ಪಿಜಿ ವೈದ್ಯಕೀಯ: ಮೊದಲ ಸುತ್ತಿನ ಫಲಿತಾಂಶ ಪ್ರಕಟ, 3,268 ಸೀಟು ಹಂಚಿಕೆ
ಬೆಂಗಳೂರು : ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಪ್ರಕಟಿಸಿದ್ದು, ಪ್ರವೇಶ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಈ ಕುರಿತು ಶನಿವಾರ ಪ್ರಕಟಣೆ ನೀಡಿರುವ ಅವರು, ಈ ಸುತ್ತಿನಲ್ಲಿ ಒಟ್ಟು 4,388 ಸೀಟುಗಳ ಪೈಕಿ 3,268 ಸೀಟು ಹಂಚಿಕೆಯಾಗಿವೆ. ಸೀಟು ಹಂಚಿಕೆಯಾದವರು ನ.11ರವರೆಗೆ ಆಯ್ಕೆ ದಾಖಲಿಸಲು ಅವಕಾಶ ನೀಡಲಾಗಿದೆ.
ಆಯ್ಕೆ 1 ಮತ್ತು 2 ದಾಖಲಿಸಿದವರು ನ.11ರವರೆಗೆ ಚಲನ್ ಡೌನ್ಲೋಡ್ ಮಾಡಿಕೊಂಡು ನ.12ರೊಳಗೆ ಶುಲ್ಕ ಪಾವತಿಸಬೇಕು ಎಂದು ಅವರು ತಿಳಿಸಿದ್ದಾರೆ. ಆಯ್ಕೆ-1 ದಾಖಲಿಸಿದವರು, ಶುಲ್ಕ ಪಾವತಿ ನಂತರ ನ.13ರವರೆಗೆ ಕೆಇಎ ಕಚೇರಿಯಲ್ಲಿ ಮೂಲ ದಾಖಲೆ ಸಲ್ಲಿಸಿದ ನಂತರ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಂಡು, ನ.14ರೊಳಗೆ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಅವರು ವಿವರಿಸಿದ್ದಾರೆ.