×
Ad

ದಕ್ಷಿಣ ಕನ್ನಡ ಜಿಲ್ಲೆಗೆ ‘ಮಂಗಳೂರು’ ಎಂದು ಮರು ನಾಮಕರಣ; ಎಲ್ಲರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ : ಕೃಷ್ಣ ಬೈರೇಗೌಡ

Update: 2025-08-13 23:07 IST

ಬೆಂಗಳೂರು, ಆ.13: ದಕ್ಷಿಣ ಕನ್ನಡ ಜಿಲ್ಲೆಗೆ ʼಮಂಗಳೂರುʼ ಎಂದು ಮರು ನಾಮಕರಣ ಮಾಡುವ ಸಂಬಂಧ ಪರ, ವಿರೋಧ ಮನವಿಗಳು ಸ್ವೀಕೃತವಾಗಿವೆ. ಜಿಲ್ಲಾಧಿಕಾರಿಯಿಂದ ವರದಿ ಬರುವುದು ಬಾಕಿಯಿದೆ. ಎಲ್ಲರ ಅಭಿಪ್ರಾಯ ಪಡೆದು ಸರಕಾರ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಬುಧವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಹರೀಶ್ ಪೂಂಜ ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಎಂದು ಮರು ನಾಮಕರಣ ಮಾಡುವ ಬಗ್ಗೆ ಗಮನ ಸೆಳೆದ ಸೂಚನೆಗೆ ಅವರು ಉತ್ತರಿಸಿದರು.

ದಕ್ಷಿಣ ಕನ್ನಡ ಭಾಗವನ್ನು 17ನೆ ಶತಮಾನದಲ್ಲೆ ಕ್ಯಾನರೀಸ್ ಎಂದು ಕರೆಯುತ್ತಿದ್ದರು. ಕ್ಯಾನರೀಸ್ ಎಂದರೆ ಕನ್ನಡ ನಾಡು ಎಂದರ್ಥ. ಕನ್ನಡದ ಮೊದಲ ಸಾಮ್ರಾಜ್ಯ ಬನವಾಸಿ ಕಂದಬರದ್ದು. ಈಗ ಅದು ಉತ್ತರ ಕನ್ನಡ ಜಿಲ್ಲೆ. ಕನ್ನಡ ಅನ್ನೊ ಪದಕ್ಕೂ ನಮಗೆ ಬಾಂಧವ್ಯವಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮರು ನಾಮಕರಣಕ್ಕೆ ಸರಕಾರ ಮುಕ್ತ ಮನಸ್ಸು ಹೊಂದಿದೆ. ಪರ, ವಿರೋಧ ಎರಡು ಅಭಿಪ್ರಾಯಗಳು ಇರುವುದರಿಂದ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯೋಣ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಇದಕ್ಕೂ ಮುನ್ನ ಗಮನ ಸೆಳೆದ ಹರೀಶ್ ಪೂಂಜ, ಮಂಗಳೂರು ಅನ್ನೋದು ಜಗತ್ತಿನಲ್ಲಿ ಬ್ರ್ಯಾಂಡ್ ಆಗಿದೆ. ಜಗತ್ತಿನ ಯಾವುದೆ ಭಾಗದಲ್ಲಿ ವ್ಯಾಪಾರ, ಉದ್ಯೋಗ ಮಾಡುವ ನಮ್ಮ ಭಾಗದವರು ತಮ್ಮನ್ನು ಮಂಗಳೂರು ಪ್ರದೇಶದವರು ಎಂದು ಗುರುತಿಸಿಕೊಳ್ಳುತ್ತಾರೆ. 1931ರಿಂದ ಜಿಲ್ಲೆಯ ಹೆಸರು ಮರು ನಾಮಕರಣಕ್ಕೆ ಹೋರಾಟ ನಡೆಯುತ್ತಲೆ ಇದೆ. ನಮ್ಮ ಜಿಲ್ಲೆಯಲಿರುವ ವಿಮಾಣ ನಿಲ್ದಾಣ, ಬಂದರು, ವಿಶ್ವವಿದ್ಯಾಲಯ, ಕೆಮಿಕಲ್ ಇಂಡಸ್ಟ್ರೀಸ್, ಸೆಂಟ್ರಲ್ ರೈಲು ನಿಲ್ದಾಣ ಎಲ್ಲವೂ ಮಂಗಳೂರು ಹೆಸರಿನಿಂದಲೇ ಗುರುತಿಸಿಕೊಂಡಿವೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಯು.ಟಿ.ಖಾದರ್, ಕೆಡಿಪಿ ಸಭೆಗಳು ನಡೆದಾಗ ಈ ಬಗ್ಗೆ ಚರ್ಚೆ ಮಾಡಿ ಜಿಲ್ಲಾ ಮಟ್ಟದಿಂದ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡೋಣ. ಹೆಸರು ಬದಲಾವಣೆಯ ಸಾಧಕ ಬಾಧಕಗಳ ಬಗ್ಗೆ ನಾವು ಚರ್ಚೆ ಮಾಡಬೇಕು. ಕೇವಲ ಅಭಿವೃದ್ಧಿ ದೃಷ್ಟಿಯಿಂದ ಅಷ್ಟೇ ಅಲ್ಲ, ನಮ್ಮ ಸಂಸ್ಕೃತಿ, ಪರಂಪರೆ, ಆಚಾರ, ವಿಚಾರ ಎಲ್ಲವೂ ಇದರಲ್ಲಿ ಅಡಗಿದೆ. ಹೆಸರು ಬದಲಾವಣೆ ಮಾಡುವುದಕ್ಕಿಂತ ಹೆಚ್ಚಾಗಿ, ನಾವು ಜಿಲ್ಲೆಯಲ್ಲಿ ಪ್ರೀತಿ, ಸೌಹಾರ್ದತೆಯ ವಾತಾವರಣ ನಿರ್ಮಾಣ ಮಾಡಬೇಕು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News