ಡಿಸೆಂಬರ್‌ನೊಳಗೆ 2.51ಲಕ್ಷ ಭೂ ಮಂಜೂರುದಾರರ ಜಮೀನು ಪೋಡಿ ಕಾರ್ಯ ಪೂರ್ಣ : ಕೃಷ್ಣಬೈರೇಗೌಡ
ಬೆಂಗಳೂರು, ಆ.13: ಕನಿಷ್ಠ ಮೂರು ದಾಖಲಾತಿ ಸಂಗ್ರಹಿಸಿಕೊಂಡು ಜಮೀನುಗಳ ಪೋಡಿ ಕಾರ್ಯಕ್ಕೆ ರಾಜ್ಯ ಸರಕಾರ ಮುಂದಾಗಿದೆ. ಈಗಾಗಲೇ ಗುರುತಿಸಲಾಗಿರುವ 73,390 ಸರ್ವೇ ನಂಬರ್‌ಗಳ ಪೈಕಿ 2.51 ಲಕ್ಷ ಭೂ ಮಂಜೂರುದಾರರಿದ್ದು ಡಿಸೆಂಬರ್ ಒಳಗಾಗಿ ಇವರ ಜಮೀನುಗಳ ಪೋಡಿ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಬುಧವಾರ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಎಂ.ಟಿ.ಬಿ.ನಾಗರಾಜ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಹಿಂದೆ ಜಮೀನುಗಳ ಪೋಡಿ ಮಾಡಿಸಲು ಸ್ಥಳೀಯ ಕಂದಾಯ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕಾಗಿತ್ತು. ಯಾರದ್ದೋ ಜಮೀನಿನ ದಾಖಲೆ ಇಟ್ಟುಕೊಂಡು ಬೇರೆಯವರು ಪೋಡಿ ಕಾರ್ಯ ಮಾಡಿಸುವ ಮೂಲಕ ವಂಚಿಸುತ್ತಿದ್ದರು. ಹೀಗಾಗಿ ಏಕವ್ಯಕ್ತಿ ಪೋಡಿ ಮಾಡಿಸುವುದನ್ನು ರದ್ದುಗೊಳಿಸಿ ಸರಕಾರವೇ ಪೋಡಿ ಮಾಡಲು ಮುಂದಾಗಿದೆ ಎಂದರು.
ಈಗಾಗಲೇ ರಾಜ್ಯದಲ್ಲಿ ಸಮಗ್ರ ಮಾಹಿತಿ ಕಲೆಹಾಕಿ 73,390 ಸರ್ವೇ ನಂಬರ್ ಗಳನ್ನು ಗುರುತಿಸಲಾಗಿದೆ. 2.51 ಲಕ್ಷ ಭೂ ಮಂಜೂರುದಾರರಿದ್ದಾರೆ. ಜಮೀನುಗಳ ಪೋಡಿ ಕಾರ್ಯ ಪೂರ್ಣಗೊಳಿಸಲು ಐದು ದಾಖಲಾತಿ ಇರಬೇಕೆಂಬ ನಿಯಮ ಸಡಿಲಗೊಳಿಸಿ ಮೂರು ದಾಖಲೆಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ಕೃಷ್ಣಬೈರೇಗೌಡ ಹೇಳಿದರು.
ರಾಜ್ಯದ ಕಂದಾಯ ಕಚೇರಿಗಳಲ್ಲಿರುವ ಭೂ ಸಂಬಂಧಿಸಿದಂತೆ ಮೂಲ ಕಡತಗಳ ಸಂರಕ್ಷಣೆಗಾಗಿ 100 ಕೋಟಿ ಪುಟಗಳಿರುವ ದಾಖಲಾತಿಗಳನ್ನು ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ಸದ್ಯ 36 ಕೋಟಿ ಪುಟಗಳ ಸ್ಕ್ಯಾನಿಂಗ್ ಕಾರ್ಯ ಮುಗಿದಿದೆ. ಮುಂದಿನ ವರ್ಷ ಫೆಬ್ರುವರಿಯೊಳಗೆ ಸ್ಕ್ಯಾನಿಂಗ್ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಕೃಷ್ಣಬೈರೇಗೌಡ ತಿಳಿಸಿದರು.