×
Ad

15 ದಿನದಲ್ಲಿ 1000 ಗ್ರಾಮ ಆಡಳಿತ ಅಧಿಕಾರಿಗಳಿಗೆ ಕಚೇರಿ ಭಾಗ್ಯ : ಸಚಿವ ಕೃಷ್ಣ ಬೈರೇಗೌಡ

Update: 2025-06-06 20:50 IST

ಕೃಷ್ಣ ಬೈರೇಗೌಡ

ಬೆಂಗಳೂರು : ಹಲವು ವರ್ಷಗಳಿಂದ ಕಚೇರಿಗಳಿಲ್ಲದೆ ಪರಿತಪಿಸುತ್ತಿದ್ದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಕೊನೆಗೂ ಕಚೇರಿ ಭಾಗ್ಯ ಲಭ್ಯವಾಗಲಿದೆ. ರಾಜ್ಯಾದ್ಯಂತ ಲಭ್ಯವಿರುವ ಗ್ರಾಮ ಪಂಚಾಯತ್ ಕಾರ್ಯಾಲಯಗಳಲ್ಲೇ ಮುಂದಿನ 15 ದಿನಗಳಲ್ಲಿ ಕನಿಷ್ಟ 1000 ಗ್ರಾಮ ಆಡಳಿತ ಅಧಿಕಾರಿಗಳಿಗೆ ನೂತನ ಕಚೇರಿ ನೀಡಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಗಡುವು ನೀಡಿದರು.

ಶುಕ್ರವಾರ ವಿಕಾಸಸೌಧದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಸಭೆ ನಡೆಸಿದ ಅವರು, ಜನ ಸಾಮಾನ್ಯರು ಹಾಗೂ ಪ್ರತಿನಿಧಿಗಳೇ ಗ್ರಾಮ ಆಡಳಿತ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ ಎಂದು ದೂರು ನೀಡುತ್ತಿದ್ದಾರೆ. ಅವರಿಗೆ ಸ್ವಂತದ್ದೊಂದು ಕಚೇರಿ ಇಲ್ಲದ ಕಾರಣ ಸಾರ್ವಜನಿಕರ ಅಗತ್ಯತೆಗಳಿಗೆ ಸ್ಪಂದಿಸಲಾಗುತ್ತಿಲ್ಲ ಎಂದು ಹೇಳಿದರು.

ಅಲ್ಲದೆ, ತಮಗೊಂದು ಕಚೇರಿ ನೀಡುವಂತೆ ಗ್ರಾಮ ಆಡಳಿತ ಅಧಿಕಾರಿಗಳೂ ಹಲವು ವರ್ಷಗಳಿಂದ ಬೇಡಿಕೆ ಮುಂದಿಡುತ್ತಿದ್ದಾರೆ. ಹೀಗಾಗಿ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳಿಗೂ ಕಚೇರಿ ನೀಡಲೇಬೇಕು ಎಂಬ ವಿಚಾರದಲ್ಲಿ ಸರಕಾರ ಬದ್ಧವಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ರಾಜ್ಯಾದ್ಯಂತ ಕಂದಾಯ ವೃತ್ತಗಳಲ್ಲಿ 5944 ಗ್ರಾಮ ಆಡಳಿತ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ ಗ್ರಾಮ ಪಂಚಾಯತ್ ಕಾರ್ಯಾಲಯದ ಆವರಣದಲ್ಲೇ ಕನಿಷ್ಟ 1000 ಗ್ರಾಮ ಆಡಳಿತ ಅಧಿಕಾರಿಗಳಿಗೆ ಕಚೇರಿ ನಿರ್ಮಿಸುವಷ್ಟು ಸ್ಥಳಾವಕಾಶ ಇದೆ. ಹೀಗಾಗಿ ಎಲ್ಲ ಜಿಲ್ಲಾಧಿಕಾರಿಗಳೂ ಹಾಗೂ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಮುಂದಿನ 15 ದಿನಗಳಲ್ಲಿ ಈ ಸಂಬಂಧ ಕಾರ್ಯ ಪ್ರವೃತ್ತರಾಗಬೇಕು. ಉಳಿದ ಅಧಿಕಾರಿಗಳಿಗೆ ಮುಂದಿನ ಹಂತದಲ್ಲಿ ಗ್ರಾಮ ಪಂಚಾಯತ್ ಆವರಣದಲ್ಲೇ ನೂತನ ಕಟ್ಟಡಗಳನ್ನು ನಿರ್ಮಿಸಿ ಕಚೇರಿ ತೆರೆಯಬೇಕು ಎಂದು ಸೂಚಿಸಿದರು.

ಎಲ್ಲ ಅಧಿಕಾರಿಗಳೂ ಒಂದೇ ಸೂರಿನ ಅಡಿ ಜನರ ಕೈಗೆ ಸಿಗುವಂತಿರಬೇಕು ಎಂಬುದೇ ಸರಕಾರದ ಉದ್ದೇಶ. ಇದೇ ಕಾರಣಕ್ಕೆ ಪಂಚಾಯತ್ ಕಾರ್ಯಾಲಯದಲ್ಲೇ ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿಗಳನ್ನು ತೆರೆಯಲಾಗುತ್ತಿದೆ. ಹೀಗಾಗಿ ಸ್ಥಳಾವಕಾಶ ಇದ್ದರೆ ಒಂದೇ ಪಂಚಾಯತ್ ಕಾರ್ಯಾಲಯದಲ್ಲಿ ಇಬ್ಬರು ಗ್ರಾಮ ಆಡಳಿತ ಅಧಿಕಾರಿಗಳಿಗೂ ಕಚೇರಿ ನೀಡಿ ಎಂದು ಅಧಿಕಾರಿಗಳಿಗೆ ಕೃಷ್ಣ ಬೈರೇಗೌಡ ತಿಳಿಸಿದರು.

ಬಿಟ್ಟುಹೋದ ಕಂದಾಯ ಗ್ರಾಮಗಳನ್ನು ಗುರುತಿಸಿ: ಅಧಿಕಾರಿಗಳ ಕಣ್ತಪ್ಪಿನಿಂದ ಪಟ್ಟಿಯಿಂದ ಬಿಟ್ಟುಹೋಗಿರುವ ಹಾಡಿ, ಹಟ್ಟಿ, ತಾಂಡ, ಗೊಲ್ಲರ ಹಟ್ಟಿಗಳನ್ನು ಗುರುತಿಸಿ ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ ಅಧಿಸೂಚನೆ ಹೊರಡಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಕೃಷ್ಣ ಬೈರೇಗೌಡ ಸೂಚಿಸಿದರು.

ಕಂದಾಯ ಗ್ರಾಮಗಳ ಘೋಷಣೆ ಬಡವರ ಕೆಲಸ. ಬಡವರ ಕೆಲಸ ಮಾಡಲು ಅಧಿಕಾರಿಗಳು ಅಸಡ್ಡೆ ತೋರುವುದು ಸರಿಯಲ್ಲ. ಹಾಡಿ, ಹಟ್ಟಿ, ತಾಂಡಾಗಳು ಗ್ರಾಮದ ಜೊತೆ ಹೊಂದಿಕೊಂಡಿದ್ದರೆ ಅವುಗಳಿಗೆ ಅಂತಹ ಜನ ವಸತಿ ಪ್ರದೇಶಗಳಿಗೆ ಕಂದಾಯ ಗ್ರಾಮ ಸ್ಥಾನ-ಮಾನ ನೀಡಲು ಸಾಧ್ಯವಿಲ್ಲ ಎಂದು ಸರಕಾರದ 2016 ರ ಸುತ್ತೋಲೆ ಇದೆ. ಅಧಿಕಾರಿಗಳು ಇದೇ ಕಾರಣವನ್ನು ಮುಂದಿಟ್ಟು ಹಾಡಿ, ಹಟ್ಟಿಗಳಿಗೆ ಕಂದಾಯ ಗ್ರಾಮ ಸ್ಥಾನ-ಮಾನ ನೀಡದಿರುವುದು ಸರಿಯಲ್ಲ ಎಂದು ಅವರು ಹೇಳಿದರು.

ಕಂದಾಯ ಗ್ರಾಮಗಳಿಗೆ ಸಂಬಂಧಿಸಿದಂತೆ 2016ರ ಸುತ್ತೋಲೆಯನ್ನೇ ಪರಿಗಣಿಸುವ ಅಧಿಕಾರಿಗಳು, 2017 ಮತ್ತು 2019 ರ ಹೊಸ ಸುತ್ತೋಲೆಯನ್ನು ಏಕೆ ಓದುವುದಿಲ್ಲ. ಆ ಸುತ್ತೋಲೆಯಲ್ಲಿ ಗ್ರಾಮದ ಜೊತೆ ಹೊಂದಿಕೊಂಡಿದ್ದರೂ ಸಹ ತಾಂಡಾ, ಹಟ್ಟಿಗಳಿಗೆ ಕಂದಾಯ ಗ್ರಾಮ ಸ್ಥಾನಮಾನ ನೀಡಲು ಅವಕಾಶ ನೀಡಲಾಗಿದೆ. ಆದರೆ, ಅಧಿಕಾರಿಗಳು ಇದನ್ನು ಏಕೆ ಪರಿಗಣಿಸುವುದಿಲ್ಲ ಎಂದು ಕೃಷ್ಣ ಬೈರೇಗೌಡ ಸಭೆಯಲ್ಲೇ ಬೇಸರ ವ್ಯಕ್ತಪಡಿಸಿದರು.

ಇನ್ನೂ 2016ರ ಸುತ್ತೋಲೆಯಲ್ಲೂ ‘ದಾಖಲೆ ರಹಿತ ಜನವಸತಿ ಪ್ರದೇಶ ನಗರ ಸ್ಥಳೀಯ ವ್ಯಾಪ್ತಿಗೆ ಒಳಪಟ್ಟಿದ್ದರೆ ಕಂದಾಯ ಗ್ರಾಮ ಎಂದು ಘೋಷಿಸುವಂತಿಲ್ಲ. ಆದಾಗ್ಯೂ ನಿವಾಸಿಗಳಿಗೆ ಹಕ್ಕುಪತ್ರ ಇಲ್ಲದಿದ್ದಲ್ಲಿ ಬಡಾವಣೆ/ಕಂದಾಯ ಗ್ರಾಮ ಅಥವಾ ಉಪಗ್ರಾಮ ಎಂದು ಘೋಷಿಸಬಹುದು. ಈ ಬಗ್ಗೆ ಅಧಿಕಾರಿಗಳು ಸರಕಾರದ ಗಮನಕ್ಕೆ ತರಬಹುದು’ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಅವರು ತಿಳಿಸಿದರು.

ಆದರೆ, ಅಧಿಕಾರಿಗಳು ಇಂತಹ ವಿಚಾರಗಳ ಬಗ್ಗೆ ಗಮನವಹಿಸದಿರುವುದು ವಿಷಾದನೀಯ. ಅಧಿಕಾರಿಗಳು ಮಾಡುವ ತಪ್ಪಿಗೆ ನಾವು ಸದನದಲ್ಲಿ ಬಂಜಾರ ಮತ್ತು ಗೊಲ್ಲರ ಸಮಾಜದ ಶಾಸಕರ ಮಾತಿನ ದಾಳಿಗೆ ತುತ್ತಾಗಬೇಕಿದೆ. ಕಳೆದ ತಿಂಗಳು ಹೋಸಪೇಟೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ 1.11 ಲಕ್ಷ ಹಾಡಿ, ಹಟ್ಟಿ, ತಾಂಡ ನಿವಾಸಿಗಳಿಗೆ ಹಕ್ಕುಪತ್ರ ನೀಡಿದ್ದೇವೆ. ಮುಂದಿನ ವರ್ಷದೊಳಗೆ ಕನಿಷ್ಟ ಇನ್ನೂ 1 ಲಕ್ಷ ಜನರಿಗೆ ಹಕ್ಕುಪತ್ರ ನೀಡಬೇಕು ಎಂಬುದು ಸರಕಾರದ ಗುರಿ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

ಹೀಗಾಗಿ ಅಧಿಕಾರಿಗಳು ಇನ್ನಾದರೂ ಆಸಕ್ತಿ ವಹಿಸಿ ‘ತಾಂಡಾ ನಿಗಮ’ ಹಾಗೂ ‘ಜಲ ಜೀವನ್ ಮಿಷನ್’ ನಿಂದ ಪಟ್ಟಿ ತರಿಸಿಕೊಂಡು ತಾಳೆ ನೋಡಿ, ಬಿಟ್ಟುಹೋಗಿರುವ ಜನವಸತಿ ಪ್ರದೇಶಗಳನ್ನು ಗುರುತಿಸಿ ಕಂದಾಯ ಗ್ರಾಮಗಳು ಎಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಹಾಗೂ ಕಂದಾಯ ಆಯುಕ್ತ ಸುನೀಲ್ ಕುಮಾರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News