ನೀಟ್ ಅರ್ಹ ಅಭ್ಯರ್ಥಿಗಳಿಗೆ ಯುಜಿಸಿಇಟಿ ಅರ್ಜಿ ಸಲ್ಲಿಕೆ ದಿನಾಂಕ ಜು.30ರ ವರೆಗೆ ವಿಸ್ತರಣೆ : ಕೆಇಎ
ಬೆಂಗಳೂರು : ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಹೊಸದಾಗಿ ಯುಜಿಸಿಇಟಿ ಅರ್ಜಿಗಳನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ಜುಲೈ 30ರವರೆಗೆ ವಿಸ್ತರಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಶುಕ್ರವಾರ ಪ್ರಕಟನೆ ನೀಡಿದೆ. ಈ ಮೂಲಕ ಅರ್ಹ ವಿದ್ಯಾರ್ಥಿಗಳಿಗೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಲು ಹೆಚ್ಚುವರಿ ಸಮಯ ಸಿಕ್ಕಂತಾಗಿದೆ.
ಈ ಮೊದಲಿನ ಪ್ರಕಟನೆಯಂತೆ ಯುಜಿಸಿಇಟಿ ಅರ್ಜಿಗಳನ್ನು ಸಲ್ಲಿಸಲು ಜುಲೈ 24ಕ್ಕೆ ಕೊನೆಯ ದಿನವಾಗಿತ್ತು. ಆದರೆ ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರು ದಿನಾಂಕ ವಿಸ್ತರಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸುವ ದಿನಾಂಕವನ್ನು ಜುಲೈ 30ರವರೆಗೆ ವಿಸ್ತರಿಸಲಾಗಿದೆ ಎಂದು ಕೆಇಎ ತಿಳಿಸಿದೆ.
ನೀಟ್ ಫಲಿತಾಂಶದ ಡೇಟಾವನ್ನು ಕೆಇಎ ಇನ್ನೂ ಸ್ವೀಕರಿಸಿಲ್ಲ. ಡೇಟಾ ಲಭ್ಯವಾದ ನಂತರ, ಅಭ್ಯರ್ಥಿಗಳು ತಮ್ಮ ನೀಟ್ ರೋಲ್ ಸಂಖ್ಯೆಯನ್ನು ನಮೂದಿಸಲು ಅನುಮತಿಸಲಾಗುತ್ತದೆ. ಅಲ್ಲಿಯವರೆಗೆ, ಅಭ್ಯರ್ಥಿಗಳು ಮತ್ತು ಪೋಷಕರು ಚಿಂತಿಸಬೇಕಾಗಿಲ್ಲ. ನೀಟ್ ರೋಲ್ ಸಂಖ್ಯೆಯನ್ನು ಲಿಂಕ್ ಮಾಡಿದ ನಂತರ ದಾಖಲೆ ಪರಿಶೀಲನೆ ಮಾಡಲಾಗುವುದು ಎಂದು ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.