×
Ad

‘ರೈತರಿಗೆ ನನ್ನ ಭೂಮಿ ಗ್ಯಾರಂಟಿ ಅಭಿಯಾನ’ | 7 ತಿಂಗಳಲ್ಲಿ ಪೋಡಿ ದುರಸ್ಥಿಗೆ 1.04 ಲಕ್ಷ ಜಮೀನುಗಳ ಅಳತೆ : ಕೃಷ್ಣ ಬೈರೇಗೌಡ

Update: 2025-07-03 19:56 IST

                                                                      ಕೃಷ್ಣ ಬೈರೇಗೌಡ

ಬೆಂಗಳೂರು : ರೈತರಿಗೆ ಕಾಂಗ್ರೆಸ್ ಸರಕಾರ ನೀಡಿದ ನನ್ನ ಭೂಮಿ ಗ್ಯಾರಂಟಿ ಅಭಿಯಾನ ವೇಗ ಪಡೆದುಕೊಂಡಿದ್ದು, ಕೇವಲ 7 ತಿಂಗಳಲ್ಲಿ 1,04,222 ಜಮೀನುಗಳನ್ನು ಅಳತೆಗೆ ತೆಗೆದುಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

ಗುರುವಾರ ವಿಕಾಸಸೌಧದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ಜಿಲ್ಲಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಈ ಹಿಂದಿನ ಸರಕಾರದ ಅವಧಿಯಲ್ಲಿ ಮೂರು ವರ್ಷಕ್ಕೆ ಕೇವಲ 5,801 ಪ್ರಕರಣಗಳಲ್ಲಿ ಮಾತ್ರ ರೈತರಿಗೆ ಪೋಡಿ ದುರಸ್ಥಿ ಮಾಡಿಕೊಡಲಾಗಿತ್ತು. ಆದರೆ, ನಾವು ಕಳೆದ ಡಿಸೆಂಬರ್‌ ನಲ್ಲಿ ‘ನನ್ನ ಭೂಮಿ’ ಹೆಸರಿನಲ್ಲಿ ಪೋಡಿ ಅಭಿಯಾನ ಕೈಗೊಂಡು, ಕೇವಲ 7 ತಿಂಗಳಲ್ಲಿ 1,04,222 ಜಮೀನುಗಳನ್ನು ಅಳತೆಗೆ ತೆಗೆದುಕೊಂಡಿದ್ದೇವೆ’ ಎಂದು ತಿಳಿಸಿದರು.

ಈವರೆಗೆ 1,04,222 ಜಮೀನುಗಳನ್ನು ಅಳತೆಗೆ ತೆಗೆದುಕೊಂಡಿದ್ದು, ಈ ಪೈಕಿ ಶೇ.20 ರಷ್ಟು ಭೂಮಿಯ ಅಳತೆ ಕೆಲಸವೂ ಮುಗಿದಿದೆ. ಉಳಿದ ಪ್ರಕರಣಗಳನ್ನು ಮುಂದಿನ 6 ತಿಂಗಳಲ್ಲಿ ಪೋಡಿ ಮಾಡಿಕೊಡಲು ಸೂಚಿಸಲಾಗಿದೆ. ಇದಲ್ಲದೆ, ಇನ್ನೂ 50 ರಿಂದ 70 ಸಾವಿರ ಪೋಡಿ ಪ್ರಕರಣಗಳು ದಾಖಲಾಗುವ ನಿರೀಕ್ಷೆ ಇದೆ ಎಂದು ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

ಮೂರು-ನಾಲ್ಕು ದಶಕಗಳ ಹಿಂದೆ ರೈತರಿಗೆ ದರ್ಖಾಸ್ತಿನಲ್ಲಿ ಮಂಜೂರಾಗಿದ್ದ ಜಮೀನಿಗೆ ಈವರೆಗೆ ಪೋಡಿ ಆಗಿಲ್ಲ. ಇದರಿಂದ ರೈತರು ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಸಲುವಾಗಿಯೇ ‘ನನ್ನ ಭೂಮಿ’ ಹೆಸರಿನಲ್ಲಿ ಪೋಡಿ ಅಭಿಯಾನ ಆರಂಭಿಸಲಾಯಿತು ಎಂದು ಅವರು ಹೇಳಿದರು.

ಈ ಅಭಿಯಾನದ ಅಡಿ ಜನರ ಅರ್ಜಿಗೆ ಕಾಯದೆ ಸರಕಾರವೇ ರೈತರ ಮನೆ ಬಾಗಿಲಿಗೆ ತೆರಳಿ ಪೋಡಿ ಮಾಡಿಕೊಡುತ್ತಿದೆ. ಹಿಂದೆ ಮಂಜೂರಾಗಿದ್ದ ಜಮೀನಿಗೆ ಪಕ್ಕಾ ದಾಖಲೆಗಳನ್ನು ಅವರ ಕೈಗೆ ಕೊಟ್ಟು ಅವರ ಭೂ ಮಾಲಕತ್ವಕ್ಕೆ ಗ್ಯಾರಂಟಿ ನೀಡುವುದು ಈ ಕಾರ್ಯಕ್ರಮದ ವಿಶೇಷ ಎಂದು ಕೃಷ್ಣ ಬೈರೇಗೌಡ ವಿವರಿಸಿದರು.

29.8 ಕೋಟಿ ಪುಟಗಳ ಡಿಜಿಟಲೀಕರಣ: ‘ಭೂ ಸುರಕ್ಷಾ’ ಯೋಜನೆಯ ಅಡಿಯಲ್ಲಿ ಈವರೆಗೆ 29.8 ಕೋಟಿ ಮೂಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣ ಗೊಳಿಸಲಾಗಿದ್ದು, ವರ್ಷಾಂತ್ಯದೊಳಗೆ ತಹಶೀಲ್ದಾರ್ ಕಚೇರಿಗಳಲ್ಲಿರುವ ಎಲ್ಲ ಮೂಲ ಕಡತಗಳನ್ನೂ ಸ್ಕ್ಯಾನ್ ಮಾಡಿ ಡಿಜಿಟಲೀಕರಿಸಲಾಗುವುದು ಎಂದು ಅವರು ತಿಳಿಸಿದರು.

ರೈತರು ತಹಶೀಲ್ದಾರ್ ಕಚೇರಿಗಳಲ್ಲಿ ತಮ್ಮ ಭೂ ದಾಖಲೆಗಳನ್ನು ತೆಗೆದುಕೊಳ್ಳಲು ಸಾಕಷ್ಟು ಪರದಾಡುತ್ತಿದ್ದಾರೆ. ಎಷ್ಟೋ ದಾಖಲೆಗಳು ಕಳೆದು ಹೋಗಿದ್ದರೆ, ಮತ್ತಷ್ಟು ದಾಖಲೆಗಳನ್ನು ಕಾನೂನು ಬಾಹಿರವಾಗಿ ತಿದ್ದುವ ಮೂಲಕ ರೈತರನ್ನು ಕೋರ್ಟು ಕಚೇರಿಗಳಿಗೆ ಅಲೆದಾಡಿಸಲಾಗುತ್ತಿದೆ. ರೈತರಿಗೆ ಈ ಎಲ್ಲ ಶೋಷಣೆಗಳಿಂದ ಮುಕ್ತಿ ನೀಡುವ ಸಲುವಾಗಿಯೇ ‘ಭೂ ಸುರಕ್ಷಾ’ ಯೋಜನೆಯನ್ನು ಜಾರಿಗೆ ತರಲಾಯಿತು ಎಂದು ಕೃಷ್ಣ ಬೈರೇಗೌಡ ಹೇಳಿದರು.

ಈ ಯೋಜನೆ ಯಶಸ್ವಿಯಾದರೆ ಹಲವು ಅಕ್ರಮಗಳನ್ನು ತಡೆಯಬಹುದು. ಅಲ್ಲದೆ, ರೈತರು ಅನಗತ್ಯವಾಗಿ ಸರಕಾರಿ ಕಚೇರಿ ಅಲೆಯುವುದನ್ನು ತಪ್ಪಿಸುವುದರ ಜೊತೆಗೆ ಮನೆಯಿಂದ ಆನ್‍ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ದಾಖಲೆ ಪಡೆದುಕೊಳ್ಳಬಹುದು ಎಂದು ಅವರು ಮಾಹಿತಿ ನೀಡಿದರು.

ಈ ಯೋಜನೆಯನ್ನು ಪ್ರಾಯೋಗಿಕವಾಗಿ 31 ತಾಲೂಕುಗಳಲ್ಲಿ ಆರಂಭಿಸಿ ಇದೀಗ ಎಲ್ಲ ತಾಲೂಕುಗಳಲ್ಲೂ ಕೆಲಸ ಆರಂಭಿಸಲಾಗಿದೆ. ರಾಜ್ಯಾದ್ಯಂತ ತಹಶೀಲ್ದಾರ್, ಎಸಿ-ಡಿಸಿ ಕಚೇರಿಗಳಲ್ಲಿ ಸುಮಾರು 100 ಕೋಟಿ ಮೂಲ ದಾಖಲೆ ಪುಟಗಳಿವೆ ಎಂದು ಅಂದಾಜಿಸಲಾಗಿದ್ದು, ಡಿಸೆಂಬರ್ ಅಂತ್ಯದೊಳಗೆ ಎಲ್ಲ ಪುಟಗಳನ್ನೂ ಸ್ಕ್ಯಾನ್ ಮಾಡಿ ಡಿಜಿಟಲೀಕರಿಸುವ ಗುರಿ ಹೊಂದಲಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

ಗ್ರಾಮ ಆಡಳಿತ ಅಧಿಕಾರಿಗಳಿಗೆ ಕಚೇರಿ: ಗ್ರಾಮ ಆಡಳಿತ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ಕಚೇರಿ ವ್ಯವಸ್ಥೆ ಮಾಡಿಕೊಡುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೂ ಸೂಚಿಸಲಾಗಿದೆ. ಈಗಾಗಲೇ ರಾಜ್ಯಾದ್ಯಂತ ಸುಮಾರು 2,600 ಕಡೆಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಿಗೆ ಕಚೇರಿ ನೀಡಲಾಗಿದೆ ಎಂದು ಅವರು ತಿಳಿಸಿದರು.

ಗ್ರಾಮ ಪಂಚಾಯತ್ ಕಚೇರಿಗಳಲ್ಲೆ ಗ್ರಾಮ ಆಡಳಿತ ಅಧಿಕಾರಿಗಳಿಗೂ ಕಚೇರಿ ವ್ಯವಸ್ಥೆ ಮಾಡುವ ಸಂಬಂಧ ಗ್ರಾಮೀಣಾಭಿವೃದ್ಧಿ ಸಚಿವರ ಜೊತೆ ಚರ್ಚೆ ನಡೆಸಲಾಗಿದ್ದು, ಅದರಂತೆ ಈ ಹಿಂದೆ 1,200 ಅಧಿಕಾರಿಗಳಿಗೆ ಕಚೇರಿ ವ್ಯವಸ್ಥೆ ನೀಡಲಾಗಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಅಭಿಯಾನದ ಮಾದರಿಯಲ್ಲಿ 2,600 ಕಡೆಗಳಲ್ಲಿ ಕಚೇರಿ ವ್ಯವಸ್ಥೆ ಮಾಡಲಾಗಿದ್ದು, ಉಳಿದ 3500 ಅಧಿಕಾರಿಗಳಿಗೂ ಶೀಘ್ರದಲ್ಲೇ ಕಚೇರಿ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಗ್ರಾಮ ಆಡಳಿತ ಅಧಿಕಾರಿಗಳಿಗೆ ಸರಕಾರದಿಂದ ಈಗಾಗಲೇ 4 ಸಾವಿರ ಲ್ಯಾಪ್‍ಟಾಪ್ ನೀಡಲಾಗಿದೆ. ಲ್ಯಾಪ್‍ಟಾಪ್ ನೀಡುವುದು ದೊಡ್ಡ ವಿಚಾರವಲ್ಲ, ಅವರಿಗೆ ಅಗತ್ಯವಾದ ಅಪ್ಲಿಕೇಶನ್ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನೂ ಮಾಡಿಕೊಟ್ಟು ಅವರೂ ಸಹ ಕಡತಗಳನ್ನು ಇ-ಆಫೀಸ್ ಮೂಲಕ ವಿಲೇವಾರಿ ಮಾಡುವಂತಾಗಬೇಕು. ಆಗ ಮಾತ್ರ ಆಡಳಿತ ವೇಗ ಪಡೆಯಲಿದ್ದು, ಜಿಲ್ಲಾಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಲೂ ಇಂದಿನ ಸಭೆಯಲ್ಲಿ ಸೂಚಿಸಲಾಗಿದೆ ಕೃಷ್ಣ ಬೈರೇಗೌಡ ಹೇಳಿದರು.

‘ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ಮುನ್ನ ತಹಶೀಲ್ದಾರ್ ಕಚೇರಿಗಳಲ್ಲಿ ಅವಧಿ ಮೀರಿದ 10,774 ಪ್ರಕರಣಗಳು ಬಾಕಿ ಇದ್ದವು. ಇಂದು ಆ ಸಂಖ್ಯೆಯನ್ನು 457ಕ್ಕೆ ಇಳಿಸಲಾಗಿದೆ. ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಅವಧಿ ಮೀರಿದ 62,857 ಪ್ರಕರಣಗಳು ಬಾಕಿ ಇದ್ದವು, ಈ ಸಂಖ್ಯೆಯನ್ನು 20,211ಕ್ಕೆ ಇಳಿಸಲಾಗಿದೆ. ಉಳಿದ ಪ್ರಕರಣಗಳನ್ನು ಮುಂದಿನ 4 ತಿಂಗಳಲ್ಲಿ ನ್ಯಾಯಯುತ ವಿಲೇವಾರಿಗೆ ಒಳಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ’

-ಕೃಷ್ಣ ಬೈರೇಗೌಡ, ಕಂದಾಯ ಸಚಿವ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News