ಬೆಂಗಳೂರ : ರಾಜಧಾನಿ ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ಮತ್ತೊಂದು ಮೈಲುಗಲ್ಲಾಗಲಿರುವ ‘ನಮ್ಮ ಮೆಟ್ರೋ' ಪಿಂಕ್ ಲೈನ್(ಗುಲಾಬಿ ಮಾರ್ಗ)ನ 7.5 ಕಿ.ಮೀ. ಗಳ ಎತ್ತರಿಸಿದ ಮಾರ್ಗವು ನ.13 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ವಿದ್ಯುಕ್ತವಾಗಿ ಲೋಕಾರ್ಪಣೆಗೊಳ್ಳಲಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಬುಧವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಳೇನ ಅಗ್ರಹಾರದಿಂದ-ತಾವರೆಕೆರೆ (ಸುದ್ದುಗುಂಟೆಪಾಳ್ಯ) ನಿಲ್ದಾಣದವರೆಗಿನ ಈ ಹೊಸ ಮಾರ್ಗವು ನ.14ರ ಬೆಳಗ್ಗೆ 6 ಗಂಟೆಯಿಂದ ಸಂಪೂರ್ಣವಾಗಿ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಎಂದು ತಿಳಿಸಿದರು.

ನ.13 ರಂದು ಮಧ್ಯಾಹ್ನ 12.30ಕ್ಕೆ ಡೈರಿ ಸರ್ಕಲ್ ಬಳಿಯ ಅಗ್ನಿಶಾಮಕ ದಳದ ಆವರಣಕ್ಕೆ ಆಗಮಿಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಅಲ್ಲೇ ಸಮೀಪವಿರುವ ತಾವರೆಕೆರೆ ಸುದ್ದುಗುಂಟೆಪಾಳ್ಯ ಮೆಟ್ರೋ ನಿಲ್ದಾಣದಲ್ಲಿ ಈ ಹೊಸ 7.5 ಕಿ.ಮೀ. ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

ಉದ್ಘಾಟನೆಯ ನಂತರ ಪ್ರಧಾನಿ, ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯರು ಅದೇ ಮೆಟ್ರೋ ರೈಲಿನ ಮೂಲಕ ತಾವರೆಕೆರೆ ನಿಲ್ದಾಣದಿಂದ ಐಐಎಂಬಿ ನಿಲ್ದಾಣದವರೆಗೆ ಪ್ರಯಾಣಿಸಲಿದ್ದಾರೆ. ತದನಂತರ ಐಐಎಂಬಿ ಆಡಿಟೋರಿಯಂನಲ್ಲಿ ಆಯೋಜಿಸಲಾಗಿರುವ ಬೃಹತ್ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಪ್ರಧಾನಿಗೆ ಮನವಿ: ಮೆಟ್ರೋ-1ನೇ ಹಂತದಿಂದ 3ನೇ ಹಂತದವರೆಗಿನ ಒಟ್ಟು 77,891 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಸರಕಾರವೆ 65,291 ಕೋಟಿ ರೂ. (ಶೇ. 84) ಭರಿಸುತ್ತಿದ್ದು, ಕೇಂದ್ರ ಸರಕಾರದ ಪಾಲು ಕೇವಲ 12,600 ಕೋಟಿ ರೂ. (ಶೇ. 16) ಆಗಿದೆ. ಮೆಟ್ರೋ ಮೊದಲ ಹಂತದಲ್ಲಿ ಶೇ.80 ರಷ್ಟಿದ್ದ ಕೇಂದ್ರದ ಬಂಡವಾಳ ಹೂಡಿಕೆ, ಎರಡನೇ ಹಂತದಲ್ಲಿ ಕ್ರಮೇಣ ಶೇ.16ಕ್ಕೆ ಮತ್ತು ಪ್ರಸ್ತುತ ಶೇ.14ಕ್ಕೆ ಕುಸಿದಿದೆ ಎಂದು ಕೃಷ್ಣ ಬೈರೇಗೌಡ ವಿವರಿಸಿದರು.

ಅಂತರ್‍ರಾಷ್ಟ್ರೀಯ ಸಂಸ್ಥೆಗಳಿಂದ ಪಡೆಯುವ ಸಾಲವನ್ನು ಕೇಂದ್ರದ ಮೂಲಕ ಪಡೆಯಲಾಗುತ್ತಿದ್ದರೂ, ರೂಪಾಯಿ ಮೌಲ್ಯ ಕುಸಿತದ ಹೆಚ್ಚುವರಿ ಹೊರೆ ಹಾಗೂ ಸಾಲದ ಪ್ರತಿಯೊಂದು ಪೈಸೆಯನ್ನು ರಾಜ್ಯ ಸರಕಾರವೇ ಮರುಪಾವತಿಸುತ್ತಿದೆ. ಜೊತೆಗೆ ಭೂಸ್ವಾಧೀನದ ಶೇ.100ರಷ್ಟು ವೆಚ್ಚ ಹಾಗೂ ಯೋಜನೆಯ ಅನುಮೋದನೆ ವಿಳಂಬದಿಂದ ಹೆಚ್ಚಾಗುವ ನಿರ್ಮಾಣ ವೆಚ್ಚವನ್ನು ರಾಜ್ಯವೇ ಭರಿಸಬೇಕಾಗಿದೆ ಎಂದು ಅವರು ತಿಳಿಸಿದರು.

ಮೆಟ್ರೋದ 1046 ಕೋಟಿ ರೂ. ನಷ್ಟವನ್ನು ಈಗಾಗಲೇ ರಾಜ್ಯವೇ ಸರಿದೂಗಿಸಿದೆ. ಇನ್ನೂ 52 ಕೋಟಿ ರೂ. ನಷ್ಟ ಸಾಲ ಭರಿಸಿಕೊಡುವುದು ಬಾಕಿ ಇದೆ ಎಂದು ಅವರು ಹೇಳಿದರು.

ಬೆಂಗಳೂರು ನಗರವು ದೇಶದಲ್ಲೇ 2ನೇ ಅತಿ ಹೆಚ್ಚು ಜಿಎಸ್ಟಿ ತಂದುಕೊಡುವ ಮತ್ತು ಭಾರಿ ಪ್ರಮಾಣದ ವಿದೇಶಿ ವಿನಿಮಯ ಈಡೇರಿಸುವ ಕೇಂದ್ರವಾಗಿದೆ. ಹೀಗಾಗಿ ದೇಶದ ಆರ್ಥಿಕತೆಗೆ ಪ್ರಮುಖ ಕೊಡುಗೆ ನೀಡುತ್ತಿರುವ ಬೆಂಗಳೂರಿನ ಮೂಲಸೌಕರ್ಯಕ್ಕೆ ಕೇಂದ್ರ ಸರಕಾರ ತನ್ನ ಹೂಡಿಕೆಯ ಪಾಲನ್ನು ಹೆಚ್ಚಿಸಬೇಕು ಎಂದು ಕಾರ್ಯಕ್ರಮದ ವೇಳೆ ಪ್ರಧಾನಿ ಮೋದಿಯವರಿಗೆ ಖುದ್ದಾಗಿ ಮನವಿ ಸಲ್ಲಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ನಗರದ ವಾಹನ ದಟ್ಟಣೆಗೆ ಮುಕ್ತಿ: ಪಿಂಕ್ ಲೈನ್ ನ ಈ ಆರಂಭಿಕ ಭಾಗವು ಬನ್ನೇರುಘಟ್ಟ ರಸ್ತೆಯ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ವಿಶೇಷವಾಗಿ, ಜಯದೇವ ಮೆಟ್ರೋ ನಿಲ್ದಾಣದಲ್ಲಿ ಎಲೆಕ್ಟ್ರಾನಿಕ್ ಸಿಟಿ ಮತ್ತು ಸಿಟಿ ಮಾರ್ಗಗಳಿಗೆ ಸಂಪರ್ಕ ಸೌಲಭ್ಯವಿದೆ. ನಾಗರಿಕರು ಸಿಲ್ಕ್ ಬೋರ್ಡ್, ಎಚ್‍ಎಸ್‍ಆರ್ ಲೇಔಟ್, ಜಯನಗರ, ಮಜೆಸ್ಟಿಕ್ ಹಾಗೂ ವೈಟ್‍ಫೀಲ್ಡ್ ಸೇರಿದಂತೆ ನಗರದ ಯಾವುದೇ ಭಾಗಕ್ಕೆ ಸುಲಭವಾಗಿ ಪ್ರಯಾಣಿಸಬಹುದು ಎಂದು ಕೃಷ್ಣ ಬೈರೇಗೌಡ ಹೇಳಿದರು.

ಆರಂಭಿಕ ಹಂತದಲ್ಲಿ ಈ ಮಾರ್ಗದಲ್ಲಿ 5 ಮೀಸಲು ರೈಲುಗಳು ಕಾರ್ಯನಿರ್ವಹಿಸಲಿದ್ದು, ಪ್ರತಿ 8 ನಿಮಿಷಕ್ಕೊಂದು ರೈಲು ಸಂಚರಿಸಲಿದೆ. ಈ 7.5 ಕಿ.ಮೀ ಮಾರ್ಗ ಸೇರ್ಪಡೆಯೊಂದಿಗೆ ಬೆಂಗಳೂರಿನ ಒಟ್ಟು ಮೆಟ್ರೋ ಜಾಲವು 103 ಕಿ.ಮೀ. ತಲುಪಲಿದೆ. ಮುಂದಿನ ಒಂದೂವರೆ ವರ್ಷದ ಅವಧಿಯಲ್ಲಿ ಮೆಟ್ರೋ ಜಾಲವನ್ನು 170 ಕಿ.ಮೀ.ಗೆ ವಿಸ್ತರಿಸುವ ಗುರಿಯನ್ನು ಸರಕಾರ ಹೊಂದಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

ತಾವರೆಕೆರೆಯಿಂದ ನಾಗವಾರದವರೆಗಿನ 13.7 ಕಿ.ಮೀ. ಭೂಗತ ಮಾರ್ಗ ಪೂರ್ಣಗೊಂಡಾಗ ಪಿಂಕ್ ಲೈನ್ ಒಟ್ಟು 21.2 ಕಿ.ಮೀ. ತಲುಪಲಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್‍ನಿಂದ ಕೆ.ಆರ್.ಪುರವರೆಗಿನ 19.75 ಕಿ.ಮೀ ಮತ್ತು ಹೆಬ್ಬಾಳದಿಂದ ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ಮಾರ್ಗಗಳನ್ನು ಮುಂದಿನ ವರ್ಷವೇ ಮುಕ್ತಗೊಳಿಸುವ ಗುರಿ ಇದೆ ಎಂದು ಅವರು ಹೇಳಿದರು.

ಕೆ.ಆರ್.ಪುರದಿಂದ ಹೆಬ್ಬಾಳ ನಡುವಿನ ಸವಾಲಿನ ಮಾರ್ಗವನ್ನೂ ಪೂರ್ಣಗೊಳಿಸಿ, ಸಿಲ್ಕ್ ಬೋರ್ಡ್ ನಿಂದ ವಿಮಾನ ನಿಲ್ದಾಣ ವರೆಗಿನ ಒಟ್ಟು 59 ಕಿ.ಮೀ ನೀಲಿ ಮಾರ್ಗ(ಬ್ಲೂ ಲೈನ್)ಸಂಪರ್ಕವನ್ನು ಶೀಘ್ರವೇ ಕಲ್ಪಿಸಲಾಗುವುದು. ಜೆ.ಪಿ.ನಗರ 4ನೆ ಹಂತದಿಂದ ಮೈಸೂರು ರಸ್ತೆ, ಮಾಗಡಿ ರಸ್ತೆ ದಾಟಿ ಹೆಬ್ಬಾಳಕ್ಕೆ ತಲುಪುವ 32 ಕಿ.ಮೀ ಮಾರ್ಗ ಹಾಗೂ ಹೊಸಹಳ್ಳಿಯಿಂದ ಕಡಬಗೆರೆವರೆಗಿನ 12.5 ಕಿ.ಮೀ (ಒಟ್ಟು 44.5 ಕಿ.ಮೀ) ಆರೆಂಜ್ ಲೈನ್(ಕಿತ್ತಳೆ ಮಾರ್ಗ)ಗೆ ಮುಂದಿನ 6 ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಿ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

ಸರ್ಜಾಪುರದಿಂದ ಹೆಬ್ಬಾಳದವರೆಗೆ 37.8 ಕಿ.ಮೀ. ಉದ್ದದ ರೆಡ್ ಲೈನ್(ಕೆಂಪು ಮಾರ್ಗ) ಯೋಜನೆಗೆ 2025ರ ಜನವರಿಯಲ್ಲಿಯೇ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಒಪ್ಪಿಗೆ ದೊರೆತ ತಕ್ಷಣ ಟೆಂಡರ್ ಕರೆಯಲಾಗುವುದು ಎಂದು ಅವರು ಹೇಳಿದರು.

‘ಅವಮಾನ ಮಾಡಿದ್ದು ಸಾಕು ರಾಜ್ಯದ ಪಾಲು ಕೊಡಿಸಲಿ’: ಕರ್ನಾಟಕ ತಲಾ ಆದಾಯದಲ್ಲಿ ಇಡೀ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಕೇಂದ್ರಕ್ಕೆ ತೆರಿಗೆ ಸಂದಾಯದಲ್ಲೂ ಎರಡನೇ ಸ್ಥಾನದಲ್ಲಿದೆ, ಇಡೀ ದೇಶದ ಎಲ್ಲ ರಾಜ್ಯದ ಜನತೆಗೂ ಉದ್ಯೋಗಾವಕಾಶ ನೀಡುತ್ತಿರುವ ರಾಜ್ಯ ದಿವಾಳಿಯಾಗುವುದು ಹೇಗೆ? ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಪ್ರಶ್ನಿಸಿದ್ದಾರೆ.

‘ಕರ್ನಾಟಕ ದಿವಾಳಿಯಾಗಿದೆ’ ಎಂಬ ವಿಪಕ್ಷ ನಾಯಕರ ಲೇವಡಿ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದ ಅವರು, ವಿಪಕ್ಷ ನಾಯಕರು ರಾಜಕೀಯಕ್ಕಾಗಿ ಕರ್ನಾಟಕವನ್ನು ಅಪಮಾನ ಮಾಡುವುದು ಬಿಟ್ಟು ಕೇಂದ್ರ ಸರಕಾರದಿಂದ ನಮಗೆ ಬರಬೇಕಾದ ನ್ಯಾಯಯುತ ತೆರಿಗೆ ಪಾಲನ್ನು ಕೊಡಿಸಲಿ, ಆ ನಂತರ ಮಾತನಾಡಲಿ ಎಂದು ಸವಾಲು ಹಾಕಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor