ಈ ದೇಶಕ್ಕೆ ಜಾತಿ ಗಣತಿ ಅಗತ್ಯತೆ ಇದೆ: ಡಿ.ಕೆ.ಶಿವಕುಮಾರ್

ರಾಷ್ಟ್ರೀಯ ಒಬಿಸಿ ಮಹಾ ಸಂಘದ 11ನೆ ರಾಷ್ಟ್ರೀಯ ಮಹಾ ಸಮಾವೇಶ

Update: 2026-08-07 22:41 IST

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (X/@DKShivakumar)

ಬೆಂಗಳೂರು: ಈ ದೇಶದಲ್ಲಿ ಜಾತಿ ಗಣತಿ ಅಗತ್ಯವಾಗಿದ್ದು, ಕೇಂದ್ರ ಸರಕಾರ ಮನೆ-ಮನೆ ಜನಗಣತಿಗೆ ಮುಂದಾಗಿದೆ. ಜಾತಿ ಗಣತಿ ಮೂಲಕ ಅಂತರವನ್ನು ಕಡಿಮೆ ಮಾಡಬಹುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಶುಕ್ರವಾರ ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ರಾಷ್ಟ್ರೀಯ ಒಬಿಸಿ ಮಹಾ ಸಂಘದ 11ನೆ ರಾಷ್ಟ್ರೀಯ ಮಹಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಪಕ್ಷವು ಮೀಸಲಾತಿ ಕಲ್ಪಿಸಿದೆ. ಸಮಾಜದ ಎಲ್ಲ ವರ್ಗದ ಜನರು ನಾಯಕರಾಗಬೇಕು ಎಂಬುದು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಬಯಕೆಯಾಗಿತ್ತು. ಹೀಗಾಗಿ, ಈ ದೇಶದಲ್ಲಿ ಜಾತಿ ಗಣತಿ ಅಗತ್ಯವಾಗಿದ್ದು, ಕೇಂದ್ರ ಸರಕಾರ ಮನೆ-ಮನೆ ಜನಗಣತಿಗೆ ಮುಂದಾಗಿದೆ. ಜಾತಿಗಣತಿ ಮೂಲಕ ಅಂತರವನ್ನು ಕಡಿಮೆ ಮಾಡಬೇಕು ಎಂದು ಕೋರಿದರು.

ನಾವು ಸರ್ವರಿಗೂ ಸಮಬಾಳು-ಸಮಪಾಲು ತತ್ವದ ಮೇಲೆ ನಡೆಯುತ್ತಿದ್ದೇವೆ. ಬ್ರಿಟಿಷರ ಕಾಲದಲ್ಲೇ ಸಮಾನತೆಯ ಚರ್ಚೆ ಇತ್ತು. ಹೀಗಾಗಿ 1931ರ ಸಮಯದಲ್ಲಿ ಜಾತಿ ಗಣತಿ ಮಾಡಲಾಗಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಈ ಜಾತಿ ಗಣತಿಯನ್ನು ನಡೆಸಲು ಬದ್ಧರಾಗಿದ್ದಾರೆ. ಆ ಮೂಲಕ ಸಮಾಜದ ಎಲ್ಲ ವರ್ಗದವರಿಗೆ ಸಮಾನ ಅವಕಾಶ ನೀಡಬೇಕು. ಇಂದು ಪ್ರತಿ ಸಮುದಾಯಕ್ಕೂ ಸಂವಿಧಾನಿಕ ಹಕ್ಕು ನೀಡಲಾಗಿದೆ. ಕರ್ನಾಟಕದಲ್ಲಿ ಪ್ರತ್ಯೇಕ ಹಿಂದುಳಿದ ವರ್ಗಗಳ ಇಲಾಖೆ ಇದೆ. ಇದಕ್ಕಾಗಿ ಅನುದಾನ ನೀಡಲಾಗುವುದು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಮಾತನಾಡಿ, 1972ರಲ್ಲಿ ಎಲ್.ಜಿ. ಹಾವನೂರು ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕದ ಮೊದಲ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಲಾಯಿತು. ಮಾಜಿ ಸಿಎಂ ದೇವರಾಜ ಅರಸು ಅವರು ಸಾಮಾಜಿಕ ನಾಯಕತ್ವವನ್ನು ಬೆಳೆಸುವ ಮೂಲಕ ಅವರು ಕರ್ನಾಟಕದ ಸಾಮಾಜಿಕ ರಚನೆಯನ್ನೆ ಬದಲಿಸಿದರು. ಹಾವನೂರು ವರದಿ ಕಾಗದದ ದಾಖಲೆಯಾಗಿರಲಿಲ್ಲ; ಅದು ಕರ್ನಾಟಕದಲ್ಲಿ ಮೌನ ಸಾಮಾಜಿಕ ಕ್ರಾಂತಿಗೆ ಮಾರ್ಗಸೂಚಿಯಾಗಿತ್ತು ಎಂದು ನುಡಿದರು.

ನಾನು 1990ರಿಂದ ರಾಜ್ಯಸಭೆಯ ಸದಸ್ಯನಾಗಿ ವಿವಿಧ ಅವಧಿಗಳಲ್ಲಿ ಸೇವೆ ಸಲ್ಲಿಸಿದ್ದೇನೆ. 1993ರಲ್ಲಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ರೂಪುಗೊಳ್ಳುವ ಸಂದರ್ಭದ ಚರ್ಚೆಗೂ ನಾನು ಸಾಕ್ಷಿಯಾಗಿದ್ದೆ. 2017ರ ಜು.31ರಂದು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ 123ನೆ ಸಂವಿಧಾನ ತಿದ್ದುಪಡಿ ಮಸೂದೆಯ ಚರ್ಚೆಯನ್ನು ನಾನು ಆರಂಭಿಸಿ ವಿಸ್ತೃತವಾಗಿ ಮಾತನಾಡಿದ್ದೆ. 2018ರ ಆ.6ರಂದು ಅದೇ ಮಸೂದೆ ಮತ್ತೆ ಸದನಕ್ಕೆ ಬಂದಾಗಲೂ ಒಬಿಸಿ ಜನಗಣತಿ, ರಾಜ್ಯಗಳ ಅಧಿಕಾರ, ಮಹಿಳೆಯರು ಮತ್ತು ಸರಕಾರಿ ಉದ್ಯೋಗಗಳಲ್ಲಿನ ಕೊರತೆ ಹಾಗೂ ರಾಜಕೀಯ ಅಧಿಕಾರದ ಬಗ್ಗೆ ಮಾತನಾಡಿದ್ದೆ. ಆಗ ನಾನು ಒಂದು ನೋವಿನ ಸಂಗತಿಯನ್ನು ಹೇಳಿದ್ದೆ ಎಂದು ಅವರು ನೆನೆಪು ಮಾಡಿಕೊಂಡರು.

ಮೀಸಲಾತಿಯಿಂದ ಅಭಿವೃದ್ದಿಗೆ ಹಿನ್ನಡೆಯಾಗುತ್ತದೆ ಎಂದು ಪಟ್ಟಭದ್ರಹಿತಾಸಕ್ತಿಗಳು ಅಪಪ್ರಚಾರ ನಡೆಸುತ್ತಾರೆ. ತಮಿಳುನಾಡಿನಲ್ಲಿ ಶೇ.69ರಷ್ಟು ಮೀಸಲಾತಿ ಇದೆ, ಇಡೀ ದೇಶದಲ್ಲಿ ತಮಿಳುನಾಡು ಮಾದರಿ ರಾಜ್ಯವಾಗಿದೆ. ಅದೇ ಉತ್ತರ ಪ್ರದೇಶ, ರಾಜಸ್ಥಾನ, ಸೇರಿದಂತೆ ಉತ್ತರ ಭಾರತದ ರಾಜ್ಯಗಳು ಮೀಸಲಾತಿಯನ್ನು ಕಡಿಮೆ ನೀಡುತ್ತಿದೆ ಹಾಗಾದರೆ ಅಭಿವೃದ್ದಿಯಲ್ಲಿ ಯಾಕೆ ಹಿಂದೆ ಬಿದ್ದಿದೆ. ದಕ್ಷಿಣ ಭಾರತದ ರಾಜ್ಯಗಳು ಮೀಸಲಾತಿಯನ್ನು ಶೇಖಡ ಐವತ್ತರಷ್ಟು ನೀಡಿಯೂ ದೇಶಕ್ಕೆ ಮಾದರಿ ರಾಜ್ಯಗಳಾಗಿದೆ. ನಾವು ಮೀಸಲಾತಿ ನೀಡಿದ ಕಾರಣಕ್ಕಾಗಿಯೇ ಮುಂದೆ ಬಂದಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಪ್ರತಿಪಾದಿಸಿದರು.

ಸಮಾವೇಶದಲ್ಲಿ ರಾಷ್ಟ್ರೀಯ ಒಬಿಸಿ ಮಹಾಸಂಘದ ಅಧ್ಯಕ್ಷ ಡಾ.ಬಬನ್‍ರಾವ್ ತಯ್ವಾಡೆ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ, ಕರ್ನಾಟಕ ರಾಷ್ಟ್ರೀಯ ಒಬಿಸಿ ಮಹಾಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಕುರ್ರಾ ಸೇರಿದಂತೆ ಪ್ರಮುಖರಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News