×
Ad

ಆದಿವಾಸಿಗಳ ಕುರಿತು ಸುದ್ದಿ ಮಾಡಲು ಬಂದ ಕೇರಳ ಮೂಲದ ಪತ್ರಕರ್ತನನ್ನು ವಶಕ್ಕೆ ಪಡೆದ ಕೊಡಗು ಪೊಲೀಸರು

Update: 2025-01-16 12:27 IST

Photo :  instagram.com

ವಿರಾಜಪೇಟೆ : ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಪೊಲೀಸರು ಕೇರಳ ಮೂಲದ ಪತ್ರಕರ್ತನನ್ನು ಯಾವುದೇ ಕಾನೂನು ಪ್ರಕ್ರಿಯೆ ಪಾಲಿಸದೇ ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿರುವ ಆರೋಪ ಕೇಳಿಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ಬುಧವಾರ ಸಂಜೆ ಕೇರಳದ ಪತ್ರಕರ್ತ ರಿಜಾಸ್ ಈ ಗಂಭೀರ ಆರೋಪ ಮಾಡಿದ್ದಾರೆ.

ನಾನು ಆದಿವಾಸಿಗಳೊಂದಿಗೆ ಅವರ ವಾಸಸ್ಥಳಕ್ಕೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಖಾಸಗಿ ಕಾರಿನಲ್ಲಿ ಬಂದ ಮೂವರು ಪೊಲೀಸ್ ಅಧಿಕಾರಿಗಳು ನಿರ್ಜನ ಪ್ರದೇಶದಲ್ಲಿ ಬಸ್ ನಿಲ್ಲಿಸಿ, ಯಾವುದೇ ವಾರಂಟ್ ತೋರಿಸದೆ ತಮ್ಮೊಂದಿಗೆ ಬರಲು ಹೇಳಿದರು ಎಂದು ರಿಜಾಸ್ ಆರೋಪಿಸಿದ್ದಾರೆ.

ಕೆಲವು ನಿಮಿಷಗಳ ವಾಗ್ವಾದದ ನಂತರ ಪೊಲೀಸರು ತನ್ನನ್ನು ಕಾರಿನೊಳಗೆ ಕೂರಿಸಿ ನಂತರ ವಿಚಾರಣೆಗಾಗಿ ವಿರಾಜಪೇಟೆ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು ಎಂದು ಪತ್ರಕರ್ತ ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ತಿಳಿಸಿದ್ದಾರೆ.

ವಿಚಾರಣೆ ಮುಗಿಸಿದ ಪೊಲೀಸರು ನಂತರ ಅವರನ್ನು ಬಿಡುಗಡೆ ಮಾಡಿದ್ದಾರೆ.

ಬಿಡುಗಡೆ ನಂತರ ಇನ್ಸ್ಟಾ ಗ್ರಾಂ ಸ್ಟೋರಿ ಹಾಕಿರುವ ಪತ್ರಕರ್ತ "ಈಗಷ್ಟೇ ನಾನು ಠಾಣೆಯಿಂದ ಹೊರಬಂದೆ. ಆದಿವಾಸಿಗಳು ಠಾಣೆಗೆ ಬಂದರು. ಸರ್ಕಲ್ ಇನ್ಸ್‌ಪೆಕ್ಟರ್ ಅನೂಪ್ ಇತರ 4 ಅಧಿಕಾರಿಗಳ ಸಮ್ಮುಖದಲ್ಲಿ ನನ್ನ ವಿಚಾರಣೆ ನಡೆಸಿದರು. ನಿನ್ನೆ ಸಂಜೆಯಿಂದ, ಕೊಚ್ಚಿಯಿಂದ ಅರ್ಬನ್ ನಕ್ಸಲ್ ಕರ್ನಾಟಕಕ್ಕೆ ಸಂಘಟಿಸಲು ಬಂದಿದ್ದಾನೆ ಎಂದು ಮೇಲಧಿಕಾರಿಗಳು ಮತ್ತು ಮಾಹಿತಿದಾರರಿಂದ ನನಗೆ ಅನೇಕ ಕರೆಗಳು ಬಂದಿವೆ ಎಂದು ಅವರು ಹೇಳಿದರು. ವಿಚಾರಣೆಯ ಸಮಯದಲ್ಲಿ, ಪ್ರಬಲ ಜಾತಿಯ ಉದ್ಯೋಗದಾತರಿಂದ ಆದಿವಾಸಿ ಕಾರ್ಮಿಕರು ಎದುರಿಸುತ್ತಿರುವ ಹಿಂಸಾಚಾರದ ಬಗ್ಗೆ ವರದಿ ಮಾಡಲು ನಾನು ಇಲ್ಲಿದ್ದೇನೆ ಎಂದು ನಾನು ಅವರಿಗೆ ಹೇಳಿದೆ. ಕೇರಳದ ಯಾರಾದರೂ ಇಲ್ಲಿ ಏಕೆ ಇದ್ದಾರೆ ಎಂದು ಕೇಳಿದಾಗ, ಮುಖ್ಯವಾಹಿನಿಯ ಮಾಧ್ಯಮಗಳು ಈ ವಿಷಯದ ಬಗ್ಗೆ ವರದಿ ಮಾಡದ ಕಾರಣ, ನಾನು ಸ್ವಯಂಪ್ರೇರಿತವಾಗಿ ಬಂದು ಅದರ ಬಗ್ಗೆ ವರದಿ ಮಾಡಿದ್ದೇನೆ ಎಂದು ನಾನು ಉತ್ತರಿಸಿದೆ. ಆದಿವಾಸಿಗಳಿಗೆ ವಿಳಂಬವಾದ ಸರ್ಕಾರಿ ಪರಿಹಾರದ ಕುರಿತು ನಮ್ಮ ಮಾತುಕತೆ ಸಮಯದಲ್ಲಿ, "ನ್ಯಾಯ ವಿಳಂಬವಾದರೆ ನ್ಯಾಯ ನಿರಾಕರಿಸಲಾಗಿದೆ" ಎಂದರ್ಥ ಎಂದು ನಾನು ಉಲ್ಲೇಖಿಸಿದೆ. ಇನ್ಸ್‌ಪೆಕ್ಟರ್ ಪ್ರತಿಕ್ರಿಯಿಸಿ ನಾನು ನಕ್ಸಲ್‌ನಂತೆ ಮಾತನಾಡುತ್ತಿದ್ದೇನೆ ಎಂದು ಹೇಳಿದರು. ದೆಹಲಿಯಲ್ಲಿ ನನ್ನ ವಿರುದ್ಧ ಒಂದು ಪ್ರಕರಣವಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ನನಗೆ ಈ ಪ್ರಕರಣ ವಿಷಯ ತಿಳಿದಿರಲಿಲ್ಲ ಎಂದು ಪತ್ರಕರ್ತ ರಿಜಾಸ್ ಇನ್ಸ್ಟಾಗ್ರಾಮ್ ಸ್ಟೋರಿ ಯಲ್ಲಿ ಹೇಳಿದ್ದಾರೆ.

ಟೈಮ್ಸ್ ನೌ ಪತ್ರಕರ್ತ ಸುರೇಶ್ ಬಿಲ್ಗೇರಿ, ನನ್ನನ್ನು ವಿರೋಧಿಸುತ್ತಿರುವ ಅನೇಕ ವ್ಯಕ್ತಿಗಳಲ್ಲಿ ಒಬ್ಬರು ಎಂದೂ ರಿಜಾಸ್ ಆರೋಪಿಸಿದ್ದಾರೆ.

ನನ್ನ ಸ್ವಾತಂತ್ರ್ಯವನ್ನು ಉಲ್ಲಂಘಿಸುವುದು ಸಮಸ್ಯೆಯಲ್ಲ. ಆದರೆ ಆದಿವಾಸಿ ಕಾರ್ಮಿಕರಿಗೆ ಹೊರಗಿನಿಂದ ಯಾರನ್ನೂ ಭೇಟಿಯಾಗಲು ಅವಕಾಶ ನೀಡದಿರುವುದು ಸಮಸ್ಯೆ ಎಂದು ರಿಜಾಸ್ ಇನ್ನೊಂದು ಸ್ಟೋರಿಯಲ್ಲಿ ಹೇಳಿದ್ದಾರೆ.

ಆದಿವಾಸಿ ಪಣಿ ಎರವರ ಪೊನ್ನಣ್ಣ ಕೊಲೆ ಪ್ರಕರಣ ಹಾಗೂ ಮೃತನ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಸೇರಿದಂತೆ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಆದಿವಾಸಿ ಸಂಘರ್ಷ ಸಮಿತಿ ಮೋರ್ಚಾದಿಂದ ಪಟ್ಟಣದ ತಾಲೂಕು ಕಚೇರಿ ಮುಂದೆ ಆತನ ಸಾವಿಗೆ ಕಾರಣವಾದ ಹಲಸಿನ ಮಿಡಿ ಇಟ್ಟು ಬುಧವಾರ ಪ್ರತಿಭಟನೆ ನಡೆಸಲಾಗಿತ್ತು. ಬಳಿಕ ತಹಸೀಲ್ದಾ‌ರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ಈ ಪ್ರತಿಭಟನೆಯನ್ನು ವರದಿ ಮಾಡಲು ರಿಜಾಸ್ ಕರ್ನಾಟಕಕ್ಕೆ ಬಂದಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ವಿರಾಜಪೇಟೆ ಸರ್ಕಲ್ ಇನ್ಸ್‌ಪೆಕ್ಟರ್ ಅನೂಪ್, “ಹೊರಗಿರನವರು ಯಾರು ಎಂಬುದನ್ನು ತಿಳಿದುಕೊಳ್ಳಲು ರಿಜಾಸ್ ಅವರನ್ನು ವಿಚಾರಣೆ ಮಾಡಿದ್ದು ಹೌದು. ಈ ಬಗ್ಗೆ ರಿಜಾಸ್ ಮಾಡಿರುವ ಆರೋಪಗಳು ಮತ್ತು ಅವರ ಸೋಷಿಯಲ್ ಮೀಡಿಯಾ ಪೋಸ್ಟ್ ಗಳ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ” ಎಂದು ವಾರ್ತಾಭಾರತಿಗೆ ಮಾಹಿತಿ ನೀಡಿದರು.

ಡಿ.27ರಂದು ಚೆಂಬೆಳ್ಳೂರುವಿನಲ್ಲಿ ಪೊರುಕೊಂಡ ಬನ್ನಿಪೂಣ್ಣಚ್ಚ ಅವರ ಲೈನ್ ಮನೆಯಲ್ಲಿದ್ದು, ತೋಟ ಕೆಲಸ ಮಾಡುತ್ತಿದ್ದ ಪಣಿ ಎರವರ ಪೊನ್ನಣ್ಣ ತನ್ನ ಪತ್ನಿ ಗೀತಾ ಜತೆ ಪಕ್ಕದ ತೋಟದಲ್ಲಿ ಅಡುಗೆಗೆ ಹಲಸಿನ ಮಿಡಿ ಕುಯ್ಯಲು ಹೋದ ಸಂದರ್ಭ ಆತನನ್ನು ಆ ತೋಟದ ಮಾಲೀಕ ಗುಂಡಿಕ್ಕಿ ಹತ್ಯೆ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ವಿರಾಜಪೇಟೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಸಂಬಂಧ ಆದಿವಾಸಿ ಸಂಘರ್ಷ ಸಮಿತಿ ಮೋರ್ಚಾದಿಂದ ಬುಧವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆದಿತ್ತು. ಅದಿವಾಸಿಯೊಬ್ಬ ಹಲಸಿನ ಮಿಡಿ ಕುಯ್ಯಲು ಹೋದಾಗ ಏಕಾಎಕಿ ಗುಂಡು ಹಾರಿಸಿ ಕೊಲ್ಲುವುದು ಅಮಾನವಿಯ ಕೃತ್ಯ. ಅಲ್ಲದೆ ಇದು ಜೀವಿಸುವ ಹಕ್ಕನ್ನು ಕಸಿದು ಕೊಂಡಂತೆ. ಈ ರೀತಿ ಪತ್ನಿ ಎದುರೇ ಗುಂಡಿಕ್ಕಿ ಹತ್ಯೆ ಮಾಡುವ ಪ್ರಬಲ ಸಮುದಾಯದ ದಮನಿತ ನಡೆ ಖಂಡನಿಯ ಎಂದು ಆದಿವಾಸಿ ಸಂಘರ್ಷ ಸಮಿತಿ ಮೋರ್ಚಾ ಪ್ರತಿಭಟನೆ ಬಳಿಕ ನೀಡಿದ ಮನವಿ ಪತ್ರದಲ್ಲಿ ದೂರಿತ್ತು.

ಈ ಪ್ರಕರಣ ತಳ ಸಮುದಾಯವನ್ನು ನಡೆಸಿಕೊಳ್ಳುತ್ತಿರುವ ಕಠೋರ ಸಾಮಾಜಿಕ ವಾಸ್ತವವನ್ನು ಮುನ್ನೆಲೆಗೆ ತಂದಿದೆ. ಎರವರು ಯಾವುದೇ ಮೂಲಸೌಕರ್ಯ, ಶಿಕ್ಷಣ, ಆರೋಗ್ಯ, ವಸತಿ, ಒಳ್ಳೆಯ ಉದ್ಯೋಗ ಇಲ್ಲದೆ ವಂಚಿತರಾಗಿ ನಿಕೃಷ್ಟ ಬದುಕು ಸಾಗಿಸುತ್ತಿದ್ದಾರೆ. ಕಾಫಿ ತೋಟದ ಲೈನ್ ಮನೆಯಲ್ಲಿ ತೋಟದಿಂದ ತೋಟಕ್ಕೆ ಅಲೆಯುತ್ತಾ ಕುಟುಂಬ ಸಮೇತ ದುಡಿದು ತಿನ್ನಬೇಕಿದೆ. ಜತೆಗೆ ಸಾಲದ ಸುಳಿಯಲ್ಲಿ ಸಿಲುಕಿ ನಲಗುತ್ತಿದ್ದಾರೆ. ಇವರನ್ನು ಲೈನ್ ಮನೆಯಿಂದ ಹೊರ ತಂದು ಅಗತ್ಯ ಸೌಲಭ್ಯ ಕಲ್ಪಿಸಬೇಕಿದೆ. ಇಂದಿಗೂ ಪ್ರಬಲ ಸಮುದಾಯಗಳ ದೌರ್ಜನ್ಯದಿಂದ ಎರವರು ಬಳಲುವಂತಾಗಿದೆ. ಆದ್ದರಿಂದ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಇನ್ನಾದರೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಅಲ್ಲದೆ ಕೊಲೆ ಪ್ರಕರಣದ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಜತೆಗೆ ಸರ್ಕಾರ ತಪ್ಪಿತಸ್ಥರ ಆಸ್ತಿ ಮುಟ್ಟುಗೊಲು ಹಾಕಿಕೊಳ್ಳಬೇಕು. ಅಲ್ಲದೆ ಮೃತನ ಪತ್ನಿ, ತಾಯಿ ಹಾಗೂ ತಂದೆಗೆ 20 ಲಕ್ಷ ರೂ. ಪರಿಹಾರ ನೀಡಬೇಕು. ವಸತಿ ನೀಡಬೇಕು. ಜತೆಗೆ ಮೃತನ ಸಹೋದರ ಪೂವಣ್ಣನಿಗೆ ಸೂಕ್ತ ಶಿಕ್ಷಣಕ್ಕೆ ಅನೂಕೂಲ ಮಾಡಿಕೊಡಬೇಕು. ಜತೆಗೆ ಪ್ರಕರಣದ ಸಾಕ್ಷಿಗಳಿಗೆ ಭದ್ರತೆ ಹಾಗೂ ಸೂಕ್ತ ರಕ್ಷಣೆ ನೀಡಬೇಕು. ಸರ್ಕಾರ ಲೈನ್‌ಮನೆಯ ಪದ್ಧತಿಗೆ ಕಡಿವಾಣ ಹಾಕಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಳಿಗೆ ಆಗ್ರಹಿಸಲಾಗಿದೆ.

ಮನವಿ ಸ್ವೀಕರಿಸಿದ ವಿರಾಜಪೇಟೆ ತಾಲೂಕು ತಹಸೀಲ್ದಾರ್ ರಾಮಚಂದ್ರ ಮತನಾಡಿ, ನಿಮ್ಮೊಂದಿಗೆ ನಾವಿದ್ದೇವೆ. ತಪ್ಪಿತಸ್ಥರಿಗೆ ಕಾನೂನಿನಡಿ ಖಂಡಿತಾ ಶಿಕ್ಷೆಯಾಗಲಿದೆ. ಪ್ರಸ್ತುತ 8.25 ಲಕ್ಷ ರೂ. ಪರಿಹಾರ ಮಂಜೂರಾಗಿದ್ದು, ಅರ್ಧ ಪತ್ನಿಗೂ ಹಾಗೂ ಅರ್ಧ ಮೃತನ ತಾಯಿಗೂ ಪರಿಹಾರ ಸಿಗಲಿದೆ. ಪತ್ನಿಗೆ 18 ವರ್ಷ ಆಗಿಲ್ಲವಾದ್ದರಿಂದ 18 ತುಂಬಿದ ಬಳಿಕ ಸರ್ಕಾರಿ ಉದ್ಯೋಗ ಲಭಿಸಲಿದೆ. ಪರಿಶಿಷ್ಟ ಜಾತಿ ಪಂಗಡದ ಕಲ್ಯಾಣ ಇಲಾಖೆ ಅಗತ್ಯ ಸೌಕರ್ಯ ಒದಗಿಸಲಿದೆ. ಮೃತನ ಸಹೋದರನ ಶಿಕ್ಷಣಕ್ಕೆ ವಸತಿ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಕಳಿಸಲಾಗುವುದು ಎಂದು ಭರವಸೆ ನೀಡಲಾಗಿದೆ.

ಎಐಸಿಸಿಟಿಯು ರಾಜ್ಯಧ್ಯಕ್ಷ ಅಪ್ಪಣ್ಣ, ರಾಜ್ಯ ಸಮಿತಿ ಉಪಾಧ್ಯಕ್ಷ ಕೆ.ಇ.ಮೋಹನ್, ರಾಜ್ಯ ಕಾರ್ಯದರ್ಶಿ ಕ್ಲಿಫ್ಟನ್ ರೋಜಾರಿಯೊ, ಜಿಲ್ಲಾ ಕಾರ್ಯದರ್ಶಿ ಗೌರಿ, ಜಿಲ್ಲಾ ಸಹಕಾರ್ಯದರ್ಶಿ ಬೊಳಕ ಅಪ್ಪಣ್ಣ, ಜಿಲ್ಲಾ ಸಮಿತಿ ಸದಸ್ಯ ಗಪ್ಪು, ಸಂಘಟನೆಯ ದಕ್ಷಿಣ ಕನ್ನಡದ ಜಿಲ್ಲಾಧ್ಯಕ್ಷ ರಾಮಣ್ಣ ವಿಟ್ಲ ಈ ವೇಳೆ ಮಾತನಾಡಿದರು. ಪ್ರತಿಭಟನಾ ನಿರತರನ್ನು ಉದೇಶಿಸಿ ಮಾತನಾಡಿದರು. ಸಂಘಟನೆಯ ವಿರಾಜಪೇಟೆ ತಾಲೂಕು ಅಧ್ಯಕ್ಷ ಎಂ.ಕೆ.ಮೋಹನ್ ಇತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News