ಅಬಕಾರಿ ಇಲಾಖೆಗೆ 45 ಸಾವಿರ ಕೋಟಿ ರೂ.ಸಂಗ್ರಹಣಾ ಗುರಿ : ಮುಖ್ಯಮಂತ್ರಿ
‘ಪಾನೀಯಗಳಲ್ಲಿರುವ ಮದ್ಯದ ಅಂಶದ ಆಧಾರದಲ್ಲಿ ಸುಂಕ ವ್ಯವಸ್ಥೆ
ಬೆಂಗಳೂರು : ಅಬಕಾರಿ ಇಲಾಖೆಗೆ 2026-27ನೆ ಸಾಲಿಗೆ 45 ಸಾವಿರ ಕೋಟಿ ರೂ.ಗಳ ಸಂಗ್ರಹಣಾ ಗುರಿಯನ್ನು ನೀಡಲಾಗಿದೆ ಎಂದು ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮದ್ಯಪಾನದ ದುಷ್ಪರಿಣಾಮಗಳು ಸಮಾಜದ ಮೇಲೆ ಉಂಟುಮಾಡುವ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಜಾಗತಿಕ ಮಟ್ಟದಲ್ಲಿ ಮದ್ಯದ ಅಂಶವನ್ನು ಆಧರಿಸಿದ ತೆರಿಗೆ ಪದ್ದತಿಯು ಗೋಲ್ಡ್ ಸ್ಟಾಂಡರ್ಡ್ ಆಗಿದೆ. ಪ್ರಸಕ್ತ ಸಾಲಿನ ಎಪ್ರಿಲ್ ನಿಂದ ಪಾನೀಯಗಳಲ್ಲಿ ಇರುವ ಮದ್ಯದ ಅಂಶವನ್ನು ಆಧಾರವಾಗಿಟ್ಟುಕೊಂಡ ಅಬಕಾರಿ ಸುಂಕ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು.
ಅಬಕಾರಿ ಸುಂಕವು ಏಕರೂಪವಾಗಿರಲಿದ್ದು, ಹೆಚ್ಚುವರಿ ಅಬಕಾರಿ ಸುಂಕವನ್ನು ನಿರ್ದಿಷ್ಟ ಮಿತಿಯೊಳಗೆ ಎಕ್ಸ್-ಫ್ಯಾಕ್ಟರಿ ದರ ಪಟ್ಟಿಗಳ ಆಧಾರದ ಮೇಲೆ ವಿಧಿಸಲಾಗುವುದು. ಮುಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ, ಎಲ್ಲ ಪಾನೀಯಗಳ ಮೇಲೆ ಏಕರೂಪವಾಗಿ ಅನ್ವಯಿಸುವಂತೆ ಪ್ರತಿ ಲೀಟರ್‍ನಲ್ಲಿ ಮದ್ಯದ ಅಂಶವನ್ನು ಆಧರಿಸಿ ಅಬಕಾರಿ ಸುಂಕ ವಿಧಿಸುವ ಪ್ರಕ್ರಿಯೆಗೆ ಹಂತ ಹಂತವಾಗಿ ಪರಿವರ್ತನೆಗೊಳ್ಳುತ್ತೇವೆ ಎಂದು ಅವರು ತಿಳಿಸಿದರು.
ಉತ್ಪಾದಕರಿಗೆ ಮದ್ಯದ ಬೆಲೆ ನಿಗದಿಗೊಳಿಸುವ ಅಧಿಕಾರ: ಹೊಸ ನೀತಿಯಡಿ ಸರಕಾರದಿಂದ ಮದ್ಯದ ಬೆಲೆ ನಿರ್ಧಾರವಾಗುವುದನ್ನು ಮುಕ್ತಗೊಳಿಸಲಾಗುವುದು. ಮಾರುಕಟ್ಟೆ ಪರಿಗಣನೆ ಆಧಾರದ ಮೇಲೆ ಮದ್ಯ ಉತ್ಪನ್ನಗಳನ್ನು ಸ್ಲ್ಯಾಬ್‍ಗಳಲ್ಲಿ ಇರಿಸುವ ಅಧಿಕಾರವನ್ನು ಸಂಪೂರ್ಣವಾಗಿ ಉತ್ಪಾದಕರಿಗೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ಇತರ ಪ್ರಮುಖ ಅಂಶಗಳು: ದರ ನಿಗದಿ ಸ್ಲ್ಯಾಬ್‍ಗಳನ್ನು ತರ್ಕಬದ್ಧಗೊಳಿಸುವ ಸಲುವಾಗಿ ಪ್ರಸ್ತುತ ಇರುವ 16 ಸ್ಲ್ಯಾಬ್‍ಗಳನ್ನು 8 ಸ್ಲ್ಯಾಬ್‍ಗಳಿಗೆ ಇಳಿಕೆ.
* ಆರೋಗ್ಯ ಇಲಾಖೆಯು ಮದ್ಯಪಾನದಿಂದ ಉಂಟಾಗುವ ನಕಾರಾತ್ಮಕ ಪರಿಣಾಮಗಳು, ಆರೋಗ್ಯ ಕಾರ್ಯಕ್ರಮಗಳು, ಮದ್ಯ ವ್ಯಸನಮುಕ್ತಿ ಮತ್ತು ಪುನರ್ವಸತಿ ಕಾರ್ಯಕ್ರಮಗಳನ್ನು ನಿರ್ವಹಿಸಲಿದೆ.
* ತೆರಿಗೆ ಸೋರಿಕೆಯನ್ನು ತಡೆಯಲು ತಂತ್ರಜ್ಞಾನ ಆಧಾರಿತ ಬ್ಲಾಕ್‍ಚೈನ್ ಡಿಜಿಟಲ್ ಟ್ರ್ಯಾಕಿಂಗ್ ವ್ಯವಸ್ಥೆಗಳನ್ನು ಜಾರಿಗೆ ತರಲಾಗುವುದು. ಮದ್ಯ ರವಾನೆಗೆ ಬೆಂಗಾವಲು ವ್ಯವಸ್ಥೆಯ ಬದಲಿಗೆ ಜಿಯೋ-ಫೆನ್ಸ್ಡ್ ಇ-ಲಾಕ್ ವ್ಯವಸ್ಥೆ ಅಳವಡಿಸಲಾಗುತ್ತದೆ. ಈ ಕ್ರಮಗಳು ರಿಯಲ್ ಟೈಮ್ ಮೇಲ್ವಿಚಾರಣೆಗೆ ಅವಕಾಶ ಕಲ್ಪಿಸುವ ಮೂಲಕ ಪಾರದರ್ಶಕತೆ ಹೆಚ್ಚಿಸುತ್ತವೆ.
* ಉತ್ಪಾದನಾ ಸನ್ನದುಗಳನ್ನು ಸ್ವಯಂಚಾಲಿತವಾಗಿ ನವೀಕರಿಸಲಾಗುವುದು. ಲೇಬಲ್ ಅನುಮೋದನೆಗಳು, ಸಿಎಲ್-5 (ಸಾಂದರ್ಭಿಕ ಸನ್ನದುಗಳು) ಮತ್ತು ಆರ್‍ವಿಬಿ ಸನ್ನದುಗಳು
(ಐದು ವರ್ಷಗಳ ಅವಧಿಗೆ) ಆನ್‍ಲೈನ್‍ನಲ್ಲಿ ಸ್ವಯಂ ಘೋಷಣೆ ಮತ್ತು ಶುಲ್ಕ ಪಾವತಿಯ ಷರತ್ತಿಗೊಳಪಟ್ಟು, ಯಾವುದೇ ಹಸ್ತಕ್ಷೇಪವಿಲ್ಲದೆ ಡೀಮ್ಡ್ ಒಪ್ಪಿಗೆ ವ್ಯವಸ್ಥೆಯಡಿ ಅನುಮೋದನೆ.
*ಡಿಸ್ಟಿಲರಿಗಳು ಮತ್ತು ಬ್ರೂವರಿಗಳಿಗೆ 24 ಗಂಟೆಗಳ ಕಾರ್ಯಾಚರಣೆ ಮತ್ತು ರವಾನೆ ಮಾಡಲು ಅನುಮತಿ. ಬಿಯರ್ ಲೇಬಲ್‍ಗಳಲ್ಲಿ ಮಾಲ್ಟ್ ಮತ್ತು ಸಕ್ಕರೆ ಅಂಶವನ್ನು ಕಡ್ಡಾಯವಾಗಿ ನಮೂದಿಸುವ ಅಗತ್ಯತೆ ರದ್ದು. ಮದ್ಯ ವಲಯದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಡಿಸ್ಟಿಲರಿಗಳು ಮತ್ತು ಬ್ರೂವರಿಗಳು ಪ್ರವಾಸಿಗರಿಗೆ ಮದ್ಯ ಸವಿಯಲು ಮತ್ತು ತಮ್ಮ ಆವರಣದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಪ್ರವಾಸಿಗರಿಗೆ ಮಾರಾಟ ಮಾಡಲು ಅವಕಾಶ.
* 2025-26ನೆ ಸಾಲಿನಲ್ಲಿ ಫೆಬ್ರವರಿ ತಿಂಗಳ ಅಂತ್ಯದವರೆಗೆ ಅಬಕಾರಿ ತೆರಿಗೆಯಿಂದ ಒಟ್ಟು 36,492 ಕೋಟಿ ರೂ.ಗಳ ರಾಜಸ್ವ ಸ್ವೀಕೃತವಾಗಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಶೇ.12.7 ರಷ್ಟು ಬೆಳವಣಿಗೆಯಾಗಿದೆ.
* ಅಬಕಾರಿ ಇಲಾಖೆಯಲ್ಲಿ ಪಾರದರ್ಶಕತೆಯನ್ನು ಮತ್ತಷ್ಟು ಹೆಚ್ಚಿಸಲು ಅಬಕಾರಿ ಉಪ ಅಧೀಕ್ಷಕರು ಮತ್ತು ಅಬಕಾರಿ ಅಧೀಕ್ಷಕರ ವರ್ಗಾವಣೆಯನ್ನು ಡಿಜಿಟಲ್ ಕೌನ್ಸಿಲಿಂಗ್ ಮೂಲಕ ಮಾಡಲು ಕ್ರಮ.