ವಿದ್ಯಾರ್ಥಿಗಳ ಮೇಲೆ ಆಗಿರುವ ಪೊಲೀಸ್ ದೌರ್ಜನ್ಯದ ಕುರಿತು ತನಿಖೆ ನಡೆಯಬೇಕು : ಕೆ.ಸಿ.ವೇಣುಗೋಪಾಲ್

Update: 2026-07-24 21:45 IST

ಕೆ.ಸಿ. ವೇಣುಗೋಪಾಲ್ | PC : PTI

ಬೆಂಗಳೂರು : ನೀಟ್ ಅಕ್ರಮಗಳ ಹೊಣೆ ಹೊತ್ತ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂಬುದು ಕೇವಲ ಕಾಂಗ್ರೆಸ್ ಪಕ್ಷದ ಒತ್ತಾಯ ಅಲ್ಲ, ಇದು ದೇಶದ ಯುವಕರು, ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬ ಸದಸ್ಯರ ಒತ್ತಾಯವಾಗಿದೆ ಎಂದು ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಿಳಿಸಿದರು.

ಶುಕ್ರವಾರ ನಗರದ ಕ್ವೀನ್ಸ್‍ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಇಂದಿರಾ ಭವನದ ಭಾರತ್ ಜೋಡೋ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಮಧ್ಯರಾತ್ರಿ ವಿಡಿಯೋ ಬಿಡುಗಡೆ ಮಾಡಿ ಡ್ರಾಮ ಮಾಡಿದ್ದಾರೆ. ಸಮಸ್ಯೆಯನ್ನು ಬಗೆಹರಿಸಬೇಕು ಎಂಬ ಮನಸ್ಸು ಅವರಿಗಿದ್ದರೆ ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಕರೆದು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಕೇಂದ್ರ ಸಚಿವ ಸಂಪುಟದಿಂದ ಧರ್ಮೇಂದ್ರ ಪ್ರಧಾನ್ ಅವರನ್ನು ಬಿಟ್ಟು, ವಿದ್ಯಾರ್ಥಿಗಳ ಮೇಲೆ ಹಾಕಿರುವ ಪ್ರಕರಣಗಳನ್ನು ಹಿಂಪಡೆದು, ನೀಟ್ ಅಕ್ರಮದಿಂದ ತಮ್ಮ ಜೀವ ಕಳೆದುಕೊಂಡಿರುವ ವಿದ್ಯಾರ್ಥಿಗಳ ಕುಟುಂಬಗಳಿಗೆ ನ್ಯಾಯಯುತ ಪರಿಹಾರ ಕೊಟ್ಟು, ಸಂಸತ್ತಿನಲ್ಲಿ ಈ ವಿಚಾರದ ಬಗ್ಗೆ ಚರ್ಚೆ ನಡೆಸಲು ಅವಕಾಶ ಕೊಟ್ಟಿದ್ದರೆ ಇಂದು ದೇಶದಲ್ಲಿ ಪರಿಸ್ಥಿತಿ ಭಿನ್ನವಾಗಿರುತ್ತಿತ್ತು ಎಂದು ವೇಣುಗೋಪಾಲ್ ಹೇಳಿದರು.

ಇವತ್ತು ದೇಶದ ಯುವಕರು, ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡಲು ಪ್ರಧಾನಿ ನರೇಂದ್ರ ಮೋದಿಯ ಧೋರಣೆಯೇ ಕಾರಣ. ಸೋಮವಾರ ಸದನ ಆರಂಭವಾದಾಗ ನಾವು ನಿಲುವಳಿ ಸೂಚನೆಯಡಿ ಈ ವಿಷಯವನ್ನು ಚರ್ಚೆಗೆ ಅವಕಾಶ ಕೋರಿದೆವು. ಆದರೆ, ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ 30 ಸೆಕೆಂಡ್ ಮಾತನಾಡಲು ಅವಕಾಶ ನೀಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ವಿರೋಧ ಪಕ್ಷದ ನಾಯಕರಿಗೆ ಸದನದಲ್ಲಿ ಮಾತನಾಡಲು ಅವಕಾಶವಿಲ್ಲವೇ? ಸ್ಪೀಕರ್ ಮಾತನಾಡಲು ಅವಕಾಶ ನೀಡಿ, ಮೈಕ್ ಆಫ್ ಮಾಡಿದರು. ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಸಂಸತ್ತಿನಲ್ಲಿ ಜನರ ಸಮಸ್ಯೆಗಳನ್ನು ಚರ್ಚೆ ಮಾಡಲು ಈ ಸರಕಾರ ಭಯ ಪಡುತ್ತಿದೆ. ಪ್ರಧಾನಿ ಸದನಕ್ಕೆ ಬರಲ್ಲ, ಆದರೆ, ಮಧ್ಯರಾತ್ರಿ ಡ್ರಾಮ ಮಾಡುತ್ತಾರೆ. ಸದನಕ್ಕೆ ಬಂದು ಜನರಿಗೆ ಉತ್ತರ ನೀಡಲಿ ಎಂದು ವೇಣುಗೋಪಾಲ್ ಆಗ್ರಹಿಸಿದರು.

ಧರ್ಮೇಂದ್ರ ಪ್ರಧಾನ್ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ಕಿತ್ತೊಗೆಯಬೇಕು, ವಿದ್ಯಾರ್ಥಿಗಳ ಮೇಲೆ ಆಗಿರುವ ಪೊಲೀಸ್ ದೌರ್ಜನ್ಯದ ಕುರಿತು ತನಿಖೆ ನಡೆಯಬೇಕು, ವಿದ್ಯಾರ್ಥಿಗಳ ಮೇಲೆ ಹಾಕಿರುವ ಪ್ರಕರಣಗಳನ್ನು ಹಿಂಪಡೆಯಬೇಕು, ನೀಟ್ ಅಕ್ರಮದಿಂದ ಮೃತಪಟ್ಟಿರುವ ವಿದ್ಯಾರ್ಥಿಗಳ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂಬುದು ನಮ್ಮ ಸ್ಪಷ್ಟ ಬೇಡಿಕೆಯಾಗಿದೆ ಎಂದು ಅವರು ತಿಳಿಸಿದರು.

ಕೇಂದ್ರ ಸರಕಾರವು ಧರ್ಮೇಂದ್ರ ಪ್ರಧಾನ್ ವಿರುದ್ಧ ಕ್ರಮ ಕೈಗೊಳ್ಳಲು ಭಯ ಪಡುತ್ತಿರುವುದು ನೋಡಿದರೆ, ಏನೋ ಮಹತ್ವದ ವಿಚಾರವನ್ನು ಮುಚ್ಚಿಡಲು ಅವರು ಪ್ರಯತ್ನಿಸುತ್ತಿರುವುದು ಸ್ಪಷ್ಟ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ವೇಣುಗೋಪಾಲ್ ಪ್ರತಿಕ್ರಿಯಿಸಿದರು.

ಪೋಷಕರು ತಮ್ಮ ಮಕ್ಕಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ವಿದ್ಯಾರ್ಥಿಗಳಿಗೆ ಅನುಕೂಲ, ಯಾವ ರೀತಿಯ ಪ್ರಶ್ನೆಗಳು ಬರುತ್ತವೆ, ಅವುಗಳಿಗೆ ಯಾವ ಉತ್ತರ ಬರೆಯಬೇಕು ಎಂಬುದು ಗೊತ್ತಾಗುತ್ತದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ನೀಡಿರುವ ಹೇಳಿಕೆ ನಾಚಿಕೆಗೇಡಿನ ಸಂಗತಿ ಎಂದು ಅವರು ಕಿಡಿಗಾರಿದರು.

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಕೇಂದ್ರ ಸರಕಾರ ಉತ್ತರದಾಯಿ ಆಗಿರಬೇಕಿತ್ತು. ಆದರೆ, ತಮಗಾಗಿರುವ ಅನ್ಯಾಯವನ್ನು ಪ್ರಶ್ನಿಸಿದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಮಾಡಿ, ಅವರ ಭವಿಷ್ಯವನ್ನು ಹಾಳುತ್ತಿದೆ. ಅಯೋಧ್ಯೆಯ ರಾಮ ಮಂದಿರದಲ್ಲಿ ದೇಣಿಗೆ, ಚಿನ್ನ ಲೂಟಿ ಆಯಿತು. ರಾಮ ಮಂದಿರ ಟ್ರಸ್ಟ್ ಪ್ರಧಾನಿಯ ಮೇಲುಸ್ತುವಾರಿಯಲ್ಲಿ ರಚನೆಯಾದದ್ದು, ಆದರೆ ಲೂಟಿ ಬಗ್ಗೆ ಪ್ರಧಾನಿ ಮೌನವಾಗಿದ್ದಾರೆ ಎಂದು ಅವರು ಹೇಳಿದರು.

ಸಂಪುಟ ವಿಸ್ತರಣೆ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ವೇಣುಗೋಪಾಲ್, ಸಚಿವ ಸಂಪುಟ ವಿಸ್ತರಣೆಯ ವಿಚಾರದ ಕುರಿತು ಚರ್ಚೆ ಪ್ರಗತಿಯಲ್ಲಿದ್ದು, ಯಾವುದೆ ಕ್ಷಣದಲ್ಲಿ ಸಂಪುಟ ವಿಸ್ತರಣೆ ಆಗಬಹುದು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News