ಬೆಂಗಳೂರು : ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಕಂದಾಯ ಭೂಮಿಯಲ್ಲಿ ನಿರ್ಮಾಣವಾಗಿರುವ ವಸತಿ ಬಡಾವಣೆಗಳಲ್ಲಿ ಬಿ-ಖರಾಬು ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಉಳಿದ ಆಸ್ತಿಗಳಿಗೆ ಇ-ಸ್ವತ್ತು ನೀಡುವಂತೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್‌ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬುಧವಾರ ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಭೂಪರಿವರ್ತನೆ ಆಗಿರುವ ಮತ್ತು ಭೂಪರಿವರ್ತನೆ ಆಗದೇ ಇರುವ ಕಂದಾಯ ಜಮೀನುಗಳಲ್ಲಿ ನೋಂದಾಯಿತ ಕ್ರಯಪತ್ರ ಹೊಂದಿರುವ ನಿವೇಶನ ಮತ್ತು ಮನೆ ಮಾಲಕರಿಗೆ ಇ-ಸ್ವತ್ತು ನೀಡುವ ಕುರಿತಂತೆ ಸುದೀರ್ಘ ಸಮಾಲೋಚಿಸಿದರು.

ಇಂತಹ ಸ್ವತ್ತುಗಳಲ್ಲಿ ಬಿ ಖರಾಬು, ಅರಣ್ಯ ಹಾಗೂ ಸರಕಾರಿ ಭೂಮಿ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಇ-ಸ್ವತ್ತು ನೀಡಲು ಕ್ರಮ ವಹಿಸುವಂತೆ ಹಾಗೂ ಬಿ ಖರಾಬು ಇರುವ ಭೂಮಿಗೆ ಸಂಬಂಧಿಸಿದಂತೆ ಸಮಸ್ಯೆ ಪರಿಹರಿಸಲು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲು ತಿಳಿಸಿದರು.

ಜತೆಗೆ, ಬೆಂಗಳೂರು ನಗರ ಜಿಲ್ಲಾ ಪಂಚಾಯತಿಯಲ್ಲಿ ಇ-ಸ್ವತ್ತಿಗಾಗಿ ಸಲ್ಲಿಸಿರುವ ಸುಮಾರು 1.30 ಲಕ್ಷ ಅರ್ಜಿಗಳು ತಾಂತ್ರಿಕ ಕಾರಣಗಳಿಂದ ಇತ್ಯರ್ಥವಾಗದೆ ಬಾಕಿ ಇದ್ದು, ಇವುಗಳ ತ್ವರಿತ ವಿಲೇವಾರಿಗೆ, ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor