ಕೇರಳ ಸಿಎಂ ಪುತ್ರಿ ಕಂಪನಿ ವಿರುದ್ಧ ತನಿಖೆಗೆ ಆದೇಶ; ಮೇಲ್ಮನವಿ ಸಂಬಂಧ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
Photo credit: PTI
ಬೆಂಗಳೂರು: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ಟಿ. ವೀಣಾ ನಿರ್ದೇಶಕಿಯಾಗಿರುವ ಮಾಹಿತಿ ತಂತ್ರಜ್ಞಾನ ಸಂಸ್ಥೆ ಎಕ್ಸಾಲಾಜಿಕ್ ಸಲ್ಯೂಷನ್ಸ್ ವಿರುದ್ಧ ಗಂಭೀರ ವಂಚನೆ ತನಿಖಾ ಕಚೇರಿ (ಎಸ್‌ಎಫ್‌ಐಒ) ತನಿಖೆಗೆ ಆದೇಶಿಸಿದ್ದ ಕ್ರಮ ಪ್ರಶ್ನಿಸಿರುವ ಮೇಲ್ಮನವಿ ಸಂಬಂಧ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಎಸ್‌ಎಫ್‌ಐಒ 2024ರ ಜನವರಿ 31ರಂದು ಹೊರಡಿಸಿರುವ ಆದೇಶ ರದ್ದು ಕೋರಿದ್ದ ಅರ್ಜಿ ವಜಾಗೊಳಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಸಂಸ್ಥೆಯ ನಿರ್ದೇಶಕಿ ಟಿ. ವೀಣಾ ಸಲ್ಲಿಸಿರುವ ಮೇಲ್ಮನವಿ ಕುರಿತು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಮೇಲ್ಮನವಿದಾರರ ಪರ ವಕೀಲರು ವಾದ ಮಂಡಿಸಿ, ಕಂಪನಿ ಕಾಯ್ದೆ ಸೆಕ್ಷನ್ 210ರ (ಕಂಪನಿಯ ವಿಚಾರಗಳಿಗೆ ಸಂಬಂಧಿಸಿದ ತನಿಖೆ) ಅಡಿ ತನಿಖೆ ಪೂರ್ಣಗೊಳ್ಳುವವರೆಗೆ ಸೆಕ್ಷನ್ 212ರ ಅಡಿ ಎಸ್‌ಎಫ್‌ಐಒ ತನಿಖೆಗೆ ಆದೇಶಿಸುವಂತಿಲ್ಲ. ಆದ್ದರಿಂದ, ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿದರು.
ಆಗ ನ್ಯಾಯಪೀಠ, ಇದೊಂದು ಉತ್ತಮ ಪ್ರಶ್ನೆಯಾಗಿದ್ದು, ಈ ವಿಚಾರದ ಕುರಿತು ಯಾವುದೇ ತೀರ್ಪು ಬಂದಿಲ್ಲ. ಎಸ್‌ಎಫ್‌ಐಒ ಸ್ಥಾನಮಾನದ ಕುರಿತು ಪರಿಶೀಲಿಸಲಾಗುವುದು. ಆದರೆ, ಈ ಹಂತದಲ್ಲಿ ಮಧ್ಯಂತರ ಆದೇಶ ನೀಡಲಾಗದು ಎಂದು ತಿಳಿಸಿತಲ್ಲದೆ, ಎಸ್‌ಎಫ್‌ಐಒ ನಿರ್ದೇಶಕರು ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಡಿಸೆಂಬರ್ 3ಕ್ಕೆ ಮುಂದೂಡಿತು.