GBA | ನಾಲ್ಕು ಕ್ಷೇತ್ರಗಳಲ್ಲಿ ನವೆಂಬರ್ ಅಂತ್ಯದೊಳಗೆ ಹೊಸ ಟೆಂಡರ್ನಂತೆ ಘನತ್ಯಾಜ್ಯ ನಿರ್ವಹಣೆ : ಕೃಷ್ಣಬೈರೇಗೌಡ
‘ಜಿಪಿಎಸ್ ದತ್ತಾಂಶ ಪರಿಶೀಲಿಸಿ ಗುತ್ತಿಗೆದಾರರಿಗೆ ಹಣ’
ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಪ್ರಾಥಮಿಕ ಸಂಗ್ರಹಣೆಗಾಗಿ ರೂಪಿಸಿರುವ ಹೊಸ ಟೆಂಡರ್ ಗಳ ಪೈಕಿ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ನವೆಂಬರ್ ತಿಂಗಳ ಅಂತ್ಯದೊಳಗೆ ಕಾರ್ಯಾರಂಭ ಮಾಡುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಬಿಎ ವ್ಯಾಪ್ತಿಯಲ್ಲಿ ಘನತ್ಯಾಜ್ಯದ ಪ್ರಾಥಮಿಕ ಸಂಗ್ರಹಣೆ ಕುರಿತು ವಿಕಾಸಸೌಧದ ಕಚೇರಿಯಲ್ಲಿ ಶನಿವಾರ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹೊಸದಾಗಿ ರೂಪಿಸಿರುವ 33 ಘನತ್ಯಾಜ್ಯ ನಿರ್ವಹಣಾ ಪ್ಯಾಕೇಜ್ಗಳ ಪೈಕಿ ಮೊದಲ ಹಂತದಲ್ಲಿ ಐದು ಪ್ಯಾಕೇಜ್ಗಳಿಗೆ ಆದೇಶ ನೀಡಲಾಗಿದೆ ಎಂದರು.
ಗೋವಿಂದರಾಜನಗರ, ಮಹಾಲಕ್ಷ್ಮೀ ಲೇಔಟ್, ವಿಜಯನಗರ ಹಾಗೂ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಹೊಸ ಟೆಂಡರ್ ಅಡಿಯಲ್ಲಿ ಕಾರ್ಯಾರಂಭ ಮಾಡಲು ಅಗತ್ಯ ಸಿದ್ದತೆಗಳು ಅಂತಿಮ ಹಂತದಲ್ಲಿದ್ದು, ನವೆಂಬರ್ ತಿಂಗಳ ಅಂತ್ಯದೊಳಗೆ ಕಾರ್ಯಾರಂಭ ಮಾಡಲು ಮತ್ತು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಕಾರ್ಯಾರಂಭ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.
ಹೊಸ ಗುತ್ತಿಗೆ ಆರಂಭವಾದ ಬಳಿಕ ಜಿಪಿಎಸ್ ದತ್ತಾಂಶದ ಆಧಾರದ ಮೇಲೆಯೇ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಬೇಕು. ಕಸದ ಗಾಡಿಗಳಲ್ಲಿ ಜಿಪಿಎಸ್ ವ್ಯವಸ್ಥೆ ಇಲ್ಲದಿದ್ದರೆ, ಗುತ್ತಿಗೆದಾರರಿಗೆ ಆ ದಿನದ ಬಿಲ್ ಸಂದಾಯವಾಗಬಾರದು, ಬದಲಿಗೆ ಅಂತಹ ಗುತ್ತಿಗೆದಾರರಿಗೆ ದಂಡ ವಿಧಿಸಬೇಕು. ಈ ಎಲ್ಲಾ ನಿಯಮಗಳ ಆಧಾರದಲ್ಲಿ ಸಿಸ್ಟಂ ಜನರೇಟೆಡ್ ಬಿಲ್ ಬರುವಂತಹ ವ್ಯವಸ್ಯೆ ಜಾರಿಯಾಗಬೇಕು. ಈ ಬಗ್ಗೆ ಆಯಾ ನಗರ ಪಾಲಿಕೆಗಳ ಅಧಿಕಾರಿಗಳು ಸಮರ್ಪಕವಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.
ನಗರ ಪಾಲಿಕೆ ಆಯುಕ್ತರು ಈ ವ್ಯವಸ್ಥೆಯ ಅನುಷ್ಠಾನದ ಕುರಿತು ಸಮರ್ಪಕವಾಗಿ ಮೇಲ್ವಿಚಾರಣೆ ನಡೆಸಬೇಕು. ಹೊಸ ವ್ಯವಸ್ಥೆಯ ಕಾರ್ಯವಿಧಾನದ ಬಗ್ಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸಂಪೂರ್ಣ ಮಾಹಿತಿ ನೀಡಬೇಕು. ಹೊಸ ಗುತ್ತಿಗೆಗೆ ಸಂಬಂಧಿಸಿದಂತೆ ಸಾಫ್ಟ್ವೇರ್ ಈಗಾಗಲೇ ಸಿದ್ಧವಾಗಿದ್ದು, ಅದರ ಕಾರ್ಯವಿಧಾನದ ಕುರಿತು ಪ್ರಾತ್ಯಕ್ಷಿಕೆ ನೀಡಿಬೇಕು. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಘನತ್ಯಾಜ್ಯ ಸಂಗ್ರಹಣೆಗೆ ಸಂಬಂಧಿಸಿದಂತೆ ಕಾರ್ಯಾರಂಭವಾಗುತ್ತಿರುವ 4 ಪ್ಯಾಕೇಜ್ಗಳ ಗುತ್ತಿಗೆದಾರರು ಈಗಾಗಲೇ ವಾಹನಗಳನ್ನು ಖರೀದಿಸಲಾಗಿದ್ದು, ಅದಕ್ಕೆ ಬೇಗಾದ ಫ್ಯಾಬ್ರಿಕೇಷನ್ ತ್ವರಿತವಾಗಿ ಮಾಡಿಕೊಳ್ಳಬೇಕು. ಇದೇ ತಿಂಗಳಿನಿಂದ ಅವುಗಳ ಮೂಲಕ ಸಂಗ್ರಹಣಾ ಕಾರ್ಯ ಆರಂಭಿಸಬೇಕು. ಎಲ್ಲಾ ವಾಹನಗಳಿಗೂ ಜಿಪಿಎಸ್ ಅಳವಡಿಕೆ ಕಡ್ಡಾಯವಾಗಿರಬೇಕು. ವಾಹನ್ ಪೋರ್ಟಲ್ ಹಾಗೂ ಇನ್ವಾಯ್ಸ್ ವ್ಯವಸ್ಥೆಯ ಮೂಲಕ ವಾಹನಗಳ ಕಾರ್ಯನಿರ್ವಹಣೆಯ ಸ್ಥಿತಿಯನ್ನು ಪರಿಶೀಲಿಸಬೇಕು ಎಂದು ಕೃಷ್ಣ ಬೈರೇಗೌಡ ಹೇಳಿದರು.
ಘನತ್ಯಾಜ್ಯ ಸಂಗ್ರಹಣೆಗೆ ಬಳಸುವ ಎಲ್ಲಾ ವಾಹನಗಳಿಗೆ ಸೂಕ್ತ ಸ್ಟಿಕ್ಕರ್ಗಳನ್ನು ಅಳವಡಿಸಿ, ಬ್ರ್ಯಾಂಡಿಂಗ್ ಮಾಡಬೇಕು. ಪ್ರತಿಯೊಂದು ವಾಹನದಲ್ಲೂ ಏಕರೂಪತೆ ಇರಬೇಕು. ಸಿಬ್ಬಂದಿಗೆ ಹೊಸ ಸಮವಸ್ತ್ರಗಳನ್ನು ಒದಗಿಸಬೇಕು. ಎಲ್ಲಾ ಸಿಬ್ಬಂದಿಯನ್ನು ಸಜ್ಜುಗೊಳಿಸಿ, ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ಪರಿಣಾಮಕಾರಿಯಾಗಿ ಕಾರ್ಯಾರಂಭ ಮಾಡಬೇಕು ಎಂದು ಕೃಷ್ಣ ಬೈರೇಗೌಡ ಸೂಚಿಸಿದರು.
ನಗರದಲ್ಲಿ ಬ್ಲ್ಯಾಕ್ ಸ್ಪಾಟ್ಗಳ ಸಮಸ್ಯೆಗೆ ಸಂಪೂರ್ಣ ಕಡಿವಾಣ ಹಾಕಬೇಕು. ವಿನೂತನ ಕ್ರಮಗಳನ್ನು ಕೈಗೊಂಡು ಬ್ಲ್ಯಾಕ್ ಸ್ಪಾಟ್ಗಳನ್ನು ನಿರ್ಮೂಲನೆ ಮಾಡಲು ಆದ್ಯತೆ ನೀಡಬೇಕು. ರಸ್ತೆ ಬದಿ ಕಸ ಬಿಸಾಡಿ ಬ್ಲಾಕ್ ಸ್ಪಾಟ್ಗಳನ್ನಾಗಿ ಮಾಡುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕೃಷ್ಣ ಬೈರೇಗೌಡ ಸೂಚಿಸಿದರು.
ಹೊಸ ಟೆಂಡರ್ ಅನುಷ್ಠಾನದ ಸಂದರ್ಭದಲ್ಲಿ ನಾಗರಿಕರಿಗೆ ಸೂಕ್ತ ಮಾಹಿತಿ ತಲುಪಿಸುವ ಸಂವಹನ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು. ಐಇಸಿ (ಮಾಹಿತಿ, ಶಿಕ್ಷಣ ಮತ್ತು ಸಂವಹನ) ಚಟುವಟಿಕೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಹೊಸ ಟೆಂಡರ್ಗಳನ್ನು ಆರಂಭಿಸುವ ಮುನ್ನ ಗುತ್ತಿಗೆದಾರರು ಅಗತ್ಯವಿರುವ ಎಲ್ಲಾ ರೀತಿಯ ಸಿದ್ಧತೆಗಳನ್ನು ಪೂರ್ಣಗೊಳಿಸಬೇಕು. ಕಾರ್ಯಾರಂಭದ ಆರಂಭಿಕ ಹಂತದಲ್ಲಿಯೇ ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ, ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸಬೇಕು. ನಗರದ ಕಸದ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿವಾರಿಸುವ ನಿಟ್ಟಿನಲ್ಲಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಕೃಷ್ಣ ಬೈರೇಗೌಡ ನಿರ್ದೇಶನ ನೀಡಿದರು.
ಜಿಬಿಎ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ರೂಪಿಸಿರುವ ಒಟ್ಟು 33 ಪ್ಯಾಕೇಜ್ಗಳ ಪೈಕಿ 5 ಪ್ಯಾಕೇಜ್ಗಳಿಗೆ ಈಗಾಗಲೇ ಕಾರ್ಯಾದೇಶ ನೀಡಲಾಗಿದೆ. 13 ಪ್ಯಾಕೇಜ್ಗಳಿಗೆ ಗುತ್ತಿಗೆ ಒಪ್ಪಿಗೆ ಪತ್ರಗಳನ್ನು ನೀಡಲಾಗಿದ್ದು, 10 ಪ್ಯಾಕೇಜ್ಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಸರಕಾರದ ಅನುಮೋದನೆಗಾಗಿ ಕಳುಹಿಸಲಾಗಿದೆ. ಬಾಕಿ 5 ಪ್ಯಾಕೇಜ್ಗಳಲ್ಲಿ 1 ಪ್ಯಾಕೇಜ್ ಮೌಲ್ಯಮಾಪನ, 2 ಪ್ಯಾಕೇಜ್ ಹೈಕೋರ್ಟ್, 1 ಪ್ಯಾಕೇಜ್ ಅಪೀಲು ಹಾಗೂ 1 ಪ್ಯಾಕೇಜ್ ನ್ಯಾಯಾಲಯದ ಆದೇಶದ ಬಳಿಕ ಟೆಂಡರ್ ಕರೆಯಲಾಗುವುದು ಎಂದು ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್.ರಮೇಶ್, ಪೊಮ್ಮಲ ಸುನೀಲ್ ಕುಮಾರ್, ಶಿಲ್ಪಾ ನಾಗ್, ರಮೇಶ್ ಕೆ.ಎನ್., ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಸಿಇಒ ಕರೀಗೌಡ, ಜಿಬಿಎ ಅಪರ ಆಯುಕ್ತ ಲೋಖಂಡೆ ಸ್ನೇಹಲ್ ಸುಧಾಕರ್, ಮುಖ್ಯ ಇಂಜಿನಿಯರ್ಗಳಾದ ಲೋಕೇಶ್, ವೆಂಕಟಾ ಚಲಪತಿ ಮತ್ತಿತರರು ಉಪಸ್ಥಿತರಿದ್ದರು.