ಮೇಕೆದಾಟು ಅಣೆಕಟ್ಟು ಯೋಜನೆ | ತಮಿಳುನಾಡು ಸಿಎಂ ವಿಜಯ್ ಆ.3ಕ್ಕೆ ರಾಜ್ಯಕ್ಕೆ ಭೇಟಿ

Update: 2026-07-24 21:38 IST

ವಿಜಯ್‌/ಡಿ.ಕೆ.ಶಿವಕುಮಾರ್‌

ಬೆಂಗಳೂರು : ಮೇಕೆದಾಟು ಅಣೆಕಟ್ಟು ಯೋಜನೆ ಸಂಬಂಧ ಚರ್ಚಿಸಲು ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಅವರು ಆಗಸ್ಟ್ 3ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಗೊತ್ತಾಗಿದೆ.

ಶುಕ್ರವಾರ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ತಮಿಳುನಾಡಿನ ಕೃಷಿ ಸಚಿವ ಆರ್.ವಿನೋದ್, ‘ಸಿಎಂ ವಿಜಯ್ ಅವರಿಗೆ ಕರ್ನಾಟಕ ರಾಜ್ಯ ಸರಕಾರವು ನೀಡಿದ್ದ ಅಧಿಕೃತ ಆಹ್ವಾನ ನಮಗೆ ತಲುಪಿದ್ದು, ರಾಜ್ಯದ ಹಿತವನ್ನು ಕಾಪಾಡಲು ಶೀಘ್ರವೇ ಸಿಎಂ ವಿಜಯ್ ಅವರು ಬೆಂಗಳೂರಿಗೆ ತೆರಳಲಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಕಳೆದ ವಾರ ಸಿಎಂ ಜೊಸೇಫ್ ವಿಜಯ್ ಅವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದು ಭೇಟಿಗೆ ಸಮಯ ನೀಡುವಂತೆ ಮನವಿ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್ ಆ.3ರಂದು ಆಗಮಿಸುವಂತೆ ಸಲಹೆ ನೀಡಿದ್ದರು. ಇದೇ ವೇಳೆ ವಿಜಯ್ ಅಭಿನಯದ ‘ಜನ ನಾಯಗನ್’ ಚಿತ್ರ ಬಿಡುಗಡೆಯಾಗಿದೆ.

ವಿಜಯ್ ಅವರು ಚಿತ್ರದ ಪ್ರಚಾರದ ಉದ್ದೇಶಕ್ಕಾಗಿ ಬೆಂಗಳೂರಿಗೆ ಭೇಟಿ ನೀಡಬಹುದು, ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ವಿಜಯ್ ಅವರ ಕಚೇರಿಯಿಂದ ಕರ್ನಾಟಕ ರಾಜ್ಯದ ಭೇಟಿಯ ಬಗ್ಗೆ ಇದೀಗ ಅಧಿಕೃತವಾದ ಮಾಹಿತಿ ಬಂದಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News