×
Ad

ಕೆಎಸ್‌ಸಿಎ ಚುನಾವಣೆ; ಶಾಂತಕುಮಾರ್ ನಾಮಪತ್ರ ಸಿಂಧುಗೊಳಿಸಿದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ

Update: 2025-12-03 20:17 IST

ಬೆಂಗಳೂರು : ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್ (ಕೆಎಸ್‌ಸಿಎ) ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಕೆ.ಎನ್‌. ಶಾಂತಕುಮಾರ್‌ ಅವರ ನಾಮಪತ್ರ ಸಿಂಧುಗೊಳಿಸಿ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಕೆಯಾಗಿದೆ.

ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿ ಆನಂತರ ನಾಮಪತ್ರ ಹಿಂಪಡೆದಿದ್ದ ಕಲ್ಪನಾ ವೆಂಕಟಾಚಾರ್‌ ಅವರು ಮೇಲ್ಮನವಿ ಸಲ್ಲಿಸಿದ್ದು, ಶಾಂತಕುಮಾರ್‌, ಚುನಾವಣಾಧಿಕಾರಿ, ಕೆಎಸ್‌ಸಿಎ ಮತ್ತು ಅಧ್ಯಕ್ಷ ಹುದ್ದೆಯ ಆಕಾಂಕ್ಷಿ ಹಾಗೂ ಭಾರತ ತಂಡ ಮಾಜಿ ವೇಗದ ಬೌಲರ್‌ ವೆಂಕಟೇಶ್‌ ಪ್ರಸಾದ್‌ ಅವರನ್ನು ಪ್ರತಿವಾದಿಗಳನ್ನಾಗಿಸಲಾಗಿದೆ.

ಬುಧವಾರ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ. ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಹಾಜರಾದ ಕಲ್ಪನಾ ಪರ ವಕೀಲೆ ಲಕ್ಷ್ಮೀ ಮೆನನ್ ಅವರು, ಮೇಲ್ಮನವಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದರು. ಆಗ ನ್ಯಾಯಪೀಠ, ಗುರುವಾರ ವಿಚಾರಣೆ ನಡೆಸುವುದಾಗಿ ತಿಳಿಸಿತು.

ಪ್ರಕರಣದ ಹಿನ್ನೆಲೆ:

ಕ್ರೀಡಾ ಕ್ಲಬ್‌ 200 ರೂ. ಚಂದಾ ಪಾವತಿಸಿಲ್ಲ ಎಂಬ ಕಾರಣಕ್ಕೆ ತಮ್ಮ ನಾಮಪತ್ರ ತಿರಸ್ಕರಿಸಿದ್ದ ಚುನಾವಣಾಧಿಕಾರಿ ಕ್ರಮ ಪ್ರಶ್ನಿಸಿ ಕೆ.ಎನ್‌. ಶಾಂತಕುಮಾರ್‌ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಕಳೆದ ಶನಿವಾರ ಪುರಸ್ಕರಿಸಿತ್ತು.

ಶಾಂತಕುಮಾರ್ ಅವರ ನಾಮಪತ್ರ ತಿರಸ್ಕರಿಸಿ ನವೆಂಬರ್ 24ರಂದು ಚುನಾವಣಾಧಿಕಾರಿ ಹೊರಡಿಸಿದ್ದ ಆದೇಶ ರದ್ದುಪಡಿಸಿದ್ದ ಏಕಸದಸ್ಯ ನ್ಯಾಯಪೀಠ, ನಿಗದಿತ ವೇಳಾಪಟ್ಟಿಯಂತೆ ಡಿಸೆಂಬರ್ 7ರಂದು ಕೆಎಸ್‌ಸಿಎ ಚುನಾವಣೆ ನಡೆಸಿ ಫಲಿತಾಂಶ ಪ್ರಕಟಿಸುವಂತೆ ನಿರ್ದೇಶಿಸಿತ್ತು. ಈ ಆದೇಶವನ್ನು ಮೇಲ್ಮನವಿಯಲ್ಲಿ ಪ್ರಶ್ನಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News