×
Ad

"ಪ್ರಧಾನಿ ಮೋದಿ ಜನರ ಅನ್ನದ ತಟ್ಟೆಯನ್ನು ಕಸಿಯುತ್ತಿದ್ದಾರೆ": ಅಡುಗೆ ಅನಿಲ ಬೆಲೆ ಏರಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ

Update: 2026-06-07 19:18 IST

 ಸಚಿವ ಪ್ರಿಯಾಂಕ್ ಖರ್ಗೆ (Photo source: X)

ಬೆಂಗಳೂರು: ಕೇಂದ್ರದ ಬಿಜೆಪಿ ಸರಕಾರವು ಸಿಲಿಂಡರ್ ಬೆಲೆ 29 ರೂ.ಗಳಷ್ಟು ಏರಿಕೆ ಮಾಡಿರುವುದರ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ, ಮಾಜಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಶಿವರಾಜ್ ತಂಗಡಗಿ ಸೇರಿದಂತೆ ಹಲವು ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆಯಾದ ಬೆನ್ನಲ್ಲೇ ಗೃಹ ಬಳಕೆಯ ಸಿಲಿಂಡರ್ ಬೆಲೆ 3 ತಿಂಗಳ ಅವಧಿಯಲ್ಲಿ ಎರಡನೇ ಬಾರಿ 29 ರೂ.ಗಳಷ್ಟು ಏರಿಕೆಯಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ನಿಮ್ಮ ಮಾಂಗಲ್ಯ ಕಸಿಯುತ್ತದೆ’ ಎಂಬ ಅತ್ಯಂತ ಕನಿಷ್ಠ ಮಟ್ಟದ ಹೇಳಿಕೆ ನೀಡಿದ್ದ ಪ್ರಧಾನಿ ಮೋದಿ ಇದೀಗ ಜನರ ಅನ್ನದ ತಟ್ಟೆಯನ್ನು ಕಸಿಯುತ್ತಿದ್ದಾರೆ’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ರವಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಬಹುಶಃ 8 ಪಿ.ಎಂ. ಪ್ರಧಾನಿ ಮತ್ತೊಮ್ಮೆ ಟಿವಿಯಲ್ಲಿ ಕುಳಿತು ದೇಶದ ಜನತೆಗೆ ‘ಕಡಿಮೆ ಊಟ ಮಾಡಿ’ ಎಂಬ ಆತ್ಮನಿರ್ಬರತೆಯ ಉಚಿತ ಸಲಹೆ ನೀಡಬಹುದೇನೋ. ಈ ಬೆಲೆ ಏರಿಕೆಯ ಅಚ್ಚೆ ದಿನಗಳ ಬಗ್ಗೆ ಬಿಜೆಪಿಯ ನಾಯಕರ ಗಾಢಮೌನವು ಜನರ ಬಗ್ಗೆ ಅವರಿಗಿರುವ ಮಾನಸಿಕ ಕ್ರೌರ್ಯವನ್ನು ತೋರಿಸುತ್ತದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದೇನಾ ಅಚ್ಛೇದಿನ್: ಸಚಿವ ಈಶ್ವರ್ ಖಂಡ್ರೆ

ಗೃಹ ಬಳಕೆಯ 14.2 ಕೆ.ಜಿ. ಅಡುಗೆ ಅನಿಲ ಸಿಲಿಂಡರ್ ದರವನ್ನು 29 ರೂ.ಏರಿಸಿದ್ದು, ಇದೇನಾ ಅಚ್ಛೇದಿನ್. 3 ತಿಂಗಳಲ್ಲಿ 2ನೆ ಬಾರಿ ಶ್ರೀಸಾಮಾನ್ಯರು ಬಳಸುವ ಅಡುಗೆ ಅನಿಲ ದರ ಏರಿಕೆ ಮಾಡಲಾಗಿದ್ದು, ಸುಮಾರು 90ರೂ. ಹೊರೆ ಬಿದ್ದಿದೆ. ಇದರಿಂದ ಬಡವರು, ಮಧ್ಯಮವರ್ಗದವರು ನಲುಗಿ ಹೋಗಿದ್ದಾರೆ. ಇದೆಲ್ಲವೂ ಕೇಂದ್ರ ಸರಕಾರದ ದುರಾಡಳಿತದ ಫಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ದೂರಿದ್ದಾರೆ.

ರವಿವಾರ ಪ್ರಕಟಣೆ ನೀಡಿರುವ ಅವರು, ‘ಕಾಂಗ್ರೆಸ್ ನೇತೃತ್ವದ ಯುಪಿಎ ಅವಧಿಯಲ್ಲಿ 3ರಿಂದ 4 ರೂ. ದರ ಹೆಚ್ಚಳವಾದರೂ ತಲೆಯ ಮೇಲೆ ಗ್ಯಾಸ್ ಸಿಲಿಂಡರ್ ಹೊತ್ತು ಪ್ರತಿಭಟನೆ ಮಾಡುತ್ತಿದ್ದ ಬಿಜೆಪಿಗರು, ಇದೀಗ ಏಕೆ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಈಗ ಇವರ ಬಡವರ ಪರ ಕಾಳಜಿ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ್ದಾರೆ.

ವಾಣಿಜ್ಯ ಬಳಕೆಯ ಸಿಲಿಂಡರ್ ದರ 3200ರೂ.ದಾಟಿದ್ದು, ಹೊಟೆಲ್‍ಗಳಲ್ಲಿ ಎಲ್ಲ ತಿಂಡಿ-ತಿನಿಸುಗಳ ದರ ಹೆಚ್ಚಳ ಆಗಿದೆ. ಪೆಟ್ರೋಲ್ ಡೀಸೆಲ್ ದರ ಹೆಚ್ಚಳದಿಂದ ಜೀವನಾವಶ್ಯಕ ವಸ್ತುಗಳ ದರವೂ ಗಗನಕ್ಕೆ ಏರಿದೆ. ಬಡವರು, ಮಧ್ಯಮವರ್ಗದವರ ಬದುಕು ದುಸ್ತರವಾಗುತ್ತಿದೆ. ರಾಜ್ಯದಲ್ಲಿ ಗ್ಯಾರಂಟಿಗಳನ್ನು ನೀಡಿರುವುದರಿಂದ ಜನ ಕೇಂದ್ರದ ಈ ಹೊರೆ ಹೊರುವ ಶಕ್ತಿ ಪಡೆದಿದ್ದಾರೆ. ಬಿಜೆಪಿ ಮತ್ತು ಮಿತ್ರಪಕ್ಷಗಳಿಗೆ ಜನರೇ ಬೀದಿಗಿಳಿದು ಬುದ್ಧಿಕಲಿಸುವ ದಿನ ದೂರವಿಲ್ಲ ಎಂದು ಈಶ್ವರ ಖಂಡ್ರೆ ಎಚ್ಚರಿಸಿದ್ದಾರೆ.


ದರ ಏರಿಕೆ ಹಿಂಪಡೆಯಿರಿ: ಲಕ್ಷ್ಮಿ ಹೆಬ್ಬಾಳ್ಕರ್

ಕೇಂದ್ರ ಸರಕಾರ ತಕ್ಷಣವೇ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ನಿರ್ಧಾರವನ್ನು ಹಿಂಪಡೆದು, ಸಾಮಾನ್ಯ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಬದುಕನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳುವ ಬದಲು, ಅವರ ಹಿತಾಸಕ್ತಿಯನ್ನು ಕಾಪಾಡುವ ನೀತಿಗಳನ್ನು ಜಾರಿಗೆ ತರಬೇಕು ಎಂದು ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಗ್ರಹಿಸಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಮಾಂಗಲ್ಯ ಕಸಿಯುತ್ತದೆ ಎಂಬ ಕೀಳುಮಟ್ಟದ ಹೇಳಿಕೆ ನೀಡಿದ್ದ ಪ್ರಧಾನಿ ಮೋದಿ ಇಂದು ಜನರ ಬದುಕನ್ನೇ ಕಿತ್ತುಕೊಳ್ಳುತ್ತಿದ್ದಾರೆ. 2014ರಲ್ಲಿ ಅಡುಗೆ ಅನಿಲದ ಬೆಲೆ ಕೈಗೆಟಕದ ಮಟ್ಟದಲ್ಲಿತ್ತು ಎಂದು ಹೇಳಿ ಅಧಿಕಾರಕ್ಕೆ ಬಂದವರು, ಇಂದು ಸಾಮಾನ್ಯ ಜನರ ಬದುಕನ್ನೇ ದುಬಾರಿಯನ್ನಾಗಿ ಮಾಡಿದ್ದಾರೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಟೀಕಿಸಿದ್ದಾರೆ.

×
Ad

‘ಬಿಜೆಪಿಗರು ಈ ದೇಶದ ನಾಟಕ ಕಂಪೆನಿಯವರಿದ್ದಂತೆ. ಈ ಹಿಂದೆ ಯುಪಿಎ ಸರಕಾರದ ಅವಧಿಯಲ್ಲಿ ಒಂದೆರಡು ರೂಪಾಯಿ ಸಿಲಿಂಡರ್ ಬೆಲೆ ಹೆಚ್ಚಾಗಿದ್ದಕ್ಕೆ ಇಡೀ ದೇಶದಲ್ಲಿ ಖಾಲಿ ಸಿಲಿಂಡರ್ ಹೊತ್ತು ಓಡಾಡಿದ ಬಿಜೆಪಿಗರು ಇದೀಗ ಕಾಣುತ್ತಿಲ್ಲ. ಶೋಭಾಕ್ಕ, ಸ್ಮೃತಿ ಇರಾನಿ ಅವರೇ ಎಲ್ಲಿದ್ದೀರಾ?’ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಛೇಡಿಸಿದ್ದಾರೆ.

‘ದಿನಕ್ಕೆ ಒಂದು ರೊಟ್ಟಿ ತಿನ್ನಿ, ತೈಲ ಉಳಿತಾಯಕ್ಕೆ ಸಾರ್ವಜನಿಕ ವಾಹನ ಬಳಸಿ ಎನ್ನುತ್ತಾ, ಕೆಲವರು ಪ್ರಧಾನಿ ಮೋದಿಯವರನ್ನು ಮೆಚ್ಚಿಸಲು ಸೈಕಲ್‍ನಲ್ಲಿ ಓಡಾಡುತ್ತಾ ಇದ್ದಾರೆ. ನಮ್ಮ ದೇಶದ ಆರ್ಥಿಕ ಸ್ಥಿತಿಯ ಬಗ್ಗೆ ನಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿ ‘ಅದೋಗತಿಗೆ ಹೋಗಿದೆ’ ಎಂದಾಗ ಬಿಜೆಪಿಯವರು ಜರಿದರು. ಇದೀಗ ಎಲ್ಲಿಗೆ ಬಂದು ನಿಂತಿದ್ದೇವೆ ಎಂದು ಬಿಜೆಪಿಗರು ಸ್ಪಷ್ಟಪಡಿಸಲಿ ಎಂದು ಅವರು ಸವಾಲು ಹಾಕಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News