್ಳಿ ಚಂದ್ರಶೇಖರ್, ವಿಜಯಲಕ್ಷ್ಮಿ ಸಿಂಗ್, ಗಿರೀಶ್ ಕಾಸರವಳ್ಳಿ, ಪಿ.ಶೇಷಾದ್ರಿ, ಬಹುಭಾಷಾ ನಟ ಪ್ರಕಾಶ್ ರಾಜ್, ಕಿಶೋರ್ ಕುಮಾರ್, ಚಿತ್ರ ಸಾಹಿತಿ ಕವಿರಾಜ್, ನಟಿ ಅಕ್ಷತಾ ಪಾಂಡವಪುರ ಸಹಿತ ಕನ್ನಡ ಚಿತ್ರರಂಗದ ಹಲವರು ಇಲ್ಲಿನ ಫ್ರೀಡಂ ಪಾರ್ಕ್‍ನಲ್ಲಿ ನಡೆಯುತ್ತಿರುವ ರೈತರ ಹೋರಾಟದ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಬೆಂಬಲವನ್ನು ಸೂಚಿಸಿದ್ದಾರೆ.

ಈ ವೇಳೆ ಭೂ ಸತ್ಯಾಗ್ರಹ ವೇದಿಕೆಯಲ್ಲಿ ಮಾತನಾಡಿದ ಬಹುಭಾಷಾ ನಟ ಕಿಶೋರ್ ಕುಮಾರ್, ಅಭಿವೃದ್ಧಿ ಹೆಸರಲ್ಲಿ ರೈತರ ಭೂಮಿಯ ದಂಧೆ ನಡೆಯುತ್ತಿದೆ. ನಮ್ಮ ಅನ್ನದ ಮೇಲೆ ದಾಳಿ ನಡೆಯುತ್ತಿದೆ. ಸಣ್ಣ ರೈತರ ಕೈಯಲ್ಲಿರುವ ಭೂಮಿಯನ್ನು ಕಿತ್ತುಕೊಳ್ಳಲಾಗುತ್ತಿದೆ. ಈಗಲೂ ಇದು ರೈತರ ಹೋರಾಟವೆಂದು ಸುಮ್ಮನಿದ್ದರೆ ನಮ್ಮ ಅನ್ನಕ್ಕೆ ನಾವೇ ಕುತ್ತು ತಂದುಕೊಂಡಂತೆ ಎಂದರು.

ಅನ್ನ, ಆಹಾರಕ್ಕೆ ಅವಲಂಬಿತರಾಗಿರುವವರೆಲ್ಲರೂ ರೈತರ ಹೋರಾಟವನ್ನು ಬೆಂಬಲಿಸಬೇಕು. ರೈತರು ತಮ್ಮ ಹೊಲ, ಗದ್ದೆಗಳಲ್ಲಿ ಮಾಡುವ ಕೌಶಲ್ಯಪೂರ್ಣ ಕೆಲಸಗಳನ್ನು ಫ್ಯಾಕ್ಟರಿಗಳಿಂದ ಕೊಡಲು ಸಾಧ್ಯವಿಲ್ಲ. ಫ್ಯಾಕ್ಟರಿಗಳಿಂದ ಅನ್ನ ಬೆಳೆಯಲು ಸಾಧ್ಯವೇ ಎಂದು ಕಿಶೋರ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ನಾನೊಬ್ಬ ರೈತನಾಗಿ, ರೈತನ ಮಗನಾಗಿ ಈ ಹೋರಾಟವನ್ನು ಸಂಪೂರ್ಣ ಬೆಂಬಲಿಸುತ್ತೇನೆ. ಅಭಿವೃದ್ಧಿಯ ಹೆಸರಿನಲ್ಲಿ ಈಗಾಗಲೇ ರಾಜ್ಯದ ಹಲವೆಡೆ ಭೂ ಕಬಳಿಕೆಯಿಂದಾಗಿ ಸಾವಿರಾರು ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಮುಖ್ಯವಾಗಿ ನಾಡಿನ ಜನತೆ ಇದನ್ನು ತಮ್ಮ ಹೋರಾಟ ಎಂದು ಅರ್ಥಮಾಡಿಕೊಂಡು ಇಲ್ಲಿಗೆ ಬಂದು ರೈತರನ್ನು, ಇಲ್ಲಿಯ ಹೋರಾಟಗಾರರನ್ನು ಬೆಂಬಲಿಸಬೇಕು ಎಂದು ಕಿಶೋರ್ ಕುಮಾರ್ ಮನವಿ ಮಾಡಿದರು.

ಭೂ ಸ್ವಾಧೀನದಿಂದ ರೈತರು ತಮ್ಮ ಬದುಕಿನ ಮೂಲಾಧಾರವಾದ ಭೂಮಿಯನ್ನು ಕಳೆದುಕೊಂಡು ನಿರುದ್ಯೋಗಿಗಳಾಗುತ್ತಾರೆ. ಆಮೇಲೆ, ಸರಕಾರ ಅಥವಾ ಕಾರ್ಪೊರೇಟ್‍ಗಳು ಕೊಟ್ಟ ಸಂಬಳಕ್ಕೆ ಜೀವನಪೂರ್ತಿ ದುಡಿಯಬೇಕಾಗುತ್ತದೆ. ಅಲ್ಲಿಗೆ ಅವರ ಜೀವನ ಮುಗಿದು ಹೋಗುತ್ತದೆ. ಒಟ್ಟಾರೆ, ಆಳುವ ವರ್ಗವು ಕೈಗಾರಿಕೀಕರಣದ ಹೆಸರಿನಲ್ಲಿ ರೈತರ ಮೂಲ ಬದುಕು ಕಸಿದುಕೊಳ್ಳುತ್ತಿದೆ ಎಂದು ನಟ ಕಿಶೋರ್ ಕುಮಾರ್ ಆತಂಕ ವ್ಯಕ್ತಪಡಿಸಿದರು.

ಚಿತ್ರ ಸಾಹಿತಿ ಕವಿರಾಜ್ ಮಾತನಾಡಿ, ಹೊಟ್ಟೆಗೆ ಅನ್ನ ತಿನ್ನುವವರೆಲ್ಲರೂ ಈ ಹೋರಾಟಕ್ಕೆ ಬೆಂಬಲವಾಗಿ ನಿಲ್ಲಬೇಕು. ರೈತರ ಭೂಮಿಯನ್ನು ಕಸಿಯುವ ಮೂಲಕ ಇಡೀ ಸಮಾಜದ ಅನ್ನವನ್ನು ಕಸಿಯಲಾಗುತ್ತಿದೆ. ಇದು ಇಡೀ ಸಮಾಜವೇ ಹೋರಾಟ ಮಾಡಬೇಕಾದ ಹಕ್ಕು. ಕಸಿದುಕೊಳ್ಳುವ ಪ್ರಕ್ರಿಯೆ ಎಲ್ಲ ಆಯಾಮಗಳಲ್ಲೂ ನಡೆಯುತ್ತಿದೆ. ಕಾರ್ಪೊರೇಟ್ ಲಾಬಿ ನಮ್ಮನ್ನು ಆಳುತ್ತಿದೆ. ಇದರ ಬಗ್ಗೆ ಎಚ್ಚೆತ್ತುಕೊಂಡು ಸಮಗ್ರ ಹೋರಾಟ ಮಾಡಬೇಕು ಎಂದರು.

ಚಿತ್ರ ನಿರ್ದೇಶಕರ ನಂಜುಂಡೇಗೌಡ ಮಾತನಾಡಿ, ಅನ್ನ ನೀಡುವ ರೈತರ ಹೋರಾಟವನ್ನು ಚಿತ್ರರಂಗ ಸದಾ ಬೆಂಬಲಿಸುತ್ತದೆ. ನೆಲ, ಜಲ, ಆಹಾರ, ಭಾಷೆಗಳ ಮೇಲೆ ದಾಳಿಗಳನ್ನು ಸಹಿಸುವುದಿಲ್ಲ. ಕಲಾವಿದರು ರೈತರ ಪರವಾಗಿ ನಿಲ್ಲುತ್ತೇವೆ. ಇಲ್ಲಿನ ರೈತರಿಗೆ ನ್ಯಾಯ ಸಿಗಬೇಕು ಎಂದರು.

ಲೇಖಕ ಪ್ರೊ.ರಹಮತ್ ತರೀಕೆರೆ ಮಾತನಾಡಿ, ರೈತರು ಭೂಮಿ ಕೊಡುವುದಿಲ್ಲವೆಂದರೆ ಸರಕಾರ ಕಿತ್ತುಕೊಳ್ಳಬಾರದು. ರೈತರು ಈಗಾಗಲೇ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರಕಾರಗಳು ಅದರ ಕುರಿತು ಚರ್ಚೆ ಮಾಡದೇ, ಭೂಮಿ ಹೇಗೆ ಕಿತ್ತುಕೊಳ್ಳಬೇಕೆಂದು ಯೋಚಿಸುತ್ತಿದೆ. ಜುಲೈ 4ರಂದು ರೈತರ ಪರವಾಗಿ ತೀರ್ಮಾನವಾಗಬೇಕು. ಇದು ರೈತರ ಹೋರಾಟ ಮಾತ್ರವಲ್ಲ, ಎಲ್ಲ ಕನ್ನಡಿಗರ, ಹೊಟ್ಟೆಗೆ ಅನ್ನ ತಿನ್ನುವವರ ಹೋರಾಟ ಎಂದರು.

ಸಾಮಾಜಿಕ ಚಿಂತಕ ಶಿವಸುಂದರ್ ಮಾತನಾಡಿ, ಈ ಹೋರಾಟದ ಧ್ವನಿಗಳನ್ನು ಕೇಳಿಸಿಕೊಳ್ಳಲು ಸರಕಾರಕ್ಕೆ ಕಿವಿಗಳ ಸಮಸ್ಯೆಯಿದೆ. ಸರಕಾರ ಸರಿಯಾದ ನೀತಿಗಳನ್ನು ರೂಪಿಸಿದರೆ ಇದು ಬಗೆಹರಿಯದ ಸಮಸ್ಯೆಯಲ್ಲ. ಅಸಲಿ ಸಮಸ್ಯೆ ಇರುವುದು ಸರಕಾರ ಹಿತಾಸಕ್ತಿಯ ಬಗ್ಗೆ. ಮುಖ್ಯಮಂತ್ರಿಗಳ ವೈಯಕ್ತಿಕ ಸಜ್ಜನಿಕೆ-ನಿಲುವುಗಳು ಸರಕಾರದ, ಪಕ್ಷದ ವರ್ಗ ಹಿತಾಸಕ್ತಿಯ ಮಿತಿಯನ್ನು ಮೀರುವುದಿಲ್ಲ ಎಂದರು.

ವೇದಿಕೆಯಲ್ಲಿ ಹೋರಾಟಗಾರರಾದ ವೀರಸಂಗಯ್ಯ, ಕೆ.ಪಿ.ಸುರೇಶ್, ಬಿ.ಟಿ.ಲಲಿತಾನಾಯಕ್, ನೂರ್ ಶ್ರೀಧರ್, ವಿ.ನಾಗರಾಜ್, ಗುರುಪ್ರಸಾದ್ ಕೆರೆಗೋಡು, ಇಂದೂಧರ ಹೊನ್ನಾಪುರ, ಬಡಗಲಪುರ ನಾಗೇಂದ್ರ, ಕೆ.ವಿ.ಭಟ್ ಉಪಸ್ಥಿತರಿದ್ದರು. ಫ್ರೀಡಂಪಾರ್ಕ್‍ನಲ್ಲಿ ಸಂಯುಕ್ತ ಹೋರಾಟ-ಕರ್ನಾಟಕದ ಡಿ.ಎಚ್.ಪೂಜಾರಿ, ಯಶವಂತ, ಚುಕ್ಕಿ ನಂಜುಂಡಸ್ವಾಮಿ, ಎಸ್.ವರಲಕ್ಷ್ಮೀ, ದೇವಿ, ಲಕ್ಷ್ಮಣ ಮಂಡಲಗೇರಾ, ಮಲ್ಲಿಗೆ ಮತ್ತು ಪ್ರಭಾ ಬೆಳವಂಗಲ ಉಪವಾಸ ಕುಳಿತಿದ್ದರು.

ಹೋರಾಟಕ್ಕೆ ದನಿಗೂಡಿಸಿದ ನಟಿ ರಮ್ಯಾ: ‘ದೇವನಹಳ್ಳಿ ರೈತರ ಭೂ ಸ್ವಾಧೀನ ವಿರೋಧಿ ಹೋರಾಟಕ್ಕೆ ಚಿತ್ರನಟಿ ರಮ್ಯಾ ದನಿಗೂಡಿಸಿದ್ದು, ಈ ಬಗ್ಗೆ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಸರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಬಗ್ಗೆ ಸ್ವಲ್ಪ ಕರುಣೆ ತೋರಿಸಿ ಅವರಿಗೆ ಒಳ್ಳೆಯದನ್ನು ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಇದು ಕೇವಲ ಕರ್ನಾಟಕದ ರೈತರ ಕಥೆಯಲ್ಲ. ದೇಶಾದ್ಯಂತ ಎಲ್ಲಾ ಕಡೆಯು ಇದೇ ಪರಿಸ್ಥಿತಿ ಇದೆ. ಕೈಗಾರಿಕೆಗಳು ಉದ್ಯೋಗಗಳನ್ನು ಸೃಷ್ಟಿಸುವಾಗ ರೈತರ ಜೀವನೋಪಾಯವನ್ನೂ ಕಾಪಾಡಿಕೊಳ್ಳಬೇಕಿದೆ’ ಎಂದು ಬರೆದುಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News