ಪುತ್ರಿಗಾಗಿ ಮಂತ್ರಿ ಸ್ಥಾನ ತ್ಯಾಗ ವದಂತಿ: ಸತ್ಯಕ್ಕೆ ದೂರ ಎಂದ ಸಚಿವ ಕೆ.ಎಚ್.ಮುನಿಯಪ್ಪರ ಮಾಧ್ಯಮ ಸಂಯೋಜಕ

Update: 2026-08-07 22:25 IST

ಸಚಿವ ಕೆ.ಎಚ್.ಮುನಿಯಪ್ಪ

ಬೆಂಗಳೂರು: ‘ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ತಮ್ಮ ಪುತ್ರಿ ರೂಪಕಲಾ ಶಶಿಧರ್ ಅವರಿಗಾಗಿ ಸಚಿವ ಸ್ಥಾನವನ್ನು ತ್ಯಾಗ ಮಾಡಲಿದ್ದಾರೆ’ ಎಂಬ ಸುದ್ದಿಗಳು ಕೆಲವು ದೃಶ್ಯ ಮಾಧ್ಯಮಗಳು ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ ಎಂದು ಸಚಿವರ ಮಾಧ್ಯಮ ಸಂಯೋಜಕ ರವಿ ಎನ್. ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ದಲಿತ ಎಡ ಸಮುದಾಯದ ಹಿರಿಯ ಹಾಗೂ ಮುಂಚೂಣಿ ನಾಯಕರಾದ ಮುನಿಯಪ್ಪ ಕಳೆದ 50 ವರ್ಷಗಳ ಸುದೀರ್ಘ ಕಾಲದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ, ನಾಯಕರಾಗಿ ಪಕ್ಷವನ್ನು ಬಲವರ್ಧನೆಗೊಳಿಸುತ್ತಾ, ಇಂದಿರಾ ಗಾಂಧಿಯವರ ಕಾಲದಿಂದ ಇಲ್ಲಿಯವರೆಗೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರಾಗಿ ಪಕ್ಷವನ್ನು ಕಟ್ಟತ್ತಾ ಇಲ್ಲಿಯವರೆಗೂ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಕುಟುಂಬ ಸಮೇತ ನಿಷ್ಠೆಯನ್ನು ತೋರಿ, ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಕೋಲಾರ ಲೋಕಸಭಾ ಕ್ಷೇತ್ರದಿಂದ ಸತತವಾಗಿ 7 ಬಾರಿ ಸಂಸದರಾಗಿ, ಕೇಂದ್ರದಲ್ಲಿ ಮೂರು ಬಾರಿ ಸಚಿವರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಶಂಕರಾನಂದ ಹಾಗೂ ಜಾಫರ್ ಶರೀಫ್ ನಂತರ ಕೆ.ಎಚ್.ಮುನಿಯಪ್ಪ ದಾಖಲೆ ಜಯಗಳಿಸಿದ್ದು ಐತಿಹಾಸಿಕವಾಗಿದೆ ಎಂದು ರವಿ ಹೇಳಿದ್ದಾರೆ.

ದಕ್ಷಿಣ ಭಾರತದ ಬಾಬು ಜಗಜೀವನರಾಮ್ ಎಂದೇ ಖ್ಯಾತರಾಗಿರುವ ಮುನಿಯಪ್ಪ ಪ್ರಸ್ತುತ ಆಹಾರ ಇಲಾಖೆಯನ್ನು ಉತ್ತಮವಾಗಿ ಮುನ್ನೆಡೆಸುತ್ತಿದ್ದು, ಸಮಾಜ ಕಲ್ಯಾಣ ಇಲಾಖೆ ಖಾತೆಯೊಂದಿಗೆ ಪರಿಶಿಷ್ಟ ಜಾತಿಯ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಖಾತೆ ಬದಲಾವಣೆಗಾಗಿ ರಾಹುಲ್ ಗಾಂಧಿಗೆ ಬೇಡಿಕೆ ಇಟ್ಟಿದ್ದು, ಸಕಾರಾತ್ಮಕ ಸ್ಪಂದನೆಯೊಂದಿಗೆ ಈ ಖಾತೆ ನೀಡುವುದು ಬಹುತೇಕ ಖಚಿತವಾಗಿದೆ. ಮಾಧ್ಯಮಗಳಲ್ಲಿ ಇತ್ತಿಚೀಗೆ ಹರಿದಾಡುತ್ತಿರುವ ಸುದ್ದಿಗಳು ನೈಜಕ್ಕೆ ದೂರವಾಗಿದ್ದು, ಅವುಗಳನ್ನು ಪರಿಗಣಿಸಿದಿರಲು ಈ ಮೂಲಕ ಕೋರುತ್ತೇನೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News