×
Ad

ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು: ಡಿ.ಕೆ.ಸುರೇಶ್ ವಾಗ್ದಾಳಿ

Update: 2025-06-07 18:18 IST

ಬೆಂಗಳೂರು : ಆರ್‌ ಸಿಬಿ ತಂಡ ಗೆದ್ದ ನಂತರ ಕುಮಾರಸ್ವಾಮಿ ಹಾಗೂ ಅವರ‌ ಪಕ್ಷ ಎಕ್ಸ್‌ನಲ್ಲಿ ಏನೇನು ಪೋಸ್ಟ್ ಹಾಕಿತ್ತು ಎಂಬುದನ್ನು ಮಾಧ್ಯಮಗಳು ರಾಜ್ಯದ ಜನತೆಗೆ ತೋರಿಸಬೇಕು‌. ಏಕೆಂದರೆ ಅವರು ಸುಳ್ಳು ಹೇಳುವುದರಲ್ಲಿ, ಮಾತುಗಳನ್ನು ತಿರುಗಿಸುವುದರಲ್ಲಿ ನಿಸ್ಸೀಮರು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಡಿ.ಕೆ.ಸುರೇಶ್,  ಕುಮಾರಸ್ವಾಮಿ ಹೇಳಿಕೆಗಳನ್ನು ನಾನು ಗಮನಿಸುತ್ತಿದ್ದೆ. ಅವರು ಒತ್ತಡದಲ್ಲಿದ್ದಾರೆ, ಆರೋಗ್ಯ ಸರಿಯಿಲ್ಲ ಎನಿಸುತ್ತಿದೆ. ಆರೋಗ್ಯದ ಕಡೆ ಗಮನ ಹರಿಸಿ ಈ ರಾಷ್ಟ್ರದ ಸೇವೆ ಮಾಡಲಿ. ಕುಮಾರಸ್ವಾಮಿ ಅವರ ಮಾತನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ. ಬೆಳಿಗ್ಗೆಯೊಂದು, ರಾತ್ರಿಯೊಂದು ಮಾತನಾಡುತ್ತಾರೆ ಎಂದು ಹೇಳಿದರು.

ಕಾಲ್ತುಳಿತ ದುರಂತದಿಂದ ಸರಕಾರ ಪಲಾಯನ ಮಾಡುತ್ತಿಲ್ಲ. ಇತ್ತೀಚೆಗೆ ಪ್ರಯಾಗ್ ರಾಜ್‌ನಲ್ಲಿ ಕಾಲ್ತುಳಿತದಿಂದ 3 ಸಾವಿರ ಜನ ಸತ್ತು ಹೋದರು.‌ಇದನ್ನು ಅಲ್ಲಿನ ಸರಕಾರ ಮುಚ್ಚಿ ಹಾಕುವ ಪ್ರಯತ್ನ ಮಾಡಿತು. ಅದು ಯಾರ ಪ್ರಾಯೋಜಿತ ಕಾರ್ಯಕ್ರಮ? ಬಿಜೆಪಿ, ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳ? ಎಂದು ಅವರು ಎಚ್ ಡಿಕೆಗೆ ತಿರುಗೇಟು ನೀಡಿದರು.

ಇದು ಸಾಂತ್ವನ ಹೇಳುವ ಸಮಯ. ಕುಟುಂಬದ ಸದಸ್ಯರನ್ನು ಕಳೆದುಕೊಂಡಿರುವವರಿಗೆ ನಾವು ಸಾಂತ್ವನ ಹೇಳಬೇಕೆ ಹೊರತು, ರಾಜಕೀಯ ಮಾಡಬಾರದು. ಈ ಚರ್ಚೆಗೆ ಎಲ್ಲರೂ ವಿರಾಮ ಹಾಕಬೇಕು. ಏಕೆಂದರೆ ರಾಜ್ಯದ ಪ್ರಗತಿಯ ಬಗ್ಗೆ, ರಾಜ್ಯಕ್ಕೆ ಆಗಿರುವ ಅನ್ಯಾಯಗಳ ಬಗ್ಗೆ ಚಿಂತನೆ, ಸಲಹೆ ಸೂಚನೆಗಳನ್ನು ನೀಡಬೇಕಾಗುತ್ತದೆ. ರಾಜಕೀಯ ಚಿಂತನೆಯ ಅವಶ್ಯಕತೆಯಿದೆ. ಅದನ್ನು ಬಿಟ್ಟು ಅವರು ರಾಜಿನಾಮೆ ನೀಡಲಿ ಎಂದರೆ? ನಾವು ಸಹ ಪ್ರಧಾನಿ, ಕುಮಾರಸ್ವಾಮಿ ಸೇರಿದಂತೆ ಅವರಿವರ ರಾಜಿನಾಮೆ ನೀಡಲಿ ಎಂದು ಕೇಳಬಹುದು. ನೈತಿಕತೆಯ ಪ್ರಶ್ನೆ ಬಂದಾಗ ಸಾಕಷ್ಟು ವಿಚಾರಗಳನ್ನು ಚರ್ಚೆ ಮಾಡಬಹುದು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯರ ಆಯ್ಕೆ ವಿಚಾರವಾಗಿ ಕಾರ್ಯಕರ್ತರ ಅಸಮಾಧಾನದ ಬಗ್ಗೆ ಕೇಳಿದಾಗ, ನನಗೆ ಇದರ ಬಗ್ಗೆ ಮಾಹಿಯಿಲ್ಲ. ಇದು ಪಕ್ಷದ ವರಿಷ್ಠರ ತೀರ್ಮಾನ. ಮುಖ್ಯಮಂತ್ರಿಗಳ ಆಯ್ಕೆ. ಅವರ ತೀರ್ಮಾನವನ್ನು ಪಕ್ಷ ಸ್ವಾಗತ ಮಾಡುತ್ತದೆ ಎಂದು ತಿಳಿಸಿದರು‌.

ಪ್ರಾಸಿಕ್ಯೂಷನ್ ತನಿಖೆಗೆ ಆಗ್ರಹಿಸಿ ಆಮ್ ಆದ್ಮಿ ಪಕ್ಷ ರಾಜ್ಯಪಾಲರಿಗೆ ಪತ್ರ ಬರೆದಿರುವ ಬಗ್ಗೆ ಕೇಳಿದಾಗ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ವಿಚಾರಗಳನ್ನು ಅಭಿವ್ಯಕ್ತಿಸಲು ಅವಕಾಶವಿದೆ ಎಂದರು.

ಬಿಜೆಪಿ ನಾಯಕರ ಮಂಗಳೂರು ಚಲೋ ಕಾರ್ಯಕ್ರಮದ ಬಗ್ಗೆ ಕೇಳಿದಾಗ, ಆ ಊರಿಗೆ ತನ್ನದೇ ಆದ ಇತಿಹಾಸವಿದೆ. ಇದು ಕರಾವಳಿ ಭಾಗದಲ್ಲಿ ಪ್ರಕ್ಷುಬ್ಧ ವಾತಾವರಣ ಮಾಡುವ ಪ್ರಯತ್ನ. ಯಾವುದೇ ಜನನಾಯಕರು ಸಮಾಜದಲ್ಲಿ ಉತ್ತಮ ವಾತಾವರಣ ಸೃಷ್ಟಿಸಬೇಕು. ಜೊತೆಗೆ ಅಲ್ಲಿನ ಜನರ ಆಶೋತ್ತರಗಳನ್ನು ಈಡೇರಿಸುವ ಕೆಲಸ ಮಾಡಬೇಕು. ರಾಜಕೀಯಕ್ಕಾಗಿ ಭಾವನಾತ್ಮಕವಾಗಿ ಜನರನ್ನು ಎತ್ತಿಕಟ್ಟುವುದು ಸರಿಯಲ್ಲ. ಬಿಜೆಪಿಯ ನಿಲುವುಗಳು ಸಮಾಜದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದರು.

ಈ ಬಗ್ಗೆ ಬಿಜೆಪಿಯವರು ಕೇಂದ್ರ ಸರಕಾರದ ಬಳಿ ಮಾತನಾಡಲಿ. ಬೇರೆ, ಬೇರೆ ರಾಜ್ಯಗಳಲ್ಲಿ ಅವರು ತೆಗೆದುಕೊಳ್ಳುತ್ತಿರುವ ತೀರ್ಮಾನಗಳು, ಅಲ್ಲೊಂದು, ಇಲ್ಲೊಂದು ಮಾತುಗಳು ಜೊತೆಗೆ ಅವರ ನಾಯಕರ ತೀರ್ಮಾನಗಳನ್ನು ಗಮನದಲ್ಲಿ ಇಟ್ಟುಕೊಂಡು ಬಿಜೆಪಿಯವರು ಮುಂದಿನದ್ದನ್ನು ತೀರ್ಮಾನ ಮಾಡಲಿ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News