ಬೆಂಗಳೂರು : ‘ಪೌರ ಕಾರ್ಮಿಕರು ಸರಿಯಾಗಿ ಕೆಲಸಕ್ಕೆ ಹಾಜರಾಗದ ಕಾರಣ ನಾವು ಜನರಿಂದ ಬೈಸಿಕೊಳ್ಳುತ್ತಿದ್ದೇವೆ. ಕೆಲಸಕ್ಕೆ ಬಂದರೂ ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸದವರನ್ನು ಏಕೆ ಖಾಯಂ ಗೊಳಿಸಬೇಕು’ ಎಂದು ಸಚಿವ ಕೃಷ್ಣ ಭೈರೇಗೌಡ, ಖಾಯಮಾತಿಗೆ ಆಗ್ರಹಿಸಿ ಮನವಿ ನೀಡಲು ಬಂದ ಪೌರ ಕಾರ್ಮಿಕರನ್ನು ಪ್ರಶ್ನಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಶನಿವಾರ ನಗರದ ಹೊರಮಾವು, ಬಂಜಾರ ಲೇಔಟ್, ಅಗರ ಕೆರೆ, ಜಯಂತಿನಗರ, ರಾಮಮೂರ್ತಿನಗರ ಹಾಗೂ ಕಸ್ತೂರಿನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಚಿವ ಕೃಷ್ಣ ಭೈರೇಗೌಡ ಸ್ವಚ್ಛತೆ ಪರಿಶೀಲನೆ ನಡೆಸಿದರು.

ಈ ವೇಳೆ ಪೌರ ಕಾರ್ಮಿಕರ ಸಂಘಟನೆಯ ಪದಾಧಿಕಾರಿಗಳು, ಕೃಷ್ಣ ಭೈರೇಗೌಡ ಅವರಿಗೆ, ಕೆಲಸ ಖಾಯಂ ಗೊಳಿಸಬೇಕೆಂದು ಮನವಿ ಮಾಡಿತು. ಇದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಕೃಷ್ಣ ಭೈರೇಗೌಡ, ‘ಶೇ.30 ರಷ್ಟು ಪೌರ ಕಾರ್ಮಿಕರು ಕೆಲಸಕ್ಕೆ ಸರಿಯಾಗಿ ಹಾಜರಾಗುವುದೇ ಇಲ್ಲ. ಇನ್ನೂ ಕೆಲವರು ಬಂದರೂ ಮನೆ-ಮನೆಗೆ ತೆರಳಿ ಕಸ ಸಂಗ್ರಹಿಸುತ್ತಿಲ್ಲ. ಹೀಗಾಗಿ ಹಲವೆಡೆ ಜನ ಕಸವನ್ನು ರಸ್ತೆಗಳಿಗೆ ಎಸೆಯುವ ಸ್ಥಿತಿ ಇದೆ. ಪರಿಣಾಮ ನಗರದ ಹಲವೆಡೆ ಗಬ್ಬೆದ್ದು ನಾರುತ್ತಿದೆ’ ಎಂದು ಪೌರ ಕಾರ್ಮಿಕರ ವಿರುದ್ದವೇ ಅಸಮಾಧಾನ ಹೊರಹಾಕಿದರು.

ಸಚಿವ ಕೃಷ್ಣ ಭೈರೇಗೌಡ ಅವರ ಈ ವರ್ತನೆಗೆ ಪೌರ ಕಾರ್ಮಿಕರ ಸಂಘಟನೆಗಳ ಪದಾಧಿಕಾರಿಗಳು ಕಿಡಿಕಾರಿದ್ದು, ’ನಮ್ಮ ಮನವಿ ಸ್ವೀಕರಿಸಿ, ಸರಕಾರದ ಗಮನಕ್ಕೆ ತರುವ ಬದಲು ಕಾರ್ಮಿಕರ ವಿರುದ್ಧವೇ ಟೀಕೆ ಮಾಡಿದ್ದು ಸರಿಯಲ್ಲ’ ಎಂದು ಆಕ್ಷೇಪಿಸಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಇದೇ ವೇಳೆ ಸಚಿವ ಕೃಷ್ಣ ಬೈರೇಗೌಡ, ನಗರ ವಿವಿಧೆಡೆಯ ಸ್ವಚ್ಛತೆ, ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ, ರಸ್ತೆ ಹಾಗೂ ಪಾದಚಾರಿ ಮಾರ್ಗಗಳ ನಿರ್ವಹಣೆ, ರಾಜಕಾಲುವೆ, ಕೆರೆಗಳು, ವಿವಿಧ ಮೂಲಸೌಕರ್ಯ ಕಾಮಗಾರಿಗಳು ಹಾಗೂ ಸಾರ್ವಜನಿಕರಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಪರಿಶೀಲಿಸಿದರು.

ಸಚಿವರಿಗೆ ಶೋಭೆಯಲ್ಲ :

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಸಂವೇದನೆ ಇರುವ ವ್ಯಕ್ತಿ. ತಮ್ಮ ಕೆಲಸ ಖಾಯಮಾತಿಗೆ ಆಗ್ರಹಿಸಿ ಮನವಿ ಕೊಡಲು ಬಂದ ಸ್ವಚ್ಛತಾ ಕಾರ್ಮಿಕರನ್ನೇ ತರಾಟೆಗೆ ತೆಗೆದುಕೊಂಡಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಪೌರ ಕಾರ್ಮಿಕರ ಸಂಘದ ಮುಖಂಡ ಎಸ್.ಮೂರ್ತಿ ಟೀಕಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor