×
Ad

ಮೆಟ್ರೋ ಕಾಮಗಾರಿ ಪೂರ್ಣಗೊಳ್ಳುವವರೆಗೆ ಸುಗಮ ಸಂಚಾರಕ್ಕೆ ಕನಿಷ್ಠ ವ್ಯವಸ್ಥೆ ಕಲ್ಪಿಸಿ : ಕೃಷ್ಣಬೈರೇಗೌಡ

Update: 2025-12-03 20:06 IST

ಬೆಂಗಳೂರು : ನಗರದಲ್ಲಿರುವ ನಾಗವಾರ ಜಂಕ್ಷನ್ ಸಮೀಪ ನಡೆಯುತ್ತಿರುವ ಮೆಟ್ರೋ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ಅಲ್ಲಿಯವರೆಗೆ ಸುಗಮ ಸಂಚಾರಕ್ಕೆ ಕನಿಷ್ಠ ವ್ಯವಸ್ಥೆಯನ್ನಾದರೂ ಕಲ್ಪಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಬುಧವಾರ ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ನಾಗವಾರ ಜಂಕ್ಷನ್ ನಿಂದ ಯಲಹಂಕವರೆಗಿನ ಹೊರವರ್ತುಲ ರಸ್ತೆ ಮತ್ತು ಬಳ್ಳಾರಿ ರಸ್ತೆಯಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿಗಳನ್ನು ಪರಿಶೀಲಿಸಿ, ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ವೀರಣ್ಣಪಾಳ್ಯ ಜಂಕ್ಷನ್‍ನಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿ ಪ್ರದೇಶದಲ್ಲಿ ಹೆಚ್ಚುವರಿ ಸಾಮಗ್ರಿ ಹಾಗೂ ಭಗ್ನಾವಶೇಷಗಳು ಕಂಡುಬರುತ್ತಿವೆ. ಅವುಗಳನ್ನು ತಕ್ಷಣ ತೆರವುಗೊಳಿಸಬೇಕು. ಹಾಗೆಯೇ ಬ್ಯಾರಿಕೇಡ್‍ಗಳು ರಸ್ತೆ ಸಂಚಾರಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಮೆಟ್ರೋ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವೆಂಕಟಂ ಕಫೆ ಬಳಿ ಹೊರವರ್ತುಲ ಸರ್ವಿಸ್ ರಸ್ತೆಯ ಎರಡೂ ಬದಿಗಳನ್ನು ಮುಚ್ಚಲಾಗಿದೆ. ಇದರಿಂದ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ ಕನಿಷ್ಠ ಒಂದು ಲೇನ್‍ಅನ್ನು ಸಂಚಾರಕ್ಕೆ ತೆರೆಯಬೇಕು. ಬಳ್ಳಾರಿ ರಸ್ತೆಯ ಎಸ್ಟೀಮ್ ಮಾಲ್ ಬಳಿ ಸರ್ವಿಸ್ ರಸ್ತೆಗೆ ಸೂಕ್ತ ಪ್ರವೇಶ ಹಾಗೂ ನಿರ್ಗಮನ ವ್ಯವಸ್ಥೆ ಕಲ್ಪಿಸಿ, ಎರಡೂ ಬದಿಗಳಲ್ಲೂ ‘ಬಸ್ ಮಾರ್ಗ’ ವ್ಯವಸ್ಥೆಗೆ ಅಗತ್ಯವಾದ ಜಾಗ ಒದಗಿಸಬೇಕು ಎಂದು ಅವರು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕೊಡಿಗೇಹಳ್ಳಿ ಜಂಕ್ಷನ್ ಬಳಿ 2021ರಿಂದ ಪೂರ್ಣಗೊಳ್ಳದೇ ಮುಂದುವರೆದಿರುವ ಮೆಟ್ರೋ ಕಾಮಗಾರಿಯಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಒಂದು ಮೆಟ್ರೋ ಪಿಲ್ಲರ್ ಹಾಕಲು ಎರಡು ವರ್ಷ ತೆಗೆದುಕೊಂಡ ಅಧಿಕಾರಿಗಳು. ಎರಡು ತಿಂಗಳಲ್ಲಿ ಆಗುವ ಕೆಲಸಕ್ಕೆ ಎರಡು ವರ್ಷ ಏಕೆ ಬೇಕು? ಮೆಟ್ರೋ ಕಾಮಗಾರಿ ಶೀಘ್ರ ಮುಗಿಸಲು ಇರುವ ಸಮಸ್ಯೆ ಏನು ಎಂದು ಅಧಿಕಾರಿಗಳನ್ನು ಅವರು ಪ್ರಶ್ನಿಸಿದರು.

ಇದೇ ವೇಳೆ ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್, ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ರವಿಶಂಕರ್, ಬಿಡಬ್ಲ್ಯೂಎಸ್‍ಎಸ್‍ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಹಾಗೂ ಬಿಡಿಎ ಅಧಿಕಾರಿಗಳು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News