×
Ad

ಕೆಎಸ್ಸಾರ್ಟಿಸಿ ಟ್ರೇಡ್‍ಮಾರ್ಕ್ ವಿವಾದ; ಕೇರಳದ ಅರ್ಜಿ ವಜಾ: ಕರ್ನಾಟಕಕ್ಕೆ ಜಯ

Update: 2023-12-15 20:12 IST

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ‘ಕೆಎಸ್ಸಾರ್ಟಿಸಿ' ಎಂದು ಹೆಸರು ಬಳಸುತ್ತಿರುವುದನ್ನು ಪ್ರಶ್ನಿಸಿ ಕೇರಳ ಸಾರಿಗೆ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದ್ದು, ಪ್ರಸಕ್ತ ಹಾಗೂ ಮುಂಬರುವ ದಿನಗಳಲ್ಲಿ ಸಹ ‘ಕೆಎಸ್ಸಾರ್ಟಿಸಿ' ಹೆಸರನ್ನು ಬಳಸಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಯಾವುದೇ ಕಾನೂನು ಅಡಚಣೆ ಇಲ್ಲ ಎಂದು ಕೆಎಸ್ಸಾರ್ಟಿಸಿ ಮಾಹಿತಿ ನೀಡಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ‘ಕೆಎಸ್ಸಾರ್ಟಿಸಿ' ಎಂದು ಸಂಕ್ಷಿಪ್ತ ಬಳಕೆಗಾಗಿ ಟ್ರೇಡ್ ಮಾರ್ಕ್ ಪ್ರಮಾಣಪತ್ರ ನೀಡಲು ಅರ್ಜಿ ಸಲ್ಲಿಸಿತ್ತು. ಭಾರತ ಸರಕಾರದ ಟ್ರೇಡ್ ಮಾರ್ಕ್ ರಿಜಿಸ್ಟ್ರಿಯಿಂದ 2013ರಲ್ಲಿ ಟ್ರೇಡ್ ಮಾರ್ಕ್ ಪ್ರಮಾಣಪತ್ರಗಳನ್ನು ಸಂಸ್ಥೆಯು 1973ರ ನವೆಂಬರ್ 1ರಿಂದ ಬಳಸುತ್ತಿರುವುದಾಗಿ ಮಂಜೂರು ಮಾಡಲಾಗಿದೆ. ಭಾರತ ಸರಕಾರದ ರಿಜಿಸ್ಟ್ರಾರ್ ಆಫ್ ಕಾಪಿ ರೈಟ್ಸ್ ಅವರಿಂದ ‘ಕೆಎಸ್ಸಾರ್ಟಿಸಿ' ಲೋಗೋ ಮತ್ತು 'ಗಂಡಭೇರುಂಡ ಗುರುತು' ಬಳಕೆಗಾಗಿ ಕಾಪಿ ರೈಟ್ ಸಹ ಪಡೆಯಲಾಗಿದೆ.

ಇದಾದ ನಂತರ, ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಚೆನ್ನೈನಲ್ಲಿರುವ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿಯ ಮುಂದೆ ಇದನ್ನು ಪ್ರಶ್ನಿಸಿದೆ. ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸಂಸ್ಥೆಯು 42 ವರ್ಷಗಳಿಂದ ‘ಕೆಎಸ್ಸಾರ್ಟಿಸಿ' ಹೆಸರನ್ನು ಬಳಸುತ್ತಿರುವ ಬಗ್ಗೆ ತಿಳಿದಿದೆ. ಹೀಗಾಗಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪಡೆದಿರುವ ಟ್ರೇಡ್ ಮಾರ್ಕ್ ನೋಂದಣಿ ಅಮಾನ್ಯವಾಗಿದೆ ಎಂದು ಅರ್ಜಿ ಸಲ್ಲಿಸಲು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅರ್ಹರಾಗಿರುವುದಿಲ್ಲ ಎಂದು ಕೆಎಸ್ಸಾರ್ಟಿಸಿ ವಾದಿಸಿದೆ.

ಕೇರಳ ಸಾರಿಗೆ ಸಂಸ್ಥೆ ಕೂಡ 2019ರಲ್ಲಿ ನಮ್ಮ ರಾಜ್ಯದ ಕೆಎಸ್ಸಾರ್ಟಿಸಿ ಗಿಂತಲೂ ಹಿಂದಿನಿಂದಲೇ ಆ ಸಂಕ್ಷಿಪ್ತ ಹೆಸರನ್ನು ಬಳಸುತ್ತಿರುವ ಕುರಿತು ನೋಂದಣಿ ಪಡೆದುಕೊಂಡಿದೆ. ಕೇಂದ್ರ ಸರಕಾರವು ಐಪಿಎಬಿಯನ್ನು ರದ್ದುಗೊಳಿಸಿದ್ದು, ಐಪಿಎಬಿ ಮುಂದೆ ಬಾಕಿ ಉಳಿದಿದ್ದ ಪ್ರಕರಣಗಳನ್ನು ಚೆನ್ನೈನಲ್ಲಿರುವ ಮದ್ರಾಸ್ ಹೈಕೋರ್ಟ್‍ಗೆ ವರ್ಗಾಯಿಸಲಾಯಿತು. ಈ ಪ್ರಕರಣ ಮಂಗಳವಾರ ಮದ್ರಾಸ್ ಹೈಕೋರ್ಟ್ ಮುಂದೆ ಬಂದಿದೆ.

ಅರ್ಜಿ ವಿಚಾರಣೆ ವೇಳೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಕೆಎಸ್ಸಾರ್ಟಿಸಿ ಹೆಸರು ಬಳಕೆ ಮಾಡಲು ಯಾವುದೇ ಅಭ್ಯಂತರವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಮದ್ರಾಸ್ ಹೈಕೋರ್ಟ್ ಕೇರಳ ಆರ್ಟಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.

ಕೇರಳ ಆರ್ಟಿಸಿ ಸಲ್ಲಿಸಿದ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿರುವ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಸಾರ್ಟಿಸಿ) ಪ್ರಸಕ್ತ ಹಾಗೂ ಮುಂಬರುವ ದಿನಗಳಲ್ಲಿ ಸಹ ‘ಕೆಎಸ್ಸಾರ್ಟಿಸಿ' ಹೆಸರನ್ನು ಬಳಸಲು ಯಾವುದೇ ಕಾನೂನು ಅಡಚಣೆಯಿರುವುದಿಲ್ಲ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News