ಕೋಳಿ ಸಾಕಾಣಿಕೆದಾರರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ನ.25ಕ್ಕೆ ವಿಧಾನಸೌಧ ಚಲೋ : ವೆಂಕಟರೆಡ್ಡಿ
ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ಕೋಳಿ ಸಾಕಾಣಿಕೆದಾರರ ಸಾಕಾಣಿಕೆ ವೆಚ್ಚ ಹೆಚ್ಚಿಸಿ, ಸರಕಾರ ಅನುಮೋದಿಸಿರುವ ದರವನ್ನು ಜಾರಿಗೊಳಿಸುವಂತೆ ಆಗ್ರಹಿಸಿ ನ.25ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಕೋಳಿ ಸಾಕಾಣಿಕೆದಾರರ ರೈತ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ವೆಂಕಟರೆಡ್ಡಿ ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.25ರ ಸಂಜೆಯಿಂದ ರಾಜ್ಯಾದ್ಯಂತ ಕೋಳಿ ಮರಿಗಳ ಸ್ವೀಕಾರ ಹಾಗೂ ಕೋಳಿ ಪೂರೈಕೆಯನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು. ಕೆಲ ವರ್ಷಗಳಿಂದ ಕೋಳಿ ಸಾಕಾಣಿಕೆ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ. ಆದರೆ 2021ರಲ್ಲಿ ನಿಗದಿಪಡಿಸಿದ ಕನಿಷ್ಠ ಸಾಕಾಣಿಕೆ ವೆಚ್ಚವನ್ನು ಪ್ರತಿ ಕೆ.ಜಿ.ಗೆ 6.20ರೂ.ನಲ್ಲೇ ಉಳಿಸಲಾಗಿದೆ. ಇದನ್ನು ಕನಿಷ್ಠ 20ರೂ.ಗೆ ಹೆಚ್ಚಿಸಬೇಕು ಎಂದರು.
ಕೋಳಿ ಸಾಕಾಣಿಕೆ ರೈತರ ಹೋರಾಟದ ಹಿನ್ನೆಲೆಯಲ್ಲಿ ಹಿಂದಿನ ಸರಕಾರದ ಅವಧಿಯಲ್ಲಿ ಹಲವು ಸುತ್ತಿನ ಮಾತುಕತೆ ನಡೆಸಿ, ತಾತ್ಕಾಲಿಕವಾಗಿ ಪ್ರತಿ ಕೆ.ಜಿ.ಗೆ 10 ರೂ. ಕನಿಷ್ಠ ಸಾಕಾಣಿಕೆ ವೆಚ್ಚ ನಿಗದಿಪಡಿಸುವ ಪ್ರಸ್ತಾವಕ್ಕೆ ಅನುಮೋದನೆ ಪಡೆಯಲಾಗಿತ್ತು. ಆದರೆ ಆರು ತಿಂಗಳಾದರೂ ಈ ಆದೇಶ ಜಾರಿಯಾಗಿಲ್ಲ. ಇಂಟಿಗ್ರೇಷನ್ ಕಂಪೆನಿಗಳು ಸರಕಾರದ ಆದೇಶ ಬಂದಿಲ್ಲ ಎಂಬ ನೆಪದಲ್ಲಿ ರೈತರಿಗೆ ನಿಗದಿತ ಸಾಕಾಣಿಕೆ ವೆಚ್ಚ ಪಾವತಿಸುತ್ತಿಲ್ಲ ಎಂದು ವೆಂಕಟರೆಡ್ಡಿ ಆರೋಪಿದರು.
ಉಪಾಧ್ಯಕ್ಷ ಯಶವಂತ ಟಿ. ಮಾತನಾಡಿ, ಮೇ 2026ರಲ್ಲಿ ಸರಕಾರ ಅನುಮೋದಿಸಿರುವ ಪ್ರತಿ ಕೆ.ಜಿ.ಗೆ 10 ರೂ. ಕನಿಷ್ಠ ಸಾಕಾಣಿಕೆ ದರವನ್ನು ರೈತರಿಗೆ ಪಾವತಿಸುವಂತೆ ಪಶುಸಂಗೋಪನಾ ಆಯುಕ್ತರು ಕೂಡಲೇ ಇಂಟಿಗ್ರೇಷನ್ ಕಂಪೆನಿಗಳಿಗೆ ನಿರ್ದೇಶನ ನೀಡಬೇಕು. ಕುಕ್ಕುಟ ಉದ್ಯಮದ ನಿಯಂತ್ರಣ ಮತ್ತು ಅಭಿವೃದ್ಧಿಗಾಗಿ ಕರ್ನಾಟಕ ಕುಕ್ಕುಟ ನಿಯಂತ್ರಣ ಹಾಗೂ ಅಭಿವೃದ್ಧಿ ಮಸೂದೆ-2022 ಅನ್ನು ಜಾರಿಗೊಳಿಸಬೇಕು. ಕೋಳಿ ಸಾಕಾಣಿಕೆಯನ್ನು ಕೃಷಿ ಎಂದು ಘೋಷಿಸಲು ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿದರು.
ಕೆಎಂಎಫ್ ಮಾದರಿಯಲ್ಲಿ ಕೋಳಿ ಸಾಕಾಣಿಕೆ ಸಹಕಾರಿ ಮಹಾಮಂಡಳವನ್ನು ಅಭಿವೃದ್ಧಿಪಡಿಸಬೇಕು. ಸರಕಾರ ಕೂಡಲೇ ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ನ.25ರಿಂದ ಕೋಳಿ ಮರಿಗಳ ಸ್ವೀಕಾರ ಮತ್ತು ಕೋಳಿ ಪೂರೈಕೆ ಸ್ಥಗಿತಗೊಳಿಸಿ ಹೋರಾಟ ಮುಂದುವರಿಸಲಾಗುವುದು. ಇದರಿಂದ ಕೋಳಿ ಮಾಂಸ ಹಾಗೂ ಮೊಟ್ಟೆ ಗ್ರಾಹಕರಿಗೆ ಉಂಟಾಗುವ ಅನಾನುಕೂಲಕ್ಕೆ ರಾಜ್ಯ ಸರಕಾರವೇ ಹೊಣೆ ಎಂದು ಯಶವಂತ ಎಚ್ಚರಿಸಿದರು.