ಗೃಹಲಕ್ಷ್ಮಿ ಯೋಜನೆಗೆ 2,443 ಕೋಟಿ ರೂ.ಹಣ ಬಿಡುಗಡೆ: ದಿನೇಶ್ ಗೂಳಿಗೌಡ
‘ಪ್ರತಿ ಮನೆ ಯಜಮಾನಿಯರಿಗೆ 64 ಸಾವಿರ ರೂ.ಸಂದಾಯ’
ಬೆಂಗಳೂರು: ಗೃಹಲಕ್ಷ್ಮಿ ಯೋಜನೆಗೆ 2,443ಕೋಟಿ ರೂ.ಹಣವನ್ನು ಸಿಎಂ ಡಿ.ಕೆ.ಶಿವಕುಮಾರ್ ಬಿಡುಗಡೆ ಮಾಡಿದ್ದು, ಇನ್ನೂ ಮೂರು-ನಾಲ್ಕು ದಿನದಲ್ಲಿ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ಹಣ ಜಮೆಯಾಗಲಿದೆ. ಮನೆಯ ಯಜಮಾನಿಯರಿಗೆ ತಲಾ 64ಸಾವಿರ ರೂ.ಹಣವನ್ನು ನಮ್ಮ ಸರಕಾರ ತಲುಪಿಸಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
ಶುಕ್ರವಾರ ಜಿಬಿಎ ವ್ಯಾಪ್ತಿಯ ಯಲಹಂಕ, ಬ್ಯಾಟರಾಯನಪುರ, ಹೆಬ್ಬಾಳ, ಸರ್ವಜ್ಞನಗರ ಕ್ಷೇತ್ರಗಳ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆ ಜೊತೆಗೆ, ಗೃಹಜ್ಯೋತಿ ಯೋಜನೆಯಡಿ 200ಯುನಿಟ್ ವರೆಗೆ ಉಚಿತ ನೀಡಲಾಗುತ್ತಿದೆ. ಅನ್ನಭಾಗ್ಯ, ಶಕ್ತಿ, ಯುವನಿಧಿ ಯೋಜನೆ ಸೇರಿದಂತೆ ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಸರಕಾರ 1 ಲಕ್ಷ 46 ಸಾವಿರದ 443 ಕೋಟಿ ರೂ.ಹಣವನ್ನು ಖರ್ಚು ಮಾಡಿದೆ. ಇದರಿಂದ ಪ್ರತಿಕುಟುಂಬಕ್ಕೆ ಸರಾಸರಿ 5 ರಿಂದ 6 ಸಾವಿರ ರೂ.ಹಣ ಉಳಿತಾಯವಾಗುತ್ತಿದೆ ಎಂದರು.
ಗ್ಯಾರಂಟಿಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು, ದುರುಪಯೋಗ ಆಗುವುದನ್ನು ತಡೆಯುವ ಉದ್ದೇಶದಿಂದ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆ ಪರಿಷ್ಕರಣೆ ಮಾಡಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿತರಲ್ಲಿ 1,95,224 ಫಲಾನುಭವಿಗಳು ಮೃತಪಟ್ಟಿದ್ದು, ಅವರ ಖಾತೆಗೆ ಸುಮಾರು 115ಕೋಟಿ ರೂ.ಹಣ ಸಂದಾಯವಾಗಿದೆ. ಗೃಹಜ್ಯೋತಿಯಡಿ ನೀಡಲಾಗುವ ವಿದ್ಯುತ್ ಅನ್ನು ವಾಣಿಜ್ಯ ಬಳಕೆಗೆ ಬಳಸಿಕೊಳ್ಳುತ್ತಿರುವುದನ್ನು ತಡೆಯುವ ಉದ್ದೇಶದಿಂದ ಯೋಜನೆ ಪರಿಷ್ಕರಣೆ ನಡೆಸಲಾಗುತ್ತಿದೆ ಎಂದರು.
1.24ಕೋಟಿ ಪಡಿತರ ಚೀಟಿದಾರರಿಗೆ ಸರಕಾರ ಉಚಿತವಾಗಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಈ ಕುರಿತು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಬೇಕು. ವಾರ್ಡ್ ಮಟ್ಟದಲ್ಲಿ ಫಲಾನುಭವಿಗಳ ಸಮಾವೇಶ, ಗ್ಯಾರಂಟಿ ಉತ್ಸವಗಳನ್ನು ನಡೆಸಬೇಕು. ಮೃತರ ಖಾತೆಗೆ ಹಣ ಸಂದಾಯ ಆಗುತ್ತಿರುವುದನ್ನು ತಡೆಯಲು ಮೃತ ಫಲಾನುಭವಿಗಳ ಹೆಸರನ್ನು 15ದಿನದಲ್ಲಿ ಪಟ್ಟಿಯಿಂದ ಕೈಬಿಡುವಂತೆ ಮಾರ್ಗಸೂಚಿ ರಚನೆ ಮಾಡಲಾಗುವುದು.
ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲಿಗೆ ಇಂದಿರಾ ಕಿಟ್ ವಿತರಣೆ ಮಾಡುವ ಕಾರ್ಯ ಅಂತಿಮ ಹಂತದಲ್ಲಿ ಇದೆ. ನ್ಯಾಯಬೆಲೆ ಅಂಗಡಿಗಳ ಮಾಸಿಕ ಸಭೆ ನಡೆಸಬೇಕು. ವೇಳಾಪಟ್ಟಿ ಪ್ರಕಟಣೆ ಮಾಡಬೇಕು. ದಿನಪೂರ್ತಿ ತೆರೆಯುವಂತೆ ರಾಜ್ಯದ 22ಸಾವಿರ ನ್ಯಾಯಬೆಲೆ ಅಂಗಡಿಗಳಿಗೂ ಸರಕಾರ ಆದೇಶ ಹೊರಡಿಸಲಿದೆ ಎಂದು ಹೇಳಿದರು.
ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಬಿಎ ಅಧ್ಯಕ್ಷ ಕೃಷ್ಣಪ್ಪ, ಬೆಂಗಳೂರು ಉತ್ತರ ವಿಭಾಗದ ಅಧ್ಯಕ್ಷೆ ಲಾವಣ್ಯ ನರಸಿಂಹಮೂರ್ತಿ ಹಾಗೂ ಯಲಹಂಕ, ಹೆಬ್ಬಾಳ, ಬ್ಯಾಟರಾಯನಪುರ ಮತ್ತು ಸರ್ವಜ್ಞನಗರ ಕ್ಷೇತ್ರಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
ಆಗಮಿಸದವರಿಗೆ ನೋಟಿಸ್:
‘ಗ್ಯಾರಂಟಿಗಳ ಅನುಷ್ಠಾನ ಕುರಿತು ಪ್ರತಿ ತಿಂಗಳು ಸಭೆ ನಡೆಸಿ ವರದಿ ನೀಡಬೇಕು. ಸಭೆಗೆ ಆಗಮಿಸದ ಅಧಿಕಾರಿಗಳು, ಸಮಿತಿ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಸಿಎಂ ಗಮನಕ್ಕೂ ತರಲಾಗುವುದು. ಗೃಹಜ್ಯೋತಿಯಡಿ ಅಪಾರ್ಟ್‍ಮೆಂಟ್ ನಿವಾಸಿಗಳು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಸರ್ವೆಗೆ ತೆರಳಿದರೆ ಅಪಾರ್ಟ್‍ಮೆಂಟ್ ಸಂಘದವರು ಸಮಿತಿ ಸದಸ್ಯರಿಗೆ ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಬಂದಿವೆ. ಈ ಕುರಿತು ಮಾರ್ಗಸೂಚಿ ರಚಿಸುವಂತೆ ಸಿಎಂಗೆ ಮನವಿ ಮಾಡಲಾಗುವುದು’
-ದಿನೇಶ್ ಗೂಳಿಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ